ADVERTISEMENT

ಕುತೂಹಲ ಹುಟ್ಟಿಸಿದ ಕಯಟ್ಟಂ ಪೋಸ್ಟರ್‌

​ಪ್ರಜಾವಾಣಿ ವಾರ್ತೆ
Published 28 ಮೇ 2020, 3:35 IST
Last Updated 28 ಮೇ 2020, 3:35 IST
ಕಯಟ್ಟಂ ಪೋಸ್ಟರ್‌ನಲ್ಲಿ ಮಂಜು ವಾರಿಯರ್
ಕಯಟ್ಟಂ ಪೋಸ್ಟರ್‌ನಲ್ಲಿ ಮಂಜು ವಾರಿಯರ್   

ಮಲಯಾಳಂನ ಜನಪ್ರಿಯ ನಟಿ ಮಂಜು ವಾರಿಯರ್‌ ಈದ್‌ಸಂದರ್ಭದಲ್ಲಿ ತಮ್ಮ ಹೊಸ ಚಿತ್ರ ‘ಕಯಟ್ಟಂ’ನ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ.

‘ಕಯಟ್ಟಂ’ ಎಂದರೆ ‘ಏರುವುದು’ ಎಂದು ಅರ್ಥ. ಈ ಪದಕ್ಕೂ ಅವರು ಹಿಮದ ಮೇಲೆ ಕುಳಿತಿರುವ ದೃಶ್ಯಕ್ಕೂ ಹೋಲಿಸಿದರೆ, ಇದೊಂದು ಹಿಮಶಿಖರಏರುವ ಚಾರಣಿಗರ ಕಥೆ ಇದ್ದಂತೆ ಕಾಣುತ್ತಿದೆ. ಆದರೆ, ಸಿನಿಮಾ ಕುರಿತು ಯಾವುದೇ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.

ಈ ಸಿನಿಮಾದ ಬಹುತೇಕ ಚಿತ್ರೀಕರಣ ಹಿಮಾಚಲಪ್ರದೇಶದ ಸುತ್ತಮುತ್ತ ಸ್ಥಳಗಳಲ್ಲಿ ನಡೆದಿದೆ. ಹಿಮಪ್ರದೇಶದಲ್ಲಿ ಶೂಟಿಂಗ್ ನಡೆಯುವಾಗ ದಿಢೀರನೆ ಧಾರಾಕಾರ ಮಳೆ ಸುರಿಯಿತು. ಇದರಿಂದ ಪ್ರವಾಹ ಉಂಟಾಯಿತು. ಈ ಸಮಯದಲ್ಲಿ ಮೂವತ್ತು ಸದಸ್ಯರನ್ನೊಳಗೊಂಡ ಚಿತ್ರತಂಡ ಹಳ್ಳಿಯೊಂದರಲ್ಲಿ ಸಿಕ್ಕಿಕೊಂಡಿತು. ಒಂದು ವಾರ ಅದೇ ಹಳ್ಳಿಯಲ್ಲಿ ನೆಲಸಿತ್ತು.

ADVERTISEMENT

ಈ ಸಂದರ್ಭದಲ್ಲಿ ಮಂಜು ವಾರಿಯರ್‌ ಅವರ ಸಹೋದರ ಮಧು ವಾರಿಯರ್,‌ ಟಿ.ವಿ ಚಾನೆಲ್‌ಗಳ ಮೂಲಕ ಸಹೋದರಿ ಹಾಗೂ ತಂಡವನ್ನು ಅಪಾಯದಿಂದ ಪಾರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಬಳಿಕ ಅವರನ್ನು ಮನಾಲಿಗೆ ಸುರಕ್ಷಿತವಾಗಿ ಕರೆತರಲಾಗಿತ್ತು.

‘ಕಯಟ್ಟಂ’ ಸಿನಿಮಾಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದವರು ಸನಲ್‌ ಕುಮಾರ್‌ ಶಶಿಧರನ್‌. ಮಂಜು ವಾರಿಯರ್‌ ಚಿತ್ರಕ್ಕೆ ಬಂಡವಾಳ ಹೂಡಿ, ಸಿನಿಮಾ ನಿರ್ಮಾಪಕಿಯಾಗಿಯೂ ಬಡ್ತಿ ಪಡೆದಿದ್ದಾರೆ. ಇವರೊಂದಿಗೆ ಶಾಜಿ ಮ್ಯಾಥ್ಯೂ ಹಾಗೂ ಅರುಣಾ ಮ್ಯಾಥ್ಯೂ ಕೂಡ ಬಂಡವಾಳ ಹೂಡಿದ್ದಾರೆ.

ಮಂಜು ವಾರಿಯರ್‌ ‘ಮರಕ್ಕಾರ್ ಅರಬಿ‌ ಕಡಲಿಂಟೆ ಸಿಂಹಮ್’, ‘ಜಾಕ್‌ ಆ್ಯಂಡ್‌ ಜಿಲ್‌’, ‘ಚತುರ್ಮುಗಂ’, ಹಾಗೂ ‘ಲಲಿತಂ ಸುಂದರಂ’ ಚಿತ್ರಗಳಲ್ಲೂ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.