ADVERTISEMENT

‘ಕೋಬ್ರಾ’ ಸಿನಿಮಾ: ಕ್ರಿಕೆಟಿಗ ಇರ್ಫಾನ್‌ ಪಠಾಣ್ ಪಾತ್ರ ಬಹಿರಂಗ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 11:49 IST
Last Updated 28 ಜುಲೈ 2020, 11:49 IST
‘ಕೋಬ್ರಾ’ ಚಿತ್ರದಲ್ಲಿ ಇರ್ಫಾನ್‌ ಪಠಾಣ್‌
‘ಕೋಬ್ರಾ’ ಚಿತ್ರದಲ್ಲಿ ಇರ್ಫಾನ್‌ ಪಠಾಣ್‌   

‘ಕೋಬ್ರಾ’ –ಕಾಲಿವುಡ್‌ ನಟ ಚಿಯಾನ್‌ ವಿಕ್ರಮ್‌ ಮತ್ತು ‘ಕೆಜಿಎಫ್‌ ಚಾಪ್ಟರ್‌ 1’ ಚಿತ್ರದ ಖ್ಯಾತಿಯ ಶ್ರೀನಿಧಿ ಶೆಟ್ಟಿ ನಟನೆಯ ಚಿತ್ರ. ಆರ್. ಅಜಯ್ ಜ್ಞಾನಮುತ್ತು ‌ನಿರ್ದೇಶನದ ಈ ಚಿತ್ರದ ‘ತುಂಬಿ ತುಳ್ಳಾಲ್...’ ಹಾಡು ಕಳೆದ ತಿಂಗಳು ಸೋನಿ ಮ್ಯೂಸಿಕ್‌ನಲ್ಲಿ ಬಿಡುಗಡೆಯಾಗಿತ್ತು. ಎ.ಆರ್‌. ರೆಹಮಾನ್ ಸಂಗೀತ ನೀಡಿರುವ ಈ ಹಾಡಿಗೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈಗಾಗಲೇ, ಇದರ ಶೇಕಡ 70ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಲಾಕ್‌ಡೌನ್ ಮುಗಿದ ಬಳಿಕ ಶೂಟಿಂಗ್‌ ಮತ್ತೆ ಶುರುವಾಗುವ ನಿರೀಕ್ಷೆಯಿದೆ. ಇದರಲ್ಲಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದು ಅವರ ಮೊದಲ ಚಿತ್ರವೂ ಹೌದು. ಈಗ ಅವರ ಪಾತ್ರದ ಗುಟ್ಟು ಬಯಲಾಗಿದೆ.

ಇರ್ಫಾನ್‌ ಇಂಟರ್‌ಪೋಲ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಕೋಲ್ಕತ್ತದಲ್ಲಿ ಶೂಟಿಂಗ್‌ ವೇಳೆ ತೆಗೆದಿರುವ ಫೋಟೊಗಳನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೈಯಲ್ಲಿ ಬಾಲ್‌ ಮತ್ತು ಬ್ಯಾಟ್‌ ಹಿಡಿದ ಚಿತ್ರಗಳಲ್ಲಿಯೇ ಇರ್ಫಾನ್‌ ಅವರನ್ನು ನೋಡುತ್ತಿದ್ದ ಅವರ ಅಭಿಮಾನಿಗಳಿಗೆ ಈ ಫೋಟೊ ಸಖತ್‌ ಖುಷಿಕೊಟ್ಟಿದೆ.

ADVERTISEMENT

‘ವಿಕ್ರಮ್‌ ಸಿನಿಮಾ ರಂಗದಲ್ಲಿ ಸಾಕಷ್ಟು ಯಶಸ್ಸುಗಳಿಸಿದ್ದಾರೆ. ಅವರನ್ನು ಸೆಟ್‌ನಲ್ಲಿ ಭೇಟಿಯಾದಾಗ ಖುಷಿಯಾಯಿತು. ನಾವಿಬ್ಬರು ಸೆಟ್‌ನಲ್ಲಿ ಸಾಕಷ್ಟು ಸಮಯ ಕಳೆದಿದ್ದೇವೆ’ ಎಂದು ಈ ಹಿಂದೆ ಇರ್ಫಾನ್‌ ಹೇಳಿದ್ದು ಸುದ್ದಿಯಾಗಿತ್ತು.

ಈ ಚಿತ್ರದಲ್ಲಿ ವಿಕ್ರಮ್‌ ಏಳು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಫೆಬ್ರುವರಿಯಲ್ಲಿಯೇ ಇದರ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿತ್ತು. ಇದರಲ್ಲಿ ಅವರು ಪ್ರಧಾನವಾಗಿ ಛಾಯಾಗ್ರಾಹಕನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ಇಪ್ಪತ್ತು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ.

https://twitter.com/IrfanPathan

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.