ADVERTISEMENT

‘ಜೇಮ್ಸ್‌’ ಜಾತ್ರೆಗೆ ಸಜ್ಜು; ಟಿಕೆಟ್ ಸೋಲ್ಡ್ ಔಟ್!

ಅಪ್ಪು ಅಭಿನಯದ ಕೊನೆಯ ಸಿನಿಮಾಕ್ಕೆ ಗದುಗಿನಲ್ಲಿ ಭರ್ಜರಿ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 4:20 IST
Last Updated 17 ಮಾರ್ಚ್ 2022, 4:20 IST
‘ಜೇಮ್ಸ್‌’ ಸಿನಿಮಾ ತೆರೆಕಾಣುತ್ತಿರುವ ವೆಂಕಟೇಶ್‌ ಚಿತ್ರಮಂದಿರದ ಆವರಣದ ತುಂಬೆಲ್ಲಾ ಅಪ್ಪು ವೈಭವ
‘ಜೇಮ್ಸ್‌’ ಸಿನಿಮಾ ತೆರೆಕಾಣುತ್ತಿರುವ ವೆಂಕಟೇಶ್‌ ಚಿತ್ರಮಂದಿರದ ಆವರಣದ ತುಂಬೆಲ್ಲಾ ಅಪ್ಪು ವೈಭವ   

ಗದಗ: ಮಾರ್ಚ್‌ 17ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಗೊಳ್ಳುತ್ತಿರುವ ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಕೊನೆಯ ಚಿತ್ರ ‘ಜೇಮ್ಸ್‌’ ಸಿನಿಮಾಕ್ಕೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದ ಚಿತ್ರಮಂದಿಗಳಲ್ಲಿ ಚಿತ್ರ ಬಿಡುಗಡೆಗೂ ಮುನ್ನವೇ ಟಿಕೆಟ್‌ಗಳು ಸೋಲ್ಡ್‌ಔಟ್‌ ಆಗಿವೆ!

ಅರ್ಧದಲ್ಲೇ ಸಿನಿರಸಿಕರನ್ನು ತೊರೆದು ಹೋಗಿರುವ ಅಪ್ಪು ಅಭಿಮಾನಿಗಳ ಎದೆಯಲ್ಲಿ ಎಂದೆಂದಿಗೂ ಜೀವಂತವಾಗಿದ್ದಾರೆ. ಹಾಗಾಗಿ, ಅಭಿಮಾನಿಗಳು ‘ಜೇಮ್ಸ್‌‘ ಜಾತ್ರೆಯನ್ನು ಭರ್ಜರಿಯಾಗಿ ಆಚರಿಸಲು ಸಜ್ಜಾಗಿದ್ದು, ಗುರುವಾರ 1001 ಸಸಿಗಳ ವಿತರಣೆ, ಹಾಗೂ 51 ಕೆ.ಜಿ. ಕೇಕ್ ಕತ್ತರಿಸಿ ಜನ್ಮದಿನ ಆಚರಿಸಲು ನಿರ್ಧರಿಸಿದ್ದಾರೆ.

ದೊಡ್ಮನೆ ಹುಡುಗ ಅಪ್ಪು ಅಭಿನಯದ ಕೊನೆಯ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಚಿತ್ರ ಬಿಡುಗಡೆಯಾಗುವ ಮೊದಲ ದಿನವಾದ ಗುರುವಾರದ ಆಟಗಳ ಟಿಕೆಟ್‌ ಖರೀದಿಗೆ ಪ್ರೇಕ್ಷಕರು ಮುಗಿಬಿದ್ದಿದ್ದರು. ಚಿತ್ರ ಬಿಡುಗಡೆ ಆಗುವ ದಿನ ಟಿಕೆಟ್ ಕೊಡುವುದು ಕಷ್ಟ ಎಂಬ ಅರಿವಿದ್ದ ಥಿಯೇಟರ್ ಮಾಲೀಕರು ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದರು. ಅಭಿಮಾನಿಗಳು ಗದುಗಿನ ವೆಂಕಟೇಶ ಥಿಯೇಟರ್ ಮುಂದೆ 45 ಅಡಿ ಎತ್ತರದ ಕಟೌಟ್ ಹಾಕಿ ಅಭಿಮಾನ ಮೆರೆಯಲು ಸಜ್ಜಾಗಿದ್ದಾರೆ.

ADVERTISEMENT

ಗದಗ ನಗರದ ವೆಂಕಟೇಶ್ ಹಾಗೂ ಕೃಷ್ಣ ಚಿತ್ರಮಂದಿರಗಳಲ್ಲಿ ‘ಜೇಮ್ಸ್‌’ ಚಿತ್ರ ಬಿಡುಗಡೆ ಆಗಲಿದ್ದು, ಈ ಎರಡು ಥಿಯೇಟರ್‌ಗಳಲ್ಲಿ ಟಿಕೆಟ್ ಪಡೆಯಲು ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಚಿತ್ರ ಬಿಡುಗಡೆಯ ಮುನ್ನಾ ದಿನವಾದ ಬುಧವಾರವೇ ವೆಂಕಟೇಶ್ ಚಿತ್ರಮಂದಿರದ ಮೊದಲ ಮೂರು ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಇದು ಥಿಯೇಟರ್ ಮಾಲೀಕರ ಹುಬ್ಬೇರುವಂತೆ ಮಾಡಿದೆ. ಗುರುವಾರ ಎರಡು ಥಿಯೇಟರ್‌ನಲ್ಲಿ ಐದು ಶೋಗಳಿರಲಿದ್ದು, ಬೆಳಿಗ್ಗೆ 8.30ಕ್ಕೆ ಮೊದಲ ಶೋ ಆರಂಭಗೊಳ್ಳಲಿದೆ.

‘ಜೇಮ್ಸ್’ ಚಿತ್ರದ ಟಿಕೆಟ್ ಪಡೆಯಲು ಆನ್‌ಲೈನ್ ವ್ಯವಸ್ಥೆ ಮಾಡಲಾಗಿದ್ದು, ಬುಧವಾರವೇ ಮೊದಲ ಮೂರು ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಸಿನಿಮಾ ಬಿಡುಗಡೆಗೂ ಮುನ್ನ ಯಾವ ನಾಯಕರ ಸಿನಿಮಾಕ್ಕೂ ಇಷ್ಟೊಂದು ಪ್ರತಿಕ್ರಿಯೆ ಸಿಕ್ಕಿರುವುದನ್ನು ನೋಡಿರಲಿಲ್ಲ’ ಎಂದು ವೆಂಕಟೇಶ್‌ ಚಿತ್ರಮಂದಿರ ರವಿ ನೀರಲಕಟ್ಟಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಅಪ್ಪು ಅಮರ’– ಅಭಿಮಾನಿ ಬಳಗ ಸಜ್ಜು

ಪುನೀತ್ ರಾಜ್‌ಕುಮಾರ್ ಅವರ 47ನೇ ಜನ್ಮದಿನಾಚರಣೆ ಹಾಗೂ ‘ಜೇಮ್ಸ್’ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ನಗರದ ವೆಂಕಟೇಶ್ ಚಿತ್ರಮಂದಿರದಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನರ ಸಮ್ಮುಖದಲ್ಲಿ ಅಪ್ಪು ಹೆಸರಿನಲ್ಲಿ 1001 ಸಸಿಗಳನ್ನು ವಿತರಿಸಲಾಗುವುದು.

ಇದೇ ಸಂದರ್ಭದಲ್ಲಿ 11 ಮಂದಿ ಯೋಧರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೇ 51 ಕೆ.ಜಿ. ತೂಕದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಲಾಗುವುದು.

ಅಪ್ಪು ಅವರಿಗೆ ಬಿರಿಯಾನಿ ಅಂದರೆ ಪಂಚಪ್ರಾಣ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗವು ಚಿಕನ್ ಹಾಗೂ ಮಟನ್ ಬಿರಿಯಾನಿ ವಿತರಿಸಲಿದ್ದಾರೆ. ಇವೆಲ್ಲದರ ಜತೆಗೆ ರಕ್ತದಾನ, ನೇತ್ರದಾನ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಅಪ್ಪುರವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚಚರಿಸಲು ಅವರ ಅಭಿಮಾನಿ ಬಳಗ ಸಜ್ಜಾಗಿದೆ.

ಅಪ್ಪು ಜನ್ಮದಿನವಾದ ಮಾರ್ಚ್‌ 17ನ್ನು ರಾಜ್ಯ ಸರ್ಕಾರ ಡಾ.ಪುನೀತ್ ರಾಜ್‌ಕುಮಾರ್ ಅವರ ಜಯಂತಿಯನ್ನಾಗಿ ಆಚರಿಸಬೇಕು. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಮಂಜು ಕೊಟ್ಟೂರ, ಅಭಿಮಾನಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.