ADVERTISEMENT

ಮತ್ತೆ ನಟನೆಯತ್ತ ಜೆನಿಲಿಯ ಚಿತ್ತ?

​ಪ್ರಜಾವಾಣಿ ವಾರ್ತೆ
Published 20 ಮೇ 2020, 19:30 IST
Last Updated 20 ಮೇ 2020, 19:30 IST
ಜೆನಿಲಿಯ ದೇಶಮುಖ್ ಡಿಸೋಜಾ
ಜೆನಿಲಿಯ ದೇಶಮುಖ್ ಡಿಸೋಜಾ   

ಮಾಲಿವುಡ್‌ನ ‘ಸೂಪರ್‌ಸ್ಟಾರ್’ ಮೋಹನ್‌ಲಾಲ್ ಅಭಿನಯದ ‘ಲೂಸಿಫರ್’ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಇದರಲ್ಲಿ ‘ಮೆಗಾಸ್ಟಾರ್’ ಚಿರಂಜೀವಿ ನಾಯಕನಾಗಿ ನಟಿಸಲಿದ್ದಾರೆ. ‘ಸಾಹೋ’ ಚಿತ್ರದ ಖ್ಯಾತಿಯ ಸುಜಿತ್ ಇದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮಲಯಾಳದಲ್ಲಿ ‘ಲೂಸಿಫರ್’ ಚಿತ್ರ ನಿರ್ದೇಶಿಸಿದ್ದು, ಪ್ರಥ್ವಿರಾಜ್ ಸುಕುಮಾರನ್.

ಈಗ ಇವೆಲ್ಲ ಹಳೆಯ ವಿಷಯವಾದರೂ ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಆಸಕ್ತಿದಾಯಕ ಸುದ್ದಿಯೊಂದು ಹೊರ ಬಿದ್ದಿದೆ. ಅದೇನೆಂದರೆ ಜೆನಿಲಿಯ ದೇಶಮುಖ್ ಡಿಸೋಜಾ ಮತ್ತೆ ಟಾಲಿವುಡ್‌ಗೆ ಮರಳಲಿದ್ದಾರೆ. ಹೌದು, ‘ಬೊಮ್ಮರಿಲು’ ಖ್ಯಾತಿಯ ಜೆನಿಲಿಯ ‘ಲೂಸಿಫರ್’ ರಿಮೇಕ್‌ನಲ್ಲಿ ನಾಯಕಿಯಾಗಿ ನಟಿಸಲಿದ್ದಾರಂತೆ.

ಹಿಂದಿ, ತೆಲುಗು, ತಮಿಳು, ಮರಾಠಿ ಹಾಗೂ ಕನ್ನಡದ ‘ಸತ್ಯ ಇನ್ ಲವ್’ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ನಟನೆಯ ಜೊತೆಗೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದ ಆಕೆ 2018ರಲ್ಲಿ ‘ಮೌಲಿ’ ಎಂಬ ಮರಾಠಿ ಚಿತ್ರ ನಿರ್ಮಿಸಿ ನಿರ್ಮಾಪಕಿಯಾಗಿಯೂ ಬಡ್ತಿ ಹೊಂದಿದ್ದರು. ಜೊತೆಗೆ, ಇದರಲ್ಲಿ ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು.ಆ ನಂತರ ನಟನೆಗೆ ಬ್ರೇಕ್ ಹಾಕಿದ್ದ ಅವರು, ಈಗ ರಿಮೇಕ್ ಮೂಲಕ ಮತ್ತೆ ಬೆಳ್ಳಿತೆರೆಯಲ್ಲಿ ದ್ವಿತೀಯ ಇನ್ನಿಂಗ್‌ಗೆ ಸಜ್ಜಾಗುತ್ತಿದ್ದಾರಂತೆ.

ADVERTISEMENT

‘ಬೊಮ್ಮರಿಲು’, ‘ಢಿ’ ಹಾಗೂ ‘ರೆಡಿ’ ಮುಂತಾದ ಸೂಪರ್ ‌ಹಿಟ್‌ ಸಿನಿಮಾಗಳ ಮೂಲಕ ಜೆನಿಲಿಯ ಟಾಲಿವುಡ್‌ನಲ್ಲಿ ಟಾಪ್‌ ಹೀರೊಯಿನ್‌ಗಳ ಪಟ್ಟಿಯಲ್ಲಿದ್ದರು. ಆಕೆ ತೆಲುಗಿನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡ ಚಿತ್ರ ‘ನಾ ಇಷ್ಟಂ’.

ಮೂಲಗಳ ಪ್ರಕಾರ ಜೆನಿಲಿಯ, ಚಿರಂಜೀವಿ ಜೊತೆಗೆ ತೆರೆ ಹಂಚಿಕೊಳ್ಳುವುದು ಪಕ್ಕಾ ಆಗಿದೆ. ಎಲ್ಲವೂ ಸರಿಯಾಗಿ ನಡೆದರೆ ಈ ಚಿತ್ರದ ಮೂಲಕ ಜೆನಿಲಿಯ ತೆಲುಗು ಸಿನಿರಂಗಕ್ಕೆ ರೀ ಎಂಟ್ರಿ ಕೊಡಲಿದ್ದಾರೆ. ಸದ್ಯ ಚಿರಂಜೀವಿ ‘ಆಚಾರ್ಯ’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದು ಮುಗಿದ ಕೂಡಲೇ ‘ಲೂಸಿಫರ್’ ರಿಮೇಕ್‌ ಶೂಟಿಂಗ್‌ ಶುರುವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.