ADVERTISEMENT

ಬಾಲಿವುಡ್‌ ನಟಿ ಜಿಯಾ ಖಾನ್‌ ಆತ್ಮಹತ್ಯೆ: ಸಿಬಿಐ ವಿಶೇಷ ನ್ಯಾಯಾಲಯದಿಂದ ವಿಚಾರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2021, 11:55 IST
Last Updated 30 ಜುಲೈ 2021, 11:55 IST
ಬಾಲಿವುಡ್‌ ನಟಿ ಜಿಯಾ ಖಾನ್
ಬಾಲಿವುಡ್‌ ನಟಿ ಜಿಯಾ ಖಾನ್   

ಮುಂಬೈ: ಬಾಲಿವುಡ್‌ ನಟಿ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡು ಎಂಟು ವರ್ಷಗಳು ಕಳೆದ ಬಳಿಕ, ಈ ಪ್ರಕರಣದ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.

ಜಿಯಾ ಖಾನ್‌ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ಸೂರಜ್ ಪಾಂಚೋಲಿ ವಿರುದ್ಧದ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯ ನಡೆಸುತ್ತಿತ್ತು. ಇದೀಗ ಈ ಪ್ರಕರಣದ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

ಬಾಲಿವುಡ್‌ನಲ್ಲಿ ಕಾಲೂರಲು ಯತ್ನಸುತ್ತಿರುವಾಗಲೇ ನಟ ಆದಿತ್ಯ ಪಂಚೋಲಿ ಪುತ್ರ ಸೂರಜ್‌ ಜತೆ ಜಿಯಾ ಖಾನ್‌ ಡೇಟಿಂಗ್‌ ಮಾಡುತ್ತಿದ್ದರು. ಜಿಯಾ ಅವರ ಪ್ರೀತಿಯೇ ಕಡೆಗೆ ಅವರ ಜೀವಕ್ಕೆ ಪಾಷವಾಗಿ ಪರಿಣಮಿಸಿತ್ತು. 2013ರ ಜೂನ್‌ನಲ್ಲಿ ಮುಂಬೈನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿತ್ತು. ಮೊದಲು ಜಿಯಾ ಅವರದ್ದು ಆತ್ಮಹತ್ಯೆ ಎನ್ನಲಾಗುತ್ತಿದ್ದಾದರೂ, ಆಕೆಯನ್ನು ಸೂರಜ್ ಕೊಲೆ ಮಾಡಿದ್ದಾರೆ ಎಂದು ಜಿಯಾ ತಾಯಿ ಆರೋಪಿಸಿದ್ದರು. ಇದರಿಂದಾಗಿ ಆಗ ಸೂರಜ್‌ ಜೈಲಿಗೂ ಹೋಗಿ ಜಾಮೀನಿನ ಮೇಲೆ ಹೊರ ಬಂದಿದ್ದರು.

ADVERTISEMENT

ನಂತರ ಜಿಯಾ ಸಾವಿನ ಪ್ರಕರಣದಲ್ಲಿ ಸೂರಜ್‌ ಪಾತ್ರ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಆದರೆ ನ್ಯಾಯಾಲಯದ ನಿರ್ಧಾರದಿಂದ ಬೇಸರಗೊಂಡಿದ್ದ ಜಿಯಾ ತಾಯಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ನಂತರ ಹೈಕೋರ್ಟ್‌ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವಂತೆ ಆದೇಶ ನೀಡಿತ್ತು. ಅದರಂತೆ ಈಗ ಸಿಬಿಐ ಪ್ರಕರಣದ ತನಿಖೆ ನಡೆಸಿದೆ. ಸಾವನ್ನಪ್ಪಿದ್ದಾಗ ಆಕೆಗೆ ಇನ್ನೂ 25 ವರ್ಷ ವಯಸ್ಸಾಗಿತ್ತು.

ಬಾಲ ನಟಿಯಾಗಿ ‘ದಿಲ್‌ ಸೆ’ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಯಗೊಂಡ ಜಿಯಾ ಬ್ರಿಟಿಷ್‌ ಅಮೆರಿಕನ್‌ ಪ್ರಜೆ. ರೂಪದರ್ಶಿ ಹಾಗೂ ನೃತ್ಯಗಾರ್ತಿಯಾಗಿದ್ದ ಅವರು ರಾಮ್‌ಗೋಪಾಲ್‌ ವರ್ಮಾ ಅವರ ‘ನಿಶ್ಶಬ್ದ್‌’ ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತವಾಗಿದ್ದರು. ಈ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಅವರೊಂದಿಗೆ ಅಭಿನಯಿಸಿದ್ದ ಜಿಯಾ, ನಂತರ ಅಮೀರ್‌ ಖಾನ್‌ ಅಭಿನಯದ ‘ಗಜನಿ’, ಸಾಜಿದ್‌ ಖಾನ್‌ ಅವರ ‘ಹೌಸ್‌ ಫುಲ್‌’ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.