ADVERTISEMENT

Sandalwood | ಪೈಂಟರ್‌ ವೃತ್ತಿಯಿಂದ ನಿರ್ದೇಶನದವರೆಗೆ: ಜೆ.ಪಿ.ತುಮಿನಾಡು ಸಂದರ್ಶನ

ಅಭಿಲಾಷ್ ಪಿ.ಎಸ್‌.
Published 24 ಜುಲೈ 2025, 23:30 IST
Last Updated 24 ಜುಲೈ 2025, 23:30 IST
<div class="paragraphs"><p>ಜೆ.ಪಿ.ತುಮಿನಾಡು</p></div>

ಜೆ.ಪಿ.ತುಮಿನಾಡು

   
ರಾಜ್‌ ಬಿ.ಶೆಟ್ಟಿ ತಮ್ಮ ಲೈಟರ್‌ ಬುದ್ಧ ಫಿಲಂಸ್‌ನಡಿ ನಿರ್ಮಾಣ ಮಾಡಿರುವ ‘ಸು ಫ್ರಂ ಸೋ’ (ಸುಲೋಚನಾ ಫ್ರಂ ಸೋಮೇಶ್ವರ) ಸಿನಿಮಾದ ಸಾರಥಿ ಜೆ.ಪಿ.ತುಮಿನಾಡು. ತುಳು ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಹೆಜ್ಜೆ ಇಟ್ಟ ಇವರು ರಾಜ್‌ ಬಿ.ಶೆಟ್ಟಿ ಅವರ ತಂಡದಲ್ಲೇ ಗುರುತಿಸಿಕೊಂಡವರು. ‘ಸು ಫ್ರಂ ಸೋ’ನಲ್ಲಿ ನಿರ್ದೇಶನದ ಜೊತೆಗೆ ನಟನೆಯ ಅನುಭವವನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ...

ನಿಮ್ಮ ಹಿನ್ನೆಲೆ...

ನಾನು ಮಂಗಳೂರಿಗೆ ಹತ್ತಿರವಿರುವ ತುಮಿನಾಡು ಊರಿನವನು. ಇದು ಕರ್ನಾಟಕ–ಕೇರಳ ಗಡಿ ಭಾಗ. ಒಂಬತ್ತನೇ ತರಗತಿಯವರೆಗೆ ಕಲಿತ ನಾನು ಪೈಂಟರ್‌ ಆಗಿ ಕೆಲಸ ಮಾಡುತ್ತಿದ್ದೆ. ನಮ್ಮ ಊರಿನಲ್ಲಿ ಮಹಾಕಾಳಿ ಭಜನಾ ಮಂದಿರವಿದೆ. ನವರಾತ್ರಿಗೆ ನಡೆಯುವ ಕಾರ್ಯಕ್ರಮದಲ್ಲಿ ಹಾಸ್ಯ ಪ್ರಹಸನ, ಹಾಸ್ಯಮಯ ನಾಟಕಗಳನ್ನು ಮಾಡುತ್ತಿದ್ದೆ. ನಟ ಪ್ರಕಾಶ್‌ ತುಮಿನಾಡು ಹಾಗೂ ನಾನು ಒಂದೇ ಊರಿನವರು. ನನ್ನ ನಟನೆಯನ್ನು ನೋಡಿ ಪ್ರಕಾಶಣ್ಣ ಅವರ ‘ಶಾರದಾ ಆರ್ಟ್ಸ್‌ ಮಂಜೇಶ್ವರ’ ತಂಡಕ್ಕೆ ಸೇರಿಸಿಕೊಂಡರು. ಇಲ್ಲಿ ಬಂದ ಬಳಿಕ ನಾನು ನಾಟಕಗಳನ್ನು ಬರೆಯಲು ಆರಂಭಿಸಿದೆ. ‘ನನ ದುಂಬು’, ‘ಉತ್ತರ ಕೊರ್ಲೆ’, ‘ಬಂಜಿಗ್‌ ಹಾಕೊಡ್ಚಿ’, ‘ಕೈ ಪತ್ತಿನಾರ್‌’, ‘ಕಥೆ ಎಡ್ಡೆಂಡು’... ಹೀಗೆ ಹಲವು ನಾಟಕಗಳನ್ನು ಬರೆದು ನಿರ್ದೇಶಿಸಿದೆ. ‘ಕಥೆ ಎಡ್ಡೆಂಡು’ ಈಗಲೂ ಓಡುತ್ತಿರುವ ನಾಟಕ. 

ADVERTISEMENT

ಸಿನಿಮಾ ನಂಟು ಪ್ರಾರಂಭವಾಗಿದ್ದು ಹೇಗೆ?

ರಾಜ್‌ ಬಿ.ಶೆಟ್ಟಿ ಅವರು ತುಳು ಸಿನಿಮಾ ಮಾಡಲು ಯೋಜನೆ ರೂಪಿಸಿದ್ದರು. ರಾಜ್‌ ಅವರ ಸ್ನೇಹಿತರೊಬ್ಬರ ಊರಿನಲ್ಲಿ ನನ್ನ ನಾಟಕ ನಡೆದಿತ್ತು. ಇದನ್ನು ಅವರು ನೋಡಿದ್ದರು. ತಮ್ಮ ಸಿನಿಮಾದಲ್ಲಿ ಪ್ರಕಾಶ್‌ ತುಮಿನಾಡು ಅವರಿಗೆ ಒಂದು ಪಾತ್ರವನ್ನು ಆಫರ್‌ ಮಾಡಿದ್ದರು. ಒಂದೇ ಊರಿನವರಾಗಿದ್ದ ಕಾರಣ ಪ್ರಕಾಶಣ್ಣನ ಜೊತೆ ನಾನೂ ಹೋಗಿದ್ದೆ. ಹೀಗೆ ಒಂದು ಪಾತ್ರ ನನಗೂ ದೊರೆಯಿತು. ಕಾರಣಾಂತರಗಳಿಂದ ಆ ತುಳು ಸಿನಿಮಾ ಆಗಲಿಲ್ಲ. ಬದಲಾಗಿ ರಾಜ್‌ ಅವರ ಜೊತೆ ನಮ್ಮ ನಂಟು ಗಟ್ಟಿಯಾಗುತ್ತಾ ಸಾಗಿತು. ‘ಒಂದು ಮೊಟ್ಟೆಯ ಕಥೆ’ ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಜ್ಜೆ ಇಟ್ಟೆ. ಬಳಿಕ ‘ಗರುಡ ಗಮನ ವೃಷಭ ವಾಹನ’, ‘ಕಥಾಸಂಗಮ’, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳಲ್ಲಿ ನಟಿಸಿದೆ. 

ಸಿನಿ ಪಯಣಕ್ಕೆ ದೊಡ್ಡ ತಿರುವು ನೀಡಿದ್ದು ‘ಸಪ್ತ ಸಾಗರದಾಚೆ ಎಲ್ಲೋ’ ಅಲ್ಲವೇ? 

ಖಂಡಿತಾ ಹೌದು. ರಾಜ್‌ ಬಿ.ಶೆಟ್ಟಿ ಅವರೇ ಈ ಪಾತ್ರಕ್ಕೆ ನನ್ನನ್ನು ಶಿಫಾರಸು ಮಾಡಿದ್ದರು. ಈ ಪಾತ್ರದಿಂದಲೇ ಜನರು ಈಗ ನನ್ನನ್ನು ಗುರುತಿಸುತ್ತಿದ್ದಾರೆ. ಹೆಚ್ಚಿನ ತೆರೆ ಅವಧಿ ಈ ಪಾತ್ರಕ್ಕಿತ್ತು.

ನಟನೆಯ ಅನುಭವ ಇರುವ ಕಾರಣ ಮುಂದೆ ಒಳ್ಳೆಯ ಪಾತ್ರಗಳು ಬಂದರೆ ನಟನೆಯಲ್ಲಿ ಮುಂದುವರಿಯುತ್ತೇನೆ. ಒಳ್ಳೊಳ್ಳೆಯ ನಿರ್ದೇಶಕರ ಕಥೆಗಳಲ್ಲಿ ಭಾಗವಾಗುವ ಆಸೆಯಿದೆ. ಜೊತೆಗೆ ಕಥೆ ಹೇಳಿ ಜನರಿಗೆ ಮನರಂಜನೆ ನೀಡಬೇಕು ಎನ್ನುವ ತುಡಿತವೂ ಅಷ್ಟೇ ಇದೆ. 

ನಿರ್ದೇಶಕನಾಗಿದ್ದು ಹೇಗೆ? 

ನಾಟಕಗಳನ್ನು ನಿರ್ದೇಶಿಸುತ್ತಿರುವಾಗಲೇ ಸಿನಿಮಾ ಮಾಡಬೇಕು ಎನ್ನುವ ಹುಚ್ಚು ಇತ್ತು. ಈ ನಿಟ್ಟಿನಲ್ಲಿ ಹಲವು ಕಥೆಗಳನ್ನು ಮಾಡಿಟ್ಟುಕೊಂಡಿದ್ದೆ. ಆದರೆ ರಾಜ್‌ ಬಿ.ಶೆಟ್ಟಿ ಅವರನ್ನು ಭೇಟಿಯಾದ ಬಳಿಕ ನನ್ನ ಆಲೋಚನೆಗಳೆಲ್ಲವೂ ಬದಲಾದವು. ಒಂದು ಕಥೆಯನ್ನು ನೋಡುವ ದೃಷ್ಟಿಕೋನ, ಅದನ್ನು ಸೆರೆ ಹಿಡಿಯುವ ಮಾದರಿ ಎಲ್ಲವನ್ನೂ ಅವರಿಂದ ಕಲಿತೆ. ಆರೇಳು ವರ್ಷಗಳ ಮುಂಚೆ ಸಿನಿಮಾ ಕಥೆ ಬರೆಯಿರಿ ಎಂದು ರಾಜ್‌ ಬಿ.ಶೆಟ್ಟಿ ಅವರು ಹೇಳಿದ್ದರು. ಆಗೊಂದು ಕಥೆ ಬರೆದು ಅರ್ಧಕ್ಕೆ ಬಿಟ್ಟಿದ್ದೆ. ಬಳಿಕ ‘ಸು ಫ್ರಂ ಸೋ’ ಸಿನಿಮಾದ ಒನ್‌ ಲೈನ್‌ ಹೇಳಿದ್ದೆ. ನಮ್ಮೂರಿನಲ್ಲೇ ನೋಡಿದ್ದ ವ್ಯಕ್ತಿಯನ್ನು ಪಾತ್ರವಾಗಿಟ್ಟುಕೊಂಡು ಕಥೆ ವಿವರಿಸಿದ್ದೆ. ಇದು ಒಪ್ಪಿಗೆಯಾಗಿ ಇದೀಗ ಸಿನಿಮಾವಾಗಿದೆ. ನಾನು ನಿರ್ದೇಶಕನಾಗಬೇಕೆಂದೇ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದೆ. ಇದಕ್ಕೆ ರಾಜ್‌ ಅವರ ಬೆಂಬಲವೂ ಇತ್ತು. ಈ ನಡುವೆ ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ನಟನೆಯ ಜೊತೆಗೆ ‘ಸು ಫ್ರಂ ಸೋ’ ಕೆಲಸವನ್ನು ಮುಂದುವರಿಸಿಕೊಂಡು ಬಂದೆ.  

ನಿರ್ದೇಶನದ ಜೊತೆಗೆ ನಟನೆಯ ಸವಾಲು ಹೇಗಿತ್ತು?

‘ಸು ಫ್ರಂ ಸೋ’ಗೆ ನಿರ್ದೇಶನದ ಯೋಚನೆಯಷ್ಟೇ ಇತ್ತು. ನಾನು ಈಗ ನಿಭಾಯಿಸಿದ ‘ಅಶೋಕ’ ಪಾತ್ರಕ್ಕೆ ಬೇರೆಯವರ ಹುಡುಕಾಟದಲ್ಲಿದ್ದೆ. ಕಥೆಯನ್ನು ತಂಡಕ್ಕೆ ವಿವರಿಸುತ್ತಿದ್ದಾಗ ‘ಅಶೋಕ’ನ ಪಾತ್ರವನ್ನು ನೀವೇ ಮಾಡಿ ಎಂದು ರಾಜ್‌ ಅವರು ತಿಳಿಸಿದರು. ತಂಡವೂ ಒತ್ತಾಯಿಸಿತು. ನಿರ್ದೇಶನದ ಜೊತೆಗೆ ನಟನೆ ಯಾವತ್ತಿಗೂ ಸವಾಲೇ. ಒಬ್ಬ ನಿರ್ದೇಶಕನಿಗೆ, ಬರಹಗಾರಿಗೆ ಏನು ಬೇಕು ಎನ್ನುವುದು ನಮ್ಮ ನಿರ್ಮಾಪಕ ರಾಜ್‌ ಬಿ.ಶೆಟ್ಟಿ ಅವರಿಗೆ ತಿಳಿದಿದೆ. ಅವರಿಗೆ ಸಾವಿರ ತಲೆನೋವು ಇದ್ದರೂ ಅದನ್ನು ತೋರ್ಪಡಿಸದೆ, ಮನೆಯಲ್ಲಿ ಮಕ್ಕಳನ್ನು ಸಲಹುವ ಹಿರಿಯರಂತೆ ಇದ್ದರು. ಇದು ನನ್ನ ನಿರ್ದೇಶನದ ಒತ್ತಡವನ್ನು ಕಡಿಮೆಗೊಳಿಸಿತ್ತು. 

ಹೊಸ ಪ್ರಚಾರ ತಂತ್ರದ ಉದ್ದೇಶವೇನು?

ನಮ್ಮ ತಂಡ ಹೊಸತಾದರೂ ನಟರು ಅನುಭವ ಉಳ್ಳವರು. ಜೊತೆಗೆ ರಾಜ್‌ ಬಿ.ಶೆಟ್ಟಿ ಅವರ ಲೈಟರ್‌ ಬುದ್ಧ ಫಿಲ್ಮ್ಸ್ಎಂಬ ನಿರ್ಮಾಣ ಸಂಸ್ಥೆಯ ಬೆಂಬಲವಿದೆ. ನಾವು ತಂಡವಾಗಿ ಈ ಪ್ರಚಾರ ಯೋಜನೆ ರೂಪಿಸಿದೆವು. ಸೆಲಿಬ್ರಿಟಿ ಶೋಗಳನ್ನು ಆಯೋಜಿಸಿ ಸೆಲಿಬ್ರಿಟಿಗಳು ಸಿನಿಮಾವನ್ನು ಹೊಗಳುವುದು ಸಾಮಾನ್ಯವಾಗಿದೆ. ಸಿನಿಮಾ ಒಳ್ಳೆದಿಲ್ಲದಿದ್ದರೂ ಹೊಗಳುತ್ತಾರೆ ಎಂದು ಜನರಿಗೂ ಅರಿವಾಗಿದೆ. ಹೀಗಾಗಿ ನಾವು ಜನರೇ ಸಿನಿಮಾ ಬಗ್ಗೆ ಮಾತನಾಡಲಿ ಎಂದು ಹೊಸ ಮಾದರಿ ಅನುಸರಿಸಿದೆವು. ಮಂಗಳೂರು ಶಿವಮೊಗ್ಗ ಮೈಸೂರು ಹಾಗೂ ಬೆಂಗಳೂರಿನಲ್ಲಿ ಪೈಯ್ಡ್‌ ಪ್ರೀಮಿಯರ್‌ ಆಯೋಜಿಸಿದೆವು. ಮೈಸೂರಿನಲ್ಲಿ ಎರಡು ಶೋಗಳು ಹೌಸ್‌ಫುಲ್‌ ಆಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.