ADVERTISEMENT

ಭೂಕಂಪ ಪೀಡಿತ ಜಪಾನ್‌ನಿಂದ ಭಾರತಕ್ಕೆ ಹಿಂದಿರುಗಿದ ಜೂ. ಎನ್‌ಟಿಆರ್ ಹೇಳಿದ್ದೇನು?

ಪಿಟಿಐ
Published 2 ಜನವರಿ 2024, 6:44 IST
Last Updated 2 ಜನವರಿ 2024, 6:44 IST
   

ಹೈದರಾಬಾದ್: ‘ಆರ್‌ಆರ್‌ಆರ್‌’ ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರು, ಭೂಕಂಪ ಸಂಭವಿಸಿರುವ ಜಪಾನ್‌ನಿಂದ ಮಂಗಳವಾರ ಬೆಳಿಗ್ಗೆ ಭಾರತಕ್ಕೆ ಹಿಂದಿರುಗಿದ್ದಾರೆ. ಸರಣಿ ಭೂಕಂಪ ಸಂಭವಿಸಿರುವ ಜಪಾನ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಅವರು ಹೇಳಿದ್ದಾರೆ.

ಸೋಮವಾರ ಜಪಾನ್‌ನ ಪಶ್ಚಿಮ ಭಾಗದಲ್ಲಿ ಭೂಕಂಪ ಸಂಭವಿಸಿದೆ. ಅವಘಡದಲ್ಲಿ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದಾರೆ. ಕಟ್ಟಡಗಳು, ವಾಹನಗಳು ಮತ್ತು ದೋಣಿಗಳಿಗೆ ಹಾನಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಮತ್ತಷ್ಟು ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆ ಇದ್ದು, ಅಲ್ಲಿನ ಜನರಿಗೆ ತಮ್ಮ ಮನೆಗಳಿಂದ ಹೊರಗಿರುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

‘ಜಪಾನ್‌ನಿಂದ ಇಂದು ಮನೆಗೆ ಹಿಂದಿರುಗಿದೆ. ಅಲ್ಲಿ ಭೂಕಂಪ ಸಂಭವಿಸಿರುವುದರಿಂದ ಬಹಳ ಆಘಾತಕ್ಕೊಳಗಾಗಿದ್ದೇನೆ. ಕಳೆದ ವಾರ ಪೂರ್ತಿಅಲ್ಲಿಯೇ ಕಳೆದಿದ್ದೇನೆ. ಭೂಕಂಪದಿಂದ ಸಂಕಷ್ಟಕ್ಕೀಡಾಗಿರುವ ಪ್ರತಿಯೊಬ್ಬರಿಗೂ ನನ್ನ ಹೃದಯ ಮಿಡಿಯುತ್ತಿದೆ. ಅಲ್ಲಿನ ಜನರ ಔದಾರ್ಯಕ್ಕೆ ಕೃತಜ್ಞನಾಗಿದ್ದೇನೆ. ಜಪಾನ್ ಶೀಘ್ರವಾಗಿ ಚೇತರಿಸಿಕೊಳ್ಳಲು ಆಶಿಸುತ್ತೇನೆ’ ಎಂದು ಜೂನಿಯರ್ ಎನ್‌ಟಿಆರ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ‘ಆರ್‌ಆರ್‌ಆರ್‌’ ಚಿತ್ರವು ಜಪಾನ್‌ನಲ್ಲಿ ಸುಮಾರು ₹24.13 ಕೋಟಿ ಗಳಿಕೆ ಕಂಡಿತ್ತು.

ಸೋಮವಾರ, ಸಂಭವಿಸಿದ ಭೂಕಂಪವು ಅತ್ಯಂತ ಪ್ರಬಲವಾಗಿದ್ದು, ರಿಕ್ಟರ್ ಮಾಪಕದಲ್ಲಿ 7.6ರಷ್ಟು ತೀವ್ರತೆ ದಾಖಲಾಗಿದೆ. ಜಪಾನ್‌ನ ಮುಖ್ಯ ದ್ವೀಪವಾದ ಹೊನ್‌ಶುವಿನ ಪಶ್ಚಿಮ ಕರಾವಳಿಯಲ್ಲಿ ಕಟ್ಟಡಗಳು ಕುಸಿದಿವೆ.

ವಾಜಿಮಾ ನಗರದಲ್ಲಿ ಎಂಟು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ, ಮನೆಗಳಿಗೆ ಆಗಿರುವ ಹಾನಿ ಬಹಳ ದೊಡ್ಡದಾಗಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.