ADVERTISEMENT

ಹಾಲಿವುಡ್ : ಬರುತ್ತಿದೆ ಮತ್ತೊಂದು ಜುಮಾಂಜಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 19:30 IST
Last Updated 2 ಡಿಸೆಂಬರ್ 2019, 19:30 IST
‘ಜುಮಾಂಜಿ’ ನೆಕ್ಸ್ಟ್‌ ಲೆವೆಲ್‌ನಲ್ಲಿ ಡ್ವೇನ್‌ ಜಾನ್ಸನ್‌, ಜಾಕ್‌ ಬ್ಲಾಕ್‌
‘ಜುಮಾಂಜಿ’ ನೆಕ್ಸ್ಟ್‌ ಲೆವೆಲ್‌ನಲ್ಲಿ ಡ್ವೇನ್‌ ಜಾನ್ಸನ್‌, ಜಾಕ್‌ ಬ್ಲಾಕ್‌   

1990ರ ದಶಕದಲ್ಲಿ ಬಿಡುಗಡೆಯಾಗಿದ್ದ ‘ಜುಮಾಂಜಿ’ ಇಂಗ್ಲಿಷ್‌ ಚಿತ್ರದ ಮೈ ನವಿರೇಳಿಸುವ ದೃಶ್ಯಗಳು ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ತಂದು ಕುಳ್ಳಿರಿಸಿತ್ತು. ‘ಜುಮಾಂಜಿ’ ಒಂದು ಬಗೆಯ ಪಗಡೆಯನ್ನು ಹೋಲುವ ಆಟ. ಒಮ್ಮೆ ಆಟ ಶುರು ಮಾಡಿದರೆ ಮುಗಿಯಿತು. ಅದು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಯಾರಿಗೂ ಊಹಿಸಲು ಸಾಧ್ಯವಿಲ್ಲ. ಆಟ ಮುಗಿಯುವವರೆಗೂ ಅರ್ಧಕ್ಕೆ ಬಿಡುವಂತಿಲ್ಲ. ಇದು ‘ಜುಮಾಂಜಿ’ ಆಟದ ನಿಯಮ.

ಪಗಡೆ ರೀತಿ ದಾಳ ಉರುಳಿಸಿದರೆ ಅದು ಆಟಗಾರರನ್ನು ಭೂತ ಅಥವಾ ಭವಿಷ್ಯತ್ ಕಾಲಕ್ಕೆ ಕೊಂಡೊಯ್ಯುತ್ತದೆ. ಅವರೊಂದಿಗೆ ಪ್ರೇಕ್ಷಕರಿಗೂ ಹಿಂದಿನ ಕಾಲಕ್ಕೆ ತೆರಳಿದ ಅನುಭವವಾಗುತ್ತದೆ. ಕೊನೆಯವರೆಗೂ ಮುಂದೆ ಏನಾಗಬಹುದು ಎಂಬ ಕುತೂಹಲದಲ್ಲಿಯೇ ಚಿತ್ರ ಮುಗಿಯುತ್ತದೆ.

ಬಹಳ ವರ್ಷಗಳ ನಂತರ ಇಂತಹ ಮತ್ತೊಂದು ಚಿತ್ರ ಮಕ್ಕಳನ್ನು ರಂಜಿಸಲು ಬರುತ್ತಿದೆ. ಸೋನಿ ಪಿಕ್ಚರ್ಸ್‌ ನಿರ್ಮಿಸಿರುವ ‘ಜುಮಾಂಜಿ–ನೆಕ್ಸ್ಟ್‌ ಲೆವೆಲ್‌’ ಚಿತ್ರದಲ್ಲಿ ಡ್ವೇನ್‌ ಜಾನ್ಸನ್‌, ಜಾಕ್‌ ಬ್ಲಾಕ್‌ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಭಾರತದಲ್ಲಿ ಡಿಸೆಂಬರ್‌ 13ರಂದು ಬಿಡುಗಡೆಯಾಗಲಿದೆ. ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.

ADVERTISEMENT

ಅಮೆರಿಕದ ಜನಪ್ರಿಯ ಕಾದಂಬರಿಗಾರ ಕ್ರಿಸ್‌ ವ್ಯಾನ್‌ ಅಲ್ಸ್‌ಬರ್ಗ್‌ ಅವರ ಪ್ರಸಿದ್ಧ ‘ಜುಮಾಂಜಿ’ ಕಾದಂಬರಿಗೆ ನಿರ್ದೇಶಕ ಜೇಕ್‌ ಕಾಸ್ಡನ್‌ ತೆರೆಗೆ ತಂದಿದ್ದಾರೆ.ಕ್ಯಾಮೆರಾದಲ್ಲಿಗ್ಯುಲಾ ಪಾಡೋಸ್‌ ಕೈಚಳಕ ಎದ್ದು ಕಾಣುತ್ತಿದೆ. ಹೆನ್ರಿ ಜಾಕ್‌ಮನ್‌ ಸಂಗೀತವಿದೆ.

ಸಾಹಸ ಮನೋಭಾವದ ಪುರಾತತ್ವ ಸಂಶೋಧಕ ಡಾ.ಸ್ಮೋಲ್ಡರ್‌ ಬ್ರೇವ್‌ಸ್ಟೋನ್‌ ಮತ್ತು ಆತನ ಶಾಸನತಜ್ಞೆ ಪತ್ನಿ (ಜಾಕ್‌ ಬ್ಲಾಕ್‌) ಜತೆ ಅವರ ಸಹಚರರು ಆಕಸ್ಮಿಕವಾಗಿ ‘ಜುಮಾಂಜಿ’ ಮ್ಯಾಜಿಕ್‌ ಗೇಮ್ ಬಲೆಗೆ ಸಿಲುಕಿಕೊಳ್ಳುತ್ತಾರೆ. ಒಂದೊಂದಾಗಿ ಕಷ್ಟಗಳನ್ನು ಎದುರಾಗುತ್ತಾ ಹೋಗುತ್ತವೆ. ಅವೆಲ್ಲವನ್ನೂ ದಂಪತಿ ಮತ್ತು ಅವರ ತಂಡ ಹೇಗೆ ಎದುರಿಸಿ, ಪಾರಾಗಿ ಬರುತ್ತದೆ ಎನ್ನುವುದೇ ಕಥಾವಸ್ತು.

ಕ್ರಿಸ್‌ ವ್ಯಾನ್‌ ಅಲ್ಸ್‌ಬರ್ಗ್‌ ಅವರ ಮೂರು ಕಾದಂಬರಿಗಳು ಈಗಾಗಲೇ ಚಿತ್ರಗಳಾಗಿವೆ. ಜುಮಾಂಜಿ (1995), ಝತುರಾ – ಎ ಸ್ಪೇಸ್‌ ಅಡ್ವೆಂಚರ್‌ ಜುಮಾಂಜಿ (2002),ವೆಲ್‌ಕಮ್‌ ಟು ಜಂಗಲ್‌ (2017) ಹಣ ಬಾಚಿಕೊಂಡಿವೆ. ಅಮೆರಿಕದ ಟಿ.ವಿಯಲ್ಲಿ ಜುಮಾಂಜಿ ಎನಿಮೇಟೆಡ್‌ ಸಿರೀಜ್‌ ಕೂಡ ಪ್ರಸಾರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.