ತಪಸ್ಸಿ
ಕ್ರೇಜಿಸ್ಟಾರ್ ರವಿಚಂದ್ರನ್ ವಿಶೇಷಪಾತ್ರದಲ್ಲಿ ನಟಿಸಿರುವ ಚಿತ್ರವಿದು. ಮಹಿಳಾ ಪ್ರಧಾನ ಈ ಚಿತ್ರಕ್ಕೆ ಸ್ಪೆನ್ಸರ್ ಮ್ಯಾಥ್ಯೂ ನಿರ್ದೇಶನವಿದೆ. ಬೆಂಗಳೂರು ಮೂವೀಸ್ ಲಾಂಛನದಲ್ಲಿ ನಿರ್ಮಾಣಗೊಂಡಿದೆ.
ಅಮೆಯ್ರಾ ಗೋಸ್ವಾಮಿ ನಾಯಕಿಯಾಗಿ ನಟಿಸಿದ್ದಾರೆ. ಭಾಸ್ಕರ್, ಅನುಷಾ ಕಿಣಿ, ಅಥರ್ವ, ಸಚಿನ್, ಗುಬ್ಬಿ ನಟರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಅವರೇ ಛಾಯಾಗ್ರಹಣ ಹಾಗೂ ಕಲಾ ನಿರ್ದೇಶನವನ್ನೂ ಮಾಡಿದ್ದು, ಅರುಣ್ ಪಿ ಥಾಮಸ್ ಸಂಕಲನವಿದೆ. ಆರವ್ ರಾಶಿಕ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಹೆಬ್ಬುಲಿ ಕಟ್
ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಈ ಚಿತ್ರವನ್ನು ನೀನಾಸಂ ಸತೀಶ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಭೀಮರಾವ್ ಪೈದೊಡ್ಡಿ ನಿರ್ದೇಶನವಿದೆ.
‘ನನಗೆ ಸಿನಿಮಾ ಜಾಸ್ತಿ ಕನೆಕ್ಟ್ ಆಗುತ್ತದೆ. ನಾನು ಚಿತ್ರ ನೋಡಿದ್ದೇನೆ. ಮೊದಲ ಬಾರಿಗೆ ಪೂರ್ಣಚಂದ್ರ ತೇಜಸ್ವಿ ಫೋನ್ ಮಾಡಿ ಹೆಬ್ಬುಲಿ ಕಟ್ ಸಿನಿಮಾ ಇದೆ ನೋಡಬೇಕು. ಸಾಧ್ಯವಾದರೆ ಜೊತೆಯಲಿ ನಿಂತುಕೊಳ್ಳಿ ಎಂದರು. ಸಿನಿಮಾ ನೋಡ್ತಾ ನೋಡ್ತಾ ಸೆಳೆಯಿತು. ಮೊದಲ ಭಾಗ ಮುಗಿಸುವಷ್ಟರಲ್ಲಿ ಎದೆ ಭಾರವಾಯ್ತು. ಸೆಕೆಂಡ್ ಆಫ್ ಮುಗಿಸಿದಾಗ ಕಡೆ 20 ನಿಮಿಷ ಉಸಿರಾಡಲು ಕಷ್ಟವಾಯಿತು. ಸಿನಿಮಾ ಅಲ್ಲಿಗೆ ತೆಗೆದುಕೊಂಡು ಹೋಯಿತು. ಭಯ, ತಳಮಳ ಶುರುವಾಯ್ತು. ಜನ ಈ ರೀತಿ ಸಿನಿಮಾ ಹೇಗೆ ಸ್ವೀಕಾರ ಮಾಡುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಇಂದಿನ ರೀಲ್ಸ್, ಗಲಾಟೆಗಳ ನಡುವೆ ಬ್ಯೂಟಿಫುಲ್ ಸಿನಿಮಾ ಬರುವುದು ಕಷ್ಟ. ಇಂಥ ಸಿನಿಮಾಗಳು ಬಂದಾಗ ಜತೆಗೆ ನಿಲ್ಲಬೇಕು’ ಎಂದಿದ್ದಾರೆ ಸತೀಶ್.
‘ಆಫ್ ಬೀಟ್ ಸಿನಿಮಾವಲ್ಲ. ನೋಡಿದ ಮೇಲೆ ಕಣ್ಣೀರು ಬರಬಹುದು. ಇದು ನೈಜ ಘಟನೆಯಾಧಾರಿತ ಸಿನಿಮಾ. 2017ರಲ್ಲಿ ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದಿಂದ ಸ್ಫೂರ್ತಿಗೊಂಡಿರುವ ಚಿತ್ರ. ಅದರ ಜನಪ್ರಿಯ ‘ಹೆಬ್ಬುಲಿ ಕಟ್’ ಕೇಶವಿನ್ಯಾಸದಿಂದ ಈ ಶೀರ್ಷಿಕೆ. ಕಿಚ್ಚ ಸುದೀಪ್ ಅವರ ಸ್ಟಾರ್‌ಡಮ್‌ನಿಂದ ಪ್ರೇರಿತವಾದ ಒಬ್ಬ ವ್ಯಕ್ತಿಯ ಜೀವನದ ಸವಾಲುಗಳನ್ನು ಈ ಚಿತ್ರ ಭಾವನಾತ್ಮಕವಾಗಿ ಚಿತ್ರಿಸುತ್ತದೆ’ ಎಂದಿದ್ದಾರೆ ನಿರ್ದೇಶಕರು.
ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅನಂತ ಶಾಂದ್ರೇಯ ಬರೆದಿದ್ದಾರೆ. ದೀಪಕ್ ಯರಗೇರಾ ಛಾಯಾಚಿತ್ರಗ್ರಹಣ ಮತ್ತು ನವನೀತ್ ಶ್ಯಾಮ್ ಸಂಗೀತ ಚಿತ್ರಕ್ಕಿದೆ. ಮೌನೇಶ್ ನಟರಂಗ, ಅನನ್ಯ ನಿಹಾರಿಕ, ಮಹಾದೇವ ಹಡಪದ, ಉಮಾ ವೈ.ಜಿ., ವಿನಯ್ ಮಹಾದೇವನ್, ಮಹಾಂತೇಶ್ ಹಿರೇಮಠ, ಪುನೀತ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಕ್ಯಾಪಿಟಲ್ ಸಿಟಿ
ನಟ ರವಿಶಂಕರ್ ಪ್ರಮುಖ ಪಾತ್ರದಲ್ಲಿದ್ದಾರೆ. ಆರ್.ಅನಂತರಾಜು ನಿರ್ದೇಶನದಲ್ಲಿ ರಾಜೀವ್ ರೆಡ್ಡಿ ನಾಯಕನಾಗಿ ನಟಿಸಿದ್ದಾರೆ.
‘ಇದು ನನ್ನ ನಿರ್ದೇಶನದ ಹನ್ನೊಂದನೆ ಚಿತ್ರ. ರವಿಶಂಕರ್ ಅವರು ಬಹಳ ವರ್ಷಗಳ ಪರಿಚಯ. ಆದರೆ ಅವರ ಜತೆಗೆ ಕೆಲಸ ಮಾಡಿರುವುದು ಇದೇ ಮೊದಲು. ಬೆಂಗಳೂರು ಭೂಗತ ಜಗತ್ತಿನ ಸುತ್ತ ನಡೆಯುವ ಕಥೆ. 90ರ ಕಾಲಘಟ್ಟದ ಕಥೆಯೂ ಹೌದು. ತೊಂದರೆಗೀಡಾದ ನಾಯಕ ಹೇಗೆ ತನ್ನ ಕಷ್ಟವನ್ನು ನಿಭಾಯಿಸಿಕೊಂಡು ಬರುತ್ತಾನೆ ಎನ್ನುವುದೇ ಪ್ರಮುಖ ಕಥಾಹಂದರ. ಆ್ಯಕ್ಷನ್ ಚಿತ್ರ ಎನಿಸಿದರೂ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ’ ಎಂದಿದ್ದಾರೆ ನಿರ್ದೇಶಕರು.
ಪ್ರೇರಣ ನಾಯಕಿಯಾಗಿ ಅಭಿನಯಿಸಿದ್ದಾರೆ. ಸುಮನ್, ಶರತ್ ಲೋಹಿತಾಶ್ವ, ಕೆ.ಎಸ್. ಶ್ರೀಧರ್ ಮುಂತಾದವರು ಚಿತ್ರದಲ್ಲಿದ್ದಾರೆ. ನಾಗ್ ಸಂಗೀತ, ಪ್ರದೀಪ್ ಛಾಯಾಚಿತ್ರಗ್ರಹಣವಿದೆ.
ಕಪಟ ನಾಟಕ ಸೂತ್ರಧಾರಿ
ಬಹುತೇಕ ಹೊಸಬರಿಂದಲೇ ಕೂಡಿರುವ ಚಿತ್ರವಿದು. ಧೀರಜ್ ಎಂ.ವಿ ಈ ಚಿತ್ರದ ನಿರ್ದೇಶಕ.
‘ಸಮಾಜಕ್ಕೆ ಕನ್ನಡಿ ಹಿಡಿಯುವ ಕಥೆ. ಇಲ್ಲಿ ಹಾಸುಹೊಕ್ಕಾಗಿರುವ ತಾರತಮ್ಯ, ಶೋಷಣೆಗಳ ಕುರಿತಾಗಿ ಚಿತ್ರ ಬೆಳಕು ಚೆಲ್ಲುತ್ತದೆ. ರಾಜಕೀಯ ವಿಡಂಬನೆಯಿದೆ. ಬಹುಪಾಲು ಚಿತ್ರೀಕರಣ ಒಂದು ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ಉತ್ತರ ಕರ್ನಾಟಕದ ದೇವಸ್ಥಾನವೊಂದರ ಆವರಣದಲ್ಲಿ ನಡೆದಿದೆ. ದೇವಸ್ಥಾನದ ಹೆಸರನ್ನು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸುತ್ತಿಲ್ಲ’ ಎಂದು ಧೀರಜ್ ಎಂ.ವಿ ತಿಳಿಸಿದ್ದಾರೆ.
ವಿಎಸ್‌ಕೆ ಸಿನಿಮಾಸ್ ಚಿತ್ರವನ್ನು ನಿರ್ಮಿಸಿದೆ. ಧೀರಜ್, ಅಭಿರಾಮ ಅರ್ಜುನ ಪ್ರಮುಖ ಪಾತ್ರಗಳಲ್ಲಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ವೀರೇಶ್ ಎನ್. ಟಿ.ಎ ಛಾಯಾಚಿತ್ರಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಪೆನ್‌ಡ್ರೈವ್
ಮಾಲಾಶ್ರೀ ಪ್ರಮುಖ ಪಾತ್ರದಲ್ಲಿದ್ದು, ತನಿಷಾ ಕುಪ್ಪಂಡ ಹಾಗೂ ಕಿಶನ್ ನಟನೆಯ ಚಿತ್ರವಿದು. ಸೆಬಾಸ್ಟಿನ್ ಡೇವಿಡ್ ನಿರ್ದೇಶನವಿದೆ. ಎನ್.ಹನುಮಂತರಾಜು ಹಾಗೂ ಲಯನ್ ಎಸ್.ವೆಂಕಟೇಶ್ ಬಂಡವಾಳ ಹೂಡಿದ್ದಾರೆ.
‘ಪೆನ್‌ಡ್ರೈವ್’, ಕಳೆದ ವರ್ಷ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿದ ಪದ. ನಮ್ಮ ಚಿತ್ರಕ್ಕೆ ಈ ಶೀರ್ಷಿಕೆಯಿಟ್ಟ ಮೇಲೆ ಅನೇಕ ಅನಾಮಧೇಯ ಕರೆಗಳನ್ನು ಸ್ವೀಕರಿಸಿದ್ದೇನೆ. ಈ ಶೀರ್ಷಿಕೆ ಇಟ್ಟಿದ್ದು ಏಕೆ? ಎಂಬ ಪ್ರಶ್ನೆಯನ್ನು ಸಾಕಷ್ಟು ಜನ ಕೇಳಿದ್ದಾರೆ. ಸಾಕಷ್ಟು ಅಡೆತಡೆಗಳನ್ನು ದಾಟಿ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದಿದ್ದಾರೆ ನಿರ್ದೇಶಕರು.
ತನಿಷಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ವಿ.ನಾಗೇಂದ್ರಪ್ರಸಾದ್ ಸಂಗೀತ, ಪಿ.ವಿ.ಆರ್ ಸ್ವಾಮಿ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.