ADVERTISEMENT

Thug Life ಚಿತ್ರತಂಡದೊಂದಿಗೆ ವೇದಿಕೆ ಹಂಚಿಕೊಂಡ ಕಮಲ್‌; ಭಾಷಾ ವಿವಾದ ಕುರಿತು ಮೌನ

ಪಿಟಿಐ
Published 4 ಜೂನ್ 2025, 15:56 IST
Last Updated 4 ಜೂನ್ 2025, 15:56 IST
ಕಮಲ್ ಹಾಸನ್
ಕಮಲ್ ಹಾಸನ್   

ಚೆನ್ನೈ: ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ‘ಥಗ್ ಲೈಫ್‌’ ಚಿತ್ರತಂಡದೊಂದಿಗೆ ಬುಧವಾರ ವೇದಿಕೆ ಹಂಚಿಕೊಂಡ ನಟ ಕಮಲ್‌ ಹಾಸನ್, ತಮಿಳು–ಕನ್ನಡ ಭಾಷಾ ವಿವಾದ ಕುರಿತಂತೆ ಮಾತನಾಡಲಿಲ್ಲ.

‘ನನ್ನ ಬೆನ್ನಿಗೆ ನಿಂತ ತಮಿಳುನಾಡಿಗೆ ಧನ್ಯವಾದ’ ಎಂದು ಕಮಲ್‌ ಹಾಸನ್ ಹೇಳಿದರು. ‘ತಮಿಳಿನಿಂದ ಕನ್ನಡ ಹುಟ್ಟಿದೆ’ ಎಂಬ ಅವರ ಹೇಳಿಕೆ ವಿವಾದಕ್ಕೀಡಾಗಿದ್ದು, ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಹೀಗಾಗಿ, ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.

ನಟ ಸಿಲಂಬರಸನ್ ಸೇರಿದಂತೆ ಚಿತ್ರದ ನಟ–ನಟಿಯರು ವೇದಿಕೆಯಲ್ಲಿದ್ದರು. ಕನ್ನಡ ಕುರಿತ ಹೇಳಿಕೆ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ ಅವರನ್ನು ತರಾಟೆಗೆ ತೆಗೆದುಕೊಂಡ ನಂತರ ಕಮಲ್‌ ಹಾಸನ್ ಇದೇ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

‘ಚಿತ್ರತಂಡ ಬಹಳ ಶ್ರಮಪಟ್ಟಿದೆ. ತಾಂತ್ರಿಕ ಸಿಬ್ಬಂದಿ ಶ್ರಮದಿಂದ ಚಿತ್ರವು ಅಂತರರಾಷ್ಟ್ರೀಯ ಗುಣಮಟ್ಟದಿಂದ ಕೂಡಿದೆ’ ಎಂದರು.

ಚಿತ್ರ ನಿರ್ದೇಶಕ ಮಣಿರತ್ನಂ ಅವರನ್ನು ಹೊಗಳಿದ ಅವರು, ‘ಮಣಿರತ್ನಂ ಅವರು ‘ಸಿನಿಮಾ ಜ್ಞಾನಿ’ಯಾಗಿ ಹೊರಹೊಮ್ಮಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ನಾನು ಉತ್ಸುಕವಾಗಿದ್ದೇನೆ’ ಎಂದು ಹೇಳಿದರು.

ಚಿತ್ರವು ಜೂನ್‌ 5ರಂದು ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.