ಕಮಲ್ ಹಾಸನ್
ಚೆನ್ನೈ: ಮಣಿರತ್ನಂ ನಿರ್ದೇಶನದ ಗ್ಯಾಂಗ್‌ಸ್ಟರ್ ಡ್ರಾಮಾ 'ಥಗ್ ಲೈಫ್' ಚಿತ್ರವನ್ನು ಸೂಪರ್ ಸ್ಟಾರ್ ಕಮಲ್ ಹಾಸನ್ ಶುಕ್ರವಾರ ಬಣ್ಣಿಸಿದ್ದಾರೆ. ಮೂರು ದಶಕಗಳಿಂದ ನಮ್ಮಿಬ್ಬರ ಕಾಂಬಿನೇಶನ್ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ಅರ್ಪಣೆ ಎಂದು ಅವರು ಬಣ್ಣಿಸಿದ್ದಾರೆ.
1987ರ ಅಪರಾಧ ಡ್ರಾಮಾ ‘ನಾಯಗನ್’ ಚಿತ್ರಕ್ಕಾಗಿ ಈ ಜೋಡಿ ಒಟ್ಟಾಗಿ ಕೆಲಸ ಮಾಡಿತ್ತು. ಇದು ಹಣ ಗಳಿಕೆ ಮತ್ತು ವಿಮರ್ಶಾತ್ಮಕ ದೃಷ್ಟಿಯಿಂದಲೂ ಭಾರಿ ಯಶಸ್ಸನ್ನು ಗಳಿಸಿತ್ತು. ಹಲವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತ್ತು.
ಈಗ ‘ಥಗ್ ಲೈಫ್’ಗಾಗಿ ಈ ಜೋಡಿ ಮತ್ತೆ ಒಂದಾಗಿದೆ. ಇದು ಉತ್ತರ ಮತ್ತು ದಕ್ಷಿಣ ಚಲನಚಿತ್ರೋದ್ಯಮಗಳ ನಟರನ್ನು ಒಳಗೊಂಡ ಬೃಹತ್ ತಾರಾಗಣದ ಚಿತ್ರವಾಗಿದೆ.
‘ನಾವು ಕ್ಷಮಿಸಿ ಎಂದು ಮಾತ್ರ ಅಭಿಮಾನಿಗಳಿಗೆ ಹೇಳಬಹುದು. ಈ ಚಿತ್ರ ಹಲವು ವರ್ಷಗಳಿಂದ ಕಾಯುತ್ತಿರುವ ಅಭಿಮಾನಿಗಳಿಗೆ ನಮ್ಮ ಅರ್ಪಣೆ. ತಪ್ಪು ನಮ್ಮದೇ ಆಗಿದೆ. ನಾವಿಬ್ಬರೂ ಈ ಹಿಂದೆಯೇ ಚಿತ್ರ ಮಾಡಬಹುದಿತ್ತು. ಆ ಬಗ್ಗೆ ಯೋಚಿಸುತ್ತಲೇ ಇದ್ದೆವು’ಎಂದು ಹಾಸನ್ ಚಿತ್ರದ ಮೊದಲ ಹಾಡು ‘ಜಿಂಗುಚಾ’ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ.
35 ವರ್ಷಗಳ ಬಳಿಕ ಒಟ್ಟಿಗೆ ಕೆಲಸ ಮಾಡುತ್ತಿದ್ದರೂ ನಮ್ಮ ಕೆಲಸದ ವೈಖರಿ ಹಾಗೆಯೇ ಇದೆ ಎಂದಿದ್ದಾರೆ.
‘35 ವರ್ಷಗಳ ಬಳಿಕವೂ ನನ್ನ ಮತ್ತು ಮಣಿ ಸರ್ ನಡುವಿನ ಹೊಂದಾಣಿಕೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಾವು ಚರ್ಚಿಸಿದಂತೆ ಶೇ 25ರಷ್ಟು ಕೆಲಸ ಮುಗಿಸಿದ್ದೇವೆ. ‘ನಾಯಗನ್’ ಒಂದು ಲೆಕ್ಕವಾದರೆ, ‘ಥಗ್ ಲೈಫ್’ ಇನ್ನೊಂದು ಲೆಕ್ಕವಾಗಿದೆ. ನಾವು ಇನ್ನಷ್ಟು ದೂರ ಕ್ರಮಿಸಬೇಕಿದೆ. ಏಕೆಂದರೆ, ನಮ್ಮ ಎಲ್ಲ ಕನಸುಗಳನ್ನು ಯಾವುದೇ ಚಿತ್ರದಲ್ಲಿ ನನಸಾಗಿಸಲು ನಮಗೆ ಸಾಧ್ಯವಾಗಿಲ್ಲ. ಭವಿಷ್ಯದಲ್ಲಿ ನಾವು ಮಾಡುವ ಚಿತ್ರಗಳಲ್ಲೂ ಅದು ಹಾಗೆಯೇ ಆಗುತ್ತದೆ ಎಂದು ನನಗೆ ಖಚಿತತೆ ಇದೆ’ ಎಂದಿದ್ದಾರೆ.
ನಾವು ತುಂಬಾ ದೊಡ್ಡ ಕನಸು ಕಾಣುತ್ತೇವೆ. ನಂತರ, ನಮ್ಮ ಮಾರುಕಟ್ಟೆ ಮತ್ತು ಬಜೆಟ್‌ಗೆ ಸರಿಹೊಂದುವಂತೆ ಸೀಮಿತರಾಗುತ್ತೇವೆ. ಚಿತ್ರೋದ್ಯಮದಲ್ಲಿ ಸಿನಿಮಾ ಹಣ ಗಳಿಸುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾತ್ರ ಹೆಚ್ಚು ಗಮನ ಹರಿಸುತ್ತಾರೆ ಎಂದು ಕಮಲ್ ಹೇಳಿದರು.
ಚಿತ್ರವೊಂದರ ಲಾಭ ಮತ್ತು ನಷ್ಟಗಳನ್ನು ಅಂತಿಮವಾಗಿ ಪ್ರೇಕ್ಷಕರೇ ತೀರ್ಮಾನಿಸುತ್ತಾರೆ. ಹೊಸ, ಉದಯೋನ್ಮುಖ ಕಲಾವಿದರು ವಿಕಸನಗೊಳ್ಳುತ್ತಿದ್ದಾರೆ. ಸಿಲಂಬರಸನ್ ವಿಕಸನಗೊಂಡಿದ್ದು, ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಎಂದು ಹೇಳಿದರು.
ಒಬ್ಬ ಕಲಾವಿದನಾಗಿ ನನಗೆ ಮಾಡಲೇಬೇಕು ಎನ್ನಿಸುವ ಚಿತ್ರ ‘ಥಗ್ ಲೈಫ್’. ನನಗೂ ಈ ಚಿತ್ರದಲ್ಲಿ ನಟಿಸಲು ಮತ್ತು ನಿರ್ಮಾಣ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಇದನ್ನು ವಿವೇಚನಾಶೀಲ ಪ್ರೇಕ್ಷಕರ ಮೇಲಿನ ಪ್ರೀತಿಯಿಂದ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚೆನ್ನೈನ ಅಲ್ವಾರ್‌ಪೇಟೆಯ ಎಲ್ಡಾಮ್ಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ಮೇಲೆ ಕುಳಿತು ಮಣಿರತ್ನಂ ಮತ್ತು ತಾವು ಸಿನಿಮಾದ ಬಗ್ಗೆ ಚರ್ಚಿಸಿದ್ದ ಸಮಯವನ್ನು ಕಮಲ್ ನೆನಪಿಸಿಕೊಂಡರು.
ಈ ಗ ಬಿಡುಗಡೆಯಾಗಿರುವ ಚಿತ್ರದ ಮೊದಲ ಹಾಡು ‘ಜಿಂಗುಚಾ’ಮದುವೆಯ ಹಾಡಾಗಿದ್ದು, ಇದರಲ್ಲಿ ಸಾನ್ಯಾ ಮಲ್ಹೋತ್ರಾ, ಕಮಲ್ ಹಾಸನ್ ಮತ್ತು ಸಿಲಂಬರಸನ್ ಅವರು ಎ.ಆರ್. ರೆಹಮಾನ್ ಅವರ ಸಂಗೀತಕ್ಕೆ ಹೆಜ್ಜೆ ಹಾಕಿದ್ದಾರೆ. ಕಮಲ್ ಹಾಸನ್ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.