ಚೆನ್ನೈ: ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ ಕಮಲ್ ಹಾಸನ್ ಹಾಗೂ ರಜನಿಕಾಂತ್ ಅವರು ಬರೋಬ್ಬರಿ 46 ವರ್ಷಗಳ ಬಳಿಕ ಒಟ್ಟಿಗೆ ನಟಿಸಲಿದ್ದಾರೆ. ಈ ವಿಚಾರವನ್ನು ಕಮಲ್ ಹಾಸನ್ ಅವರೇ ದೃಢಪಡಿಸಿದ್ದಾರೆ.
ಭಾನುವಾರ ರಾತ್ರಿ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಕಮಲ್ ಹಾಸನ್, ರಜನಿಕಾಂತ್ ಜೊತೆ ಸಿನಿಮಾ ಮಾಡುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ.
'ನಾವು ಬಹಳ ಹಿಂದೆಯೇ ಒಂದಾಗಿದ್ದೆವು. ಆದರೆ ಒಂದು ಬಿಸ್ಕತ್ತನ್ನು ಇಬ್ಬರು ಅರ್ಧರ್ಧ ಹಂಚಿಕೊಳ್ಳುತ್ತಿದ್ದೆವು. ಆನಂತರ ನಾವು ಬೇರೆಯಾಗಿರಲು ನಿರ್ಧರಿಸಿದೆವು. ನಮ್ಮಿಬ್ಬರಿಗೂ ಪೂರ್ತಿ ಬಿಸ್ಕತ್ತು ಬೇಕಿತ್ತು. ನಾವು ಅದನ್ನು ಪಡೆದುಕೊಂಡು ಚೆನ್ನಾಗಿ ಆನಂದಿಸಿದೆವು. ಈಗ ನಾವು ಮತ್ತೆ ಅರ್ಧ ಬಿಸ್ಕತ್ತು ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಆದ್ದರಿಂದ ನಾವು ಒಟ್ಟಿಗೆ ಬರಲಿದ್ದೇವೆ' ಎಂದು ಹೇಳಿದ್ದಾರೆ.
'ನಮಗೆ ಅಂತಹ ಅವಕಾಶಗಳು ಸಿಕ್ಕಿದ್ದು ಒಂದು ದೊಡ್ಡ ವಿಷಯ. ನಾವು ಬಹಳ ಹಿಂದೆಯೇ ಹೀಗೆಯೇ ಇರಬೇಕೆಂದು, ಮಾದರಿಯಾಗಬೇಕೆಂದು ನಿರ್ಧರಿಸಿದ್ದೆವು. ಅವರು ಹಾಗೆಯೇ ಇದ್ದಾರೆ, ನಾನು ಕೂಡ ಹಾಗೆಯೇ ಇದ್ದೇನೆ. ಆದ್ದರಿಂದ ಈ ಪುನರ್ಮಿಲನವು ವ್ಯವಹಾರದ ದೃಷ್ಟಿಯಿಂದ ಆಶ್ಚರ್ಯಕರವಾಗಿದ್ದರೂ, ನಮಗೆ ಅಷ್ಟೊಂದು ಆಶ್ಚರ್ಯವಿಲ್ಲ. ಬಹಳ ಹಿಂದೆಯೇ ಆಗಬೇಕಿದ್ದ ಏನೋ ಈಗ ಆಗುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ' ಎಂದಿದ್ದಾರೆ.
ಈ ಸಹಯೋಗದ ಕುರಿತು ಹೆಚ್ಚಿನ ವಿವರ ಇನ್ನೂ ಬಹಿರಂಗವಾಗಿಲ್ಲ. ನಿರ್ಮಾಪಕ ಲೋಕೇಶ್ ಕನಕರಾಜ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.