ADVERTISEMENT

ಟಾಲಿವುಡ್‌ನಲ್ಲಿ ದೃಢವಾದ ದೀಕ್ಷಿತ್‌

ಅಭಿಲಾಷ್ ಪಿ.ಎಸ್‌.
Published 8 ಮಾರ್ಚ್ 2024, 0:30 IST
Last Updated 8 ಮಾರ್ಚ್ 2024, 0:30 IST
ದೀಕ್ಷಿತ್‌ 
ದೀಕ್ಷಿತ್‌    

‘ದಿಯಾ’ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ ದೀಕ್ಷಿತ್‌ ಶೆಟ್ಟಿ ‘ಬ್ಲಿಂಕ್‌’ ಸಿನಿಮಾ ಮೂಲಕ ಮತ್ತೊಮ್ಮೆ ಕನ್ನಡದ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸಿನಿಮಾ ಇಂದು(ಮಾರ್ಚ್‌ 8) ತೆರೆಕಂಡಿದೆ. ‘ದಸರಾ’ ಸಿನಿಮಾ ಬಳಿಕ ಟಾಲಿವುಡ್‌ನಲ್ಲಿ ದೀಕ್ಷಿತ್‌ಗೆ ಸಾಲು ಸಾಲು ಸಿನಿಮಾಗಳು ಅರಸಿ ಬರುತ್ತಿವೆ. ಈ ಕುರಿತು ಸಿನಿಮಾ ಪುರವಣಿ ಜೊತೆ ಅವರು ಮಾತಿಗಿಳಿದರು...

‘ಬ್ಲಿಂಕ್‌’ ಪಯಣ ಶುರುವಾಗಿದ್ದು ಯಾವಾಗ? ಹೇಗೆ?

2022ರಲ್ಲಿ ‘ಬ್ಲಿಂಕ್‌’ ಸಿನಿಮಾ ಪಯಣ ಆರಂಭವಾಗಿತ್ತು. ಈ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಹಾಗೂ ನಾನು ರಂಗಭೂಮಿಯಲ್ಲಿದ್ದ ಕಾಲದಿಂದಲೂ ಸ್ನೇಹಿತರು. ‘ಅನೇಕ’ ಎನ್ನುವ ರಂಗತಂಡದಲ್ಲಿದ್ದಾಗ ನನಗೆ 17 ವರ್ಷ, ನಿಧಿಗೆ 15 ವರ್ಷ ಇರಬೇಕು. ಅಲ್ಲಿಂದಲೂ ನಮ್ಮಿಬರ ಪರಿಚಯ. ಶ್ರೀನಿಧಿ ಸಿನಿಮಾ ಮಾಡಬೇಕು ಎಂದುಕೊಂಡಾಗ, ‘ಬ್ಲಿಂಕ್‌’ ಸ್ಕ್ರಿಪ್ಟ್‌ ತೆಗೆದುಕೊಂಡು ನನ್ನ ಬಳಿಗೆ ಬಂದರು. ಸ್ಕ್ರಿಪ್ಟ್‌ ನೆಚ್ಚಿಕೊಂಡು ಸಿನಿಮಾ ಮಾಡಲು ಒಪ್ಪಿಕೊಂಡೆ.

ADVERTISEMENT

ಸಿನಿಮಾದಲ್ಲಿನ ನಿಮ್ಮ ಪಾತ್ರದ ಬಗ್ಗೆ...  

ಸಿನಿಮಾದಲ್ಲಿ ನಾನು ‘ಅಪೂರ್ವ’ ಎಂಬ ಪಾತ್ರವನ್ನು ನಿಭಾಯಿಸಿದ್ದೇನೆ. ರಂಗಭೂಮಿಯಲ್ಲಿ ಕೆಲಸ ಮಾಡುವವ ಈತ. ಅವನ ಬದುಕಿನ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟಾಗ ಏನೆಲ್ಲ ಸಂಭವಿಸುತ್ತದೆ ಎನ್ನುವುದನ್ನು ಮ್ಯೂಸಿಕಲ್‌ ಸೈನ್ಸ್‌–ಫಿಕ್ಷನ್‌ ಮೂಲಕ ಹೇಳಿದ್ದಾರೆ ನಿರ್ದೇಶಕರು. ಟೈಂ ಟ್ರಾವೆಲ್‌ ಬಗ್ಗೆ ಟ್ರೇಲರ್‌ನಲ್ಲಿರುವ ಉಲ್ಲೇಖ ಗಮನಿಸಿರಬಹುದು. ನಾಯಕ ಟೈಂ ಟ್ರಾವೆಲ್‌ ಮಾಡುತ್ತಾನೆ. ಆದರೆ ಹೇಗೆ ಮಾಡುತ್ತಾನೆ, ಏಕೆ ಮಾಡುತ್ತಾನೆ ಎನ್ನುವುದಕ್ಕೆ ಸಿನಿಮಾ ನೋಡಬೇಕು. ಹಿಂದೆಂದೂ ಕನ್ನಡ ಚಿತ್ರರಂಗದಲ್ಲಿ ಬರದೇ ಇರುವ ಕಥೆಯನ್ನು ‘ಬ್ಲಿಂಕ್‌’ ಹೊಂದಿದೆ ಎಂದು ಹೆಮ್ಮೆ, ಅಷ್ಟೇ ಧೈರ್ಯವಾಗಿ ಹೇಳಬಲ್ಲೆ.

ಪಾತ್ರಗಳ ಆಯ್ಕೆಯಲ್ಲಿ ದೀಕ್ಷಿತ್‌ ಹಾಕಿಕೊಂಡಿರುವ ನಿಯಮಗಳೇನು? 

‘ದಿಯಾ’ ರಿಲೀಸ್‌ಗೂ ಮೊದಲೇ ‘ಕೆಟಿಎಂ’ ಚಿತ್ರ ಒಪ್ಪಿಕೊಂಡಿದ್ದೆ. ಅದು ಇತ್ತೀಚೆಗೆ ತೆರೆಕಂಡಿತು. ನಂತರದಲ್ಲಿ ‘ಬ್ಲಿಂಕ್‌’ ಮತ್ತು ‘ದಸರಾ’ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದೆ. ‘ದಿಯಾ’ದಿಂದ ಹಿಡಿದು ಇಲ್ಲಿಯವರೆಗಿನ ಸಿನಿಮಾ ಪಯಣದ ಬಗ್ಗೆ ಖುಷಿ ಇದೆ. ತೃಪ್ತಿ ಯಾವಾಗ ಸಿಗುತ್ತದೆಯೋ ಗೊತ್ತಿಲ್ಲ. ಒಂದೇ ಜಾನರ್‌ನ ಹಾಗೂ ಒಂದೇ ಮಾದರಿಯ ಪಾತ್ರಗಳನ್ನು ಸ್ವಲ್ಪ ವರ್ಷ ಮಾಡಬಾರದು ಎನ್ನುವ ಮಾನದಂಡ ನನ್ನದು. ಇಲ್ಲಿಯವರೆಗಿನ ಸಿನಿಮಾಗಳಲ್ಲಿ ಅದನ್ನು ಪಾಲಿಸಿದ್ದೇನೆ. ಈ ಹಾದಿಯಲ್ಲೇ ಮುಂದೆ ಸಾಗುತ್ತಿದ್ದೇನೆ. ಬೇರೆ ಬೇರೆ ಮಾದರಿಯ ಪಾತ್ರಗಳ ಒಳಗೆ ಇಳಿದು ಮತ್ತಷ್ಟು ವರ್ಗದ ಜನರನ್ನು ಮುಟ್ಟಬೇಕು. ನಮಗೆ ಬೇಕಾಗಿರುವ ಸಿನಿಮಾಗಳನ್ನು ಮಾಡಬೇಕು ಎಂದರೆ ಸದ್ಯ ಕೈಯಲ್ಲಿರುವ ಪ್ರಾಜೆಕ್ಟ್‌ಗಳನ್ನು ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ಮಾಡಬೇಕು. ಇದರಲ್ಲಿ ನನಗೆ ನಂಬಿಕೆ ಇದೆ. 

‘ಬ್ಲಿಂಕ್‌’ನಲ್ಲಿ ಪ್ರಯೋಗಶೀಲ ಕಲಾವಿದರು ಇದ್ದಾರಲ್ಲವೇ?

ಹೌದು. ಸಿನಿಮಾದ ಸ್ಕ್ರಿಪ್ಟ್‌ ಬರೆಯುವುದು ಒಂದು ಹಂತವಾದರೆ, ಅದರಲ್ಲಿರುವ ಪಾತ್ರಗಳಿಗೆ ತಕ್ಕಂತೆ ಕಲಾವಿದರನ್ನು ಹುಡುಕುವುದು ದೊಡ್ಡ ಯುದ್ಧ. ಈ ಯುದ್ಧದಲ್ಲಿ ಶ್ರೀನಿಧಿ ಗೆದ್ದಿದ್ದಾರೆ. ‘ಬ್ಲಿಂಕ್‌’ನಲ್ಲಿ ಚಿತ್ರಕಥೆಯೇ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಸಾಗಿದೆ ಎನ್ನಬಹುದು. ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಹೀಗೆ ಚಿತ್ರದಲ್ಲಿ ಕಲಾವಿದರ ವರ್ಗ ಅದ್ಭುತವಾಗಿದೆ. ಕ್ಯಾಮೆರಾ ಎದುರು ನಿಂತಾಗ ಎದುರಿಗೆ ಇರುವ ಪಾತ್ರಗಳೂ ಪ್ರಮುಖವಾಗುತ್ತದೆ. ನಟನೆ ಎಂದರೆ ಒಂದು ರೀತಿ ಕೊಡು, ಕೊಳ್ಳುವಿಕೆ ಇದ್ದ ಹಾಗೆ. ಹೆಚ್ಚಿನ ಕಲಾವಿದರು ರಂಗಭೂಮಿಯವರೇ. ರಂಗಭೂಮಿಯ ತುಣುಕುಗಳೂ ಚಿತ್ರದಲ್ಲಿದೆ. 

ದೀಕ್ಷಿತ್‌ ಕೈಯಲ್ಲಿರುವ ಪ್ರಾಜೆಕ್ಟ್‌ಗಳು? 

ರಶ್ಮಿಕಾ ಮಂದಣ್ಣ ಅವರ ಜೊತೆ ತೆಲುಗಿನಲ್ಲಿ ‘ದಿ ಗರ್ಲ್‌ಫ್ರೆಂಡ್‌’ ಎನ್ನುವ ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಈ ಸಿನಿಮಾ ತೆಲುಗಿನ ಜೊತೆಗೆ ಕನ್ನಡ ಹಾಗೂ ಹಿಂದಿಯಲ್ಲಿ ತೆರೆಕಾಣುವ ಸಾಧ್ಯತೆ ಇದೆ. ಇದನ್ನು ನಿರ್ಮಾಪಕರೇ ಘೋಷಣೆ ಮಾಡಲಿದ್ದಾರೆ. ‘ದಸರಾ’ ಚಿತ್ರ ನಿರ್ಮಾಣ ಮಾಡಿದ್ದ ಸಂಸ್ಥೆಯೇ ‘KJQ’(ಕಿಂಗ್‌, ಜಾಕಿ, ಕ್ವೀನ್‌) ಎಂಬ ಸಿನಿಮಾ ಮಾಡುತ್ತಿದೆ. ಅದರಲ್ಲಿ ನಟಿಸುತ್ತಿದ್ದೇನೆ. ಮಣಿರತ್ನಂ ಅವರ ಜೊತೆ ಕೆಲಸ ಮಾಡಿದ ಅನುಭವ ಇರುವ ಕೆಕೆ ಇದರ ನಿರ್ದೇಶಕರು. ಪ್ರೇಮ್‌ ನಿರ್ದೇಶನದ ಪ್ರೊಡಕ್ಷನ್‌ ನಂ.1 ಎಂಬ ಸಿನಿಮಾ ಮುಹೂರ್ತ ನಡೆದಿದೆ. ಇವೆಲ್ಲವೂ ತೆಲುಗು ಸಿನಿಮಾಗಳು. ಜೊತೆಗೆ ಮಲಯಾಳದಲ್ಲಿ ‘ಒಪ್ಪೀಸ್‌’ ಎಂಬ ಸಿನಿಮಾ ಮಾಡುತ್ತಿದ್ದೇನೆ. ಕನ್ನಡದಲ್ಲಿ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಸಿನಿಮಾ ಮಾಡುತ್ತಿದ್ದು, ಸದ್ಯ ಇದರ ಚಿತ್ರೀಕರಣದಲ್ಲೇ ತೊಡಗಿಸಿಕೊಂಡಿದ್ದೇನೆ. ಇದೂ ಕೊನೆಯ ಹಂತದಲ್ಲಿದೆ.  ‘ದಿಯಾ’ ನೋಡಿ ದೀಕ್ಷಿತ್‌ ಬೇರೆ ಜಾನರ್‌ನ ಪಾತ್ರಗಳಿಗೆ ಹೊಂದಿಕೆಯಾಗುವುದಿಲ್ಲ ಎಂದುಕೊಂಡಿದ್ದರು. ತೆಲುಗಿನ ‘ದಸರಾ’ ಯಾವಾಗ ಔಟ್‌ ಆಫ್‌ ದಿ ಬಾಕ್ಸ್‌ ಪಾತ್ರವನ್ನು ನೀಡಿತೋ ಆವಾಗ ನಿರ್ದೇಶಕರಿಗೆ ನನ್ನ ಮೇಲೆ ನಂಬಿಕೆ ಜಾಸ್ತಿಯಾಯಿತು. ಹೀಗಾಗಿ ತೆಲುಗಿನಲ್ಲಿ ಹೆಚ್ಚು ಅವಕಾಶಗಳು ದೊರೆಯುತ್ತಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.