ADVERTISEMENT

ನೀವು ಪಾಕಿಸ್ತಾನಿ ಉಗ್ರರಾ? ರಾಷ್ಟ್ರಗೀತೆಗೆ ಗೌರವಿಸದವರ ವಿರುದ್ಧ ಕಲಾವಿದರು ಗರಂ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 8:45 IST
Last Updated 30 ಅಕ್ಟೋಬರ್ 2019, 8:45 IST
   

ಬೆಂಗಳೂರು: ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಪ್ರಸಾರವಾದಾಗ ಎದ್ದು ನಿಂತು ಗೌರವ ಸೂಚಿಸದೇ ಕುಳಿತೇ ಇದ್ದವರ ವಿರುದ್ಧ ನಟ ಅರುಣ್‌ ಗೌಡ ಅವರ ತಂಡದವರು ಗರಂ ಆಗಿದ್ದಾರೆ.

ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪರ– ವಿರೋಧ ಚರ್ಚೆಗಳಿಗೆ ವೇದಿಕೆಯಾಗಿದೆ.

ಘಟನೆ ವಿವರ: ನಟ ಅರುಣ್‌ಗೌಡ, ನಟಿ ಐಶ್ವರ್ಯಾ ಅವರ ತಂಡ ಅ.23ರಂದು ಒರಿಯನ್‌ ಮಾಲ್‌ನಲ್ಲಿ ತಮಿಳಿನ ‘ಅಸುರನ್‌‘ ಸಿನಿಮಾ ವೀಕ್ಷಿಸಲು ತೆರಳಿದ್ದರು. ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರವಾಗಿತ್ತು. ಆದರೆ, ಚಿತ್ರಮಂದಿರದಲ್ಲಿದ್ದ ಕೆಲವರು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ದೂರು ದಾಖಲಿಸುವಂತೆ ಹೇಳಿದರು ಎಂದು ಅರುಣ್‌ ಗೌಡ ತಂಡದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸಿನಿಮಾ ವೀಕ್ಷಿಸಲು ಮೂರು ಗಂಟೆ ಸಮಯ ವ್ಯರ್ಥಮಾಡುತ್ತೀರಾ, ಆದರೆ, 52 ಸೆಕೆಂಡ್‌ ಪ್ರಸಾರವಾಗುವ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವಿಸುವುದಿಲ್ಲ. ನೀವು ಪಾಕಿಸ್ತಾನಿ ಉಗ್ರರಾ? ಎಂದು ಪ್ರಶ್ನಿಸಲಾಗಿದೆ.

ನಮ್ಮ ಸೈನಿಕರು ದೇಶಕ್ಕಾಗಿ ಗಡಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ರಾಷ್ಟ್ರಗೀತೆ ಪ್ರಸಾರವಾದಾಗ ಎದ್ದುನಿಲ್ಲಬೇಕು ಎಂಬ ಸೌಜನ್ಯವೂ ನಿಮಗಿಲ್ಲ . ಕೂಡಲೇ ನೀವು ಇಲ್ಲಿಂದ ಹೊರಡಿ‘ ಎಂದು ಮತ್ತೊಬ್ಬರು ಹೇಳಿದ್ದಾರೆ.

ಸಿನಿಮಾ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವಾಗ ಎದ್ದುನಿಲ್ಲುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ 2018ರ ಜನವರಿಯಲ್ಲಿ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.