ಕಿರುತೆರೆಯಿಂದ ಚಂದನವನಕ್ಕೆ ಹೆಜ್ಜೆ ಇಟ್ಟ ನಟಿಯರು ಹಲವರು. ಈ ಪೈಕಿ ‘ಗಟ್ಟಿಮೇಳ’ ಧಾರವಾಹಿಯಲ್ಲಿ ‘ರೌಡಿ ಬೇಬಿ ಅಮೂಲ್ಯ’ ಎಂಬ ಪಾತ್ರದ ಮೂಲಕ ಗುರುತಿಸಿಕೊಂಡ ನಿಶಾ ರವಿಕೃಷ್ಣನ್ ಅವರೂ ಒಬ್ಬರು. ಸದ್ಯ ‘ಅಣ್ಣಯ್ಯ’ ಎಂಬ ಧಾರಾವಾಹಿ ಮೂಲಕ ಮನೆಮಾತಾಗಿರುವ ಇವರ ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾ ಆ.29ರಂದು ತೆರೆಕಾಣುತ್ತಿದೆ. ವಿನಯ್ ರಾಜ್‌ಕುಮಾರ್ ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ನಿಶಾ ವಿದ್ಯಾರ್ಥಿನಿಯಾಗಿ ಅವರಿಗೆ ಜೋಡಿಯಾಗಿದ್ದಾರೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಅವರೊಂದಿಗೆ ಒಂದು ಮಾತುಕತೆ...
‘ಈ ಸಿನಿಮಾ ಸೆಟ್ಟೇರಿದ್ದು 2021ರಲ್ಲಿ. ಪುನೀತ್ ರಾಜ್‌ಕುಮಾರ್ ಅವರು ಈ ಸಿನಿಮಾಗೆ ಕ್ಲ್ಯಾಪ್ ಮಾಡಿದ್ದರು. ಹಲವು ಸವಾಲುಗಳ ನಡುವೆ ಈ ಸಿನಿಮಾ ಶೂಟಿಂಗ್ ಮಾಡಿದ್ದೆವು. ಹಲವು ಕಾರಣಗಳಿಂದ ಈ ಸಿನಿಮಾ ವಿಳಂಬವಾಯಿತು. ಆದರೂ ಇದೂ ಸದಾ ಫ್ರೆಶ್ ಆಗಿರುವ ಸಿನಿಮಾ ಹಾಗೂ ವಿಷಯ. ಈ ಸಿನಿಮಾದ ಕಥೆ ಸರಳವಾಗಿದ್ದು, ಇದರ ಮೇಲೆ ಇಡೀ ತಂಡಕ್ಕೆ ನಂಬಿಕೆ ಇದೆ. ಇದು 1990ರಿಂದ 2005ರವರೆಗೆ ನಡೆಯುವ ಕಥೆ ಹೊಂದಿದ್ದು, ಇದರಲ್ಲಿ ನಿರ್ದೇಶಕನ ಪಾತ್ರದಲ್ಲಿ ವಿನಯ್ ರಾಜ್‌ಕುಮಾರ್ ನಟಿಸಿದ್ದಾರೆ. ನಾನು ಎರಡು ಲುಕ್‌ಗಳಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆ ಕಾಲಘಟ್ಟಕ್ಕೆ ಪ್ರೇಕ್ಷಕರನ್ನು ಕರೆದೊಯ್ಯವ ಸಾಮರ್ಥ್ಯವನ್ನು ಈ ಸಿನಿಮಾ ಹೊಂದಿದೆ. 80–90ರ ದಶಕದಲ್ಲಿ ಹುಟ್ಟಿದವರಿಗೆ ಈ ಸಿನಿಮಾ ತುಂಬಾ ಕನೆಕ್ಟ್ ಆಗಲಿದೆ’ ಎನ್ನುತ್ತಾರೆ ನಿಶಾ.
‘ನಾನು ಅಪ್ಪು ಅವರ ಅಪ್ಪಟ ಅಭಿಮಾನಿ. ಮುಹೂರ್ತದ ಸಂದರ್ಭದಲ್ಲಿ ಪುನೀತ್ ಅವರನ್ನು ಭೇಟಿಯಾಗಿದ್ದೆ. ಅದೇ ಮೊದಲು ಅದೇ ಕೊನೆ. ಅವರೊಂದಿಗೆ ಅಂದು ಮಾತನಾಡಿದ ಕ್ಷಣಗಳು ಸದಾ ನನ್ನ ನೆನಪಿನಲ್ಲಿರಲಿದೆ. ಜೊತೆಗೆ ವಿನಯ್ ರಾಜ್‌ಕುಮಾರ್ ಅವರ ತಾಯಿ ನನ್ನನ್ನು ಧಾರಾವಾಹಿಯಲ್ಲಿ ನೋಡಿದ್ದರು. ‘ಇವಳು ನನ್ನ ಫೇವರೇಟ್ ಹೀರೊಯಿನ್’ ಎಂದು ನನ್ನನ್ನೇ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಪರಿಚಯ ಮಾಡಿಕೊಟ್ಟಿದ್ದು ನನಗೆ ಖುಷಿಯಾಗಿತ್ತು’ ಎಂದು ನೆನಪಿಸಿಕೊಂಡರು ನಿಶಾ.
‘ಈ ನಡುವೆ ನಾನು ‘ಅಂಶು’ ಎನ್ನುವ ಸಿನಿಮಾದಲ್ಲಿ ನಟಿಸಿದೆ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಇದು ನನ್ನ ವೃತ್ತಿ ಬದುಕಿಗೆ ತಿರುವು ನೀಡಿದೆ. ಈ ಸಿನಿಮಾ ಎಲ್ಲರಿಗೂ ತಲುಪದೇ ಇದ್ದರೂ, ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದಾರೆ. ಸದ್ಯಕ್ಕೆ ಯಾವ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ. ನಟನೆಯನ್ನು ವೃತ್ತಿಯಾಗಿಯೇ ತೆಗೆದುಕೊಂಡಿರುವ ನಾನು ಸಿನಿಮಾಗಾಗಿಯೇ ಕಾಯದೆ ನಾನು ಬಂದಂತಹ ಒಳ್ಳೆಯ ಅವಕಾಶಗಳನ್ನು ಸ್ವೀಕರಿಸಿದೆ’ ಎಂದರು.
‘ಸಿನಿಮಾ ಕಥೆಗಳು ಬರುತ್ತಿವೆ, ಕೇಳುತ್ತಿದ್ದೇನೆ. ಯಾವುದನ್ನೂ ಸದ್ಯಕ್ಕೆ ಒಪ್ಪಿಕೊಂಡಿಲ್ಲ. ಧಾರಾವಾಹಿಯಲ್ಲಿ ತೊಡಗಿಸಿಕೊಂಡಿರುವ ಕಾರಣ ಸಿನಿಮಾಗೆ ಸಮಯ ನೀಡಲಾಗುತ್ತಿಲ್ಲ. ಜೊತೆಗೆ ನನ್ನಲ್ಲಿ ಕುತೂಹಲ ಹುಟ್ಟಿಸಿದ ಪಾತ್ರವುಳ್ಳ ಕಥೆಗಳು ಬಂದಿಲ್ಲ’ ಎಂದು ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.