
ನಟ ಚಂದನ್ ನಿರ್ದೇಶಿಸಿ, ನಟಿಸಿರುವ ‘ಫ್ಲರ್ಟ್’ ಚಿತ್ರ ನ.28ರಂದು ತೆರೆಗೆ ಬರಲಿದೆ. ನ.7ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಈ ಹಿಂದೆ ತಂಡ ಘೋಷಿಸಿತ್ತು. ಆದರೆ ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರ ತೆರೆಗೆ ಬಂದಿದ್ದರಿಂದ ತಮ್ಮ ಚಿತ್ರ ಬಿಡುಗಡೆ ಮುಂದೂಡಿರುವುದಾಗಿ ಚಿತ್ರತಂಡ ಬಳಿಕ ಸ್ಪಷ್ಟನೆ ನೀಡಿತ್ತು.
‘ಎ ಪ್ಯೂರ್ ಡವ್ ಸ್ಟೋರಿ’ ಎಂಬ ಅಡಿಬರಹ ಫ್ಲರ್ಟ್ ಚಿತ್ರಕ್ಕಿದ್ದು, ನಿಮಿಕಾ ರತ್ನಾಕರ್, ಅಕ್ಷತಾ ಬೋಪಣ್ಣ ನಾಯಕಿಯರಾಗಿ ನಟಿಸಿದ್ದಾರೆ. ‘ಹುಡುಗಿಯರಿಗೆ ಫ್ಲರ್ಟ್ ಮಾಡಿಕೊಂಡು ಕಾಲ ಕಳೆಯುವ ಹುಡುಗನೊಬ್ಬನ ಕಥೆ. ಕೆಲ ದಿನಗಳ ಹಿಂದೆ ರಾಜಕಾರಣಿಯೊಬ್ಬರು 99 ಹುಡುಗಿಯರಿಗೆ ಫ್ಲರ್ಟ್ ಮಾಡಿದ್ದು ಸುದ್ದಿಯಾಗಿತ್ತು. ಅದೇ ರೀತಿ ನಾನು ಈ ಚಿತ್ರದಲ್ಲಿ 99 ಹುಡುಗಿಯರಿಗೆ ಫ್ಲರ್ಟ್ ಮಾಡಿದ್ದೇನೆ. ಇದೊಂದು ರಾಂಕಾಮ್ ಚಿತ್ರವಾದರೂ ಸ್ನೇಹ, ಪ್ರೀತಿ ಸೇರಿದಂತೆ ಎಲ್ಲ ಬಗೆಯ ಮನರಂಜನೀಯ ಅಂಶಗಳೂ ಇವೆ. ಹುಡುಗಿಯರಿಗೆ ಮೋಸ ಮಾಡುವ, ನಕಾರಾತ್ಮಕ ಸಂದೇಶ ಹೊಂದಿರುವ ಚಿತ್ರವಲ್ಲ. ಪ್ರೀತಿಯ ನಿಜವಾದ ಅರ್ಥವನ್ನು ಹೇಳುವ ಕಥೆ’ ಎಂದಿದ್ದಾರೆ ಚಂದನ್.
ಎವರೆಸ್ಟ್ ಪಿಕ್ಚರ್ಸ್ ಮೂಲಕ ಚಂದನ್ ಅವರೇ ಬಂಡವಾಳ ಹೂಡಿದ್ದಾರೆ. ಕಿಚ್ಚ ಸುದೀಪ್ ಚಿತ್ರದ ‘ನೀ ನನ್ನ ಜೀವ’ ಎಂಬ ಹಾಡನ್ನು ಹಾಡಿದ್ದಾರೆ. ನಕುಲ್ ಅಭಯಂಕರ್, ಜಸ್ಸಿ ಗಿಫ್ಟ್ ಸಂಗೀತ, ಹೆಚ್.ಸಿ. ವೇಣು ಛಾಯಾಚಿತ್ರಗ್ರಹಣವಿದೆ. ಹಿರಿಯ ನಟ ಅವಿನಾಶ್, ಶ್ರುತಿ, ಸಾಧು ಕೋಕಿಲ, ಗಿರೀಶ್ ಶಿವಣ್ಣ, ವಿನಯ್ ಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.