ADVERTISEMENT

ಕನ್ನಡ ಚಲನಚಿತ್ರ ಕಪ್ : ‘ಅಪ್ಪು’ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 13:49 IST
Last Updated 23 ಜನವರಿ 2023, 13:49 IST
ಸುದೀಪ್‌
ಸುದೀಪ್‌   

ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಇದೇ ಮೊದಲ ಬಾರಿಗೆ ರಾಜಧಾನಿಯಿಂದ ಹೊರಗೆ ಹೆಜ್ಜೆ ಇಟ್ಟಿದೆ. ಕೆಸಿಸಿ ಮೂರನೇ ಆವೃತ್ತಿ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಫೆಬ್ರುವರಿ 11 ಹಾಗೂ 12ರಂದು ನಡೆಯಲಿದೆ.

‘ಪುನೀತ್‌ ಅವರನ್ನು ನಾವು ಯಾವತ್ತಿದ್ದರೂ ಸಂಭ್ರಮಿಸಲು ಇಚ್ಛಿಸುತ್ತೇವೆ. ಈ ಬಾರಿಯ ಕೆಸಿಸಿಯಲ್ಲಿ ಅದ್ಧೂರಿಯಾಗಿ ಪುನೀತ್‌ ಅವರನ್ನು ಸಂಭ್ರಮಿಸಿಕೊಳ್ಳಲಿದ್ದೇವೆ. ಖಂಡಿತವಾಗಿಯೂ, ಕೆಸಿಸಿಯಲ್ಲಿ ಪುನೀತ್‌ ಅವರ ನಿಧನದಿಂದ ಉಂಟಾದ ಶೂನ್ಯಸ್ಥಿತಿಯನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ’ ಎಂದು ಕೆಸಿಸಿ ಹೊಸ ಆವೃತ್ತಿ ಬಗ್ಗೆ ಸುದೀಪ್‌ ಮಾತಿಗಿಳಿದರು.

‘ಕೆಸಿಸಿ ಮೂರನೇ ಆವೃತ್ತಿಯಲ್ಲಿ ಆರು ತಂಡಗಳಿದ್ದು, ಜ.26ರಂದು ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕೆಸಿಸಿಯಲ್ಲಿ ಪಾಲ್ಗೊಳ್ಳಲು ಇಲ್ಲಿಯವರೆಗೂ 9 ಅಂತರರಾಷ್ಟ್ರೀಯ ಕ್ರಿಕೆಟ್‌ ಆಟಗಾರರು ಒಪ್ಪಿಗೆ ಸೂಚಿಸಿದ್ದು, ಈ ಪೈಕಿ ಆರು ಆಟಗಾರರನ್ನು ಆಯ್ಕೆ ಮಾಡಲಾಗುವುದು. ಆರು ತಂಡಗಳ ನಾಯಕರು ಯಾರು ಎನ್ನುವುದೂ ಜ.26ಕ್ಕೆ ತಿಳಿಯಲಿದೆ. ಈ ಬಾರಿಯ ಕೆಸಿಸಿಯಲ್ಲಿ ಶಿವರಾಜ್‌ಕುಮಾರ್‌ ಅವರು ಆಟ ಆಡುವುದು ಅನುಮಾನ. ಕ್ರಿಕೆಟ್‌ ಮೇಲೆ ಆಸಕ್ತಿ ಇರುವ ಬೇರೆ ಭಾಷೆಯ ನಟರು, ರಾಜಕಾರಣಿಗಳು, ಕಾರ್ಪೊರೇಟ್‌ ಕಂಪನಿಯವರೂ ಈ ಬಾರಿ ಕೆಸಿಸಿಯ ತಂಡಗಳಲ್ಲಿ ಇರಲಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಯೊಬ್ಬರನ್ನೂ ನಾವು ಆಹ್ವಾನಿಸಿದ್ದೇವೆ. ಬರದೇ ಇರುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎನ್ನುತ್ತಾರೆ ನಟ ಸುದೀಪ್‌.

ADVERTISEMENT

‘ಗಣೇಶ್‌, ‘ಮುಂಗಾರು ಮಳೆ’ ಸಿನಿಮಾ ರೀತಿ ಹೀಗೆ ಗ್ಯಾಪ್‌ ಅಲ್ಲಿ ಬಂದು ಕಪ್‌ ಹೊಡ್ಕೊಂಡು ಹೋಗ್ತಾರೆ. ಈ ಬಾರಿ ಅವರ ಆಟವನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದ ಸುದೀಪ್‌, ‘ಮುಂದಿನ ದಿನಗಳಲ್ಲಿ ಫ್ಲಡ್‌ಲೈಟ್ಸ್‌ ವ್ಯವಸ್ಥೆ ಇರುವ ಎಲ್ಲ ನಗರಗಳಿಗೂ ಕೆಸಿಸಿ ಹೆಜ್ಜೆ ಇಡಲಿದೆ. ಕೋವಿಡ್‌ ಕಾರಣದಿಂದಾಗಿ ಕಳೆದೆರಡು ವರ್ಷ ಕೆಸಿಸಿ ನಡೆದಿರಲಿಲ್ಲ. 2023ರ ಅಂತ್ಯದಲ್ಲಿ ನಾಲ್ಕನೇ ಆವೃತ್ತಿ ಆಯೋಜಿಸುವ ಯೋಚನೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.