ADVERTISEMENT

ಕನ್ನಡ ಚಿತ್ರರಂಗಕ್ಕಿದು ಕಹಿ–ಸಿಹಿಯ ವರ್ಷ

ಅಭಿಲಾಷ್ ಪಿ.ಎಸ್‌.
Published 27 ಡಿಸೆಂಬರ್ 2024, 0:00 IST
Last Updated 27 ಡಿಸೆಂಬರ್ 2024, 0:00 IST
   

2024ರಲ್ಲಿ ಇಲ್ಲಿಯವರೆಗೆ ಸುಮಾರು 210 ಕನ್ನಡ ಸಿನಿಮಾಗಳು ಬಿಡುಗಡೆಯಾಗಿದ್ದು, ಇವುಗಳಲ್ಲಿ ಲಾಭ ಕಂಡಿದ್ದು ಬೆರಳೆಣಿಕೆಯಷ್ಟೇ ಸಿನಿಮಾಗಳು. ಈ ವರ್ಷದ ಚಂದನವನದ ಹಿನ್ನೋಟ ಇಲ್ಲಿದೆ...

2024 ಕನ್ನಡ ಚಿತ್ರರಂಗಕ್ಕೆ ಎಳ್ಳು ಬೆಲ್ಲದ ಮಿಶ್ರಣದಂತಿತ್ತು. ವರ್ಷದ ಮೊದಲಾರ್ಧ ತಾರಾ ವರ್ಚಸ್ಸಿನ ನಟರ ಸಿನಿಮಾಗಳಿಲ್ಲದೆ ಸೊರಗಿದ ಬೆಳ್ಳಿತೆರೆಗಳು ದ್ವಿತೀಯಾರ್ಧದಲ್ಲಿ ಪರಭಾಷಾ ಚಿತ್ರಗಳ ಪೈಪೋಟಿ ನಡುವೆಯೂ ಕನ್ನಡದ ಸ್ಟಾರ್‌ ನಟರ ಸಿನಿಮಾಗಳಿಂದ ತುಂಬಿದವು.

2023ರ ಅಂತ್ಯದಲ್ಲಿ ತೆರೆಕಂಡ ದರ್ಶನ್‌ ನಟನೆಯ ‘ಕಾಟೇರ’ ಸಿನಿಮಾದ ಯಶಸ್ಸಿನೊಂದಿಗೇ ಕನ್ನಡ ಚಿತ್ರರಂಗ 2024ಕ್ಕೆ ಹೆಜ್ಜೆ ಇಟ್ಟಿತ್ತು. ಜನವರಿ 26ಕ್ಕೆ ಒಟ್ಟು ಆರು ಸಿನಿಮಾಗಳು ತೆರೆಕಂಡರೂ ‘ಉಪಾಧ್ಯಕ್ಷ’ ಸಿನಿಮಾವಷ್ಟೇ ತೆರೆಗಳಲ್ಲಿ ಕೆಲ ವಾರ ಉಳಿದುಕೊಂಡಿತು. ಫೆಬ್ರುವರಿಯಲ್ಲಿ ತೆರೆಕಂಡ ‘ಒಂದು ಸರಳ ಪ್ರೇಮಕಥೆ’ ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿತು. ಈ ವರ್ಷ ಸಂಕ್ರಾಂತಿ–ಯುಗಾದಿ ಕಳೆದರೂ ತೆರೆಗಳತ್ತ ಸ್ಟಾರ್‌ ನಟರ ಚಿತ್ರಗಳ ಸುಳಿವು ಇರಲಿಲ್ಲ. ಮಾರ್ಚ್‌ 8ರಂದು ಬಿಡುಗಡೆಯಾಗಿದ್ದ ಯೋಗರಾಜ್‌ ಭಟ್‌ ನಿರ್ದೇಶನದ, ಪ್ರಭುದೇವ ಹಾಗೂ ಶಿವರಾಜ್‌ಕುಮಾರ್‌ ಅವರಂತಹ ಖ್ಯಾತನಾಮರಿದ್ದ ‘ಕರಟಕ ದಮನಕ’ ಸಿನಿಮಾ ನಿರೀಕ್ಷೆ ಹುಟ್ಟಿಸಿದರೂ ಹಿನ್ನಡೆ ಅನುಭವಿಸಿತು.

ADVERTISEMENT

ಬಳಿಕ ಐಪಿಎಲ್‌ ಭರಾಟೆ, ಲೋಕಸಭೆ ಚುನಾವಣೆಯ ಕಾವು ಚಿತ್ರರಂಗಕ್ಕೆ ತಟ್ಟಿತು. ಜೂನ್‌ವರೆಗೂ ಚಿತ್ರಮಂದಿರದತ್ತ ತಲೆಹಾಕಲೂ ಚಿತ್ರತಂಡಗಳು ಹಿಂಜರಿದವು. ಒಟಿಟಿ, ಸ್ಯಾಟಲೈಟ್‌ ವ್ಯವಹಾರದಲ್ಲಿ ವಿಳಂಬ, ಏಕಕಾಲದಲ್ಲಿ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ, ಪ್ಯಾನ್‌ ಇಂಡಿಯಾ ಯುಗದಲ್ಲಿ ಅತ್ಯುತ್ತಮ ಗುಣಮಟ್ಟದ ಸಿನಿಮಾವನ್ನೇ ನೀಡಬೇಕು ಎನ್ನುವ ಅಂಶಗಳೂ ಹಲವು ಸಿನಿಮಾಗಳ ವಿಳಂಬಕ್ಕೆ ಕಾರಣವಾದವು. ಜನವರಿ–ಏಪ್ರಿಲ್‌ ಅವಧಿಯಲ್ಲಿ ಕೆಲ ಪ್ರಯೋಗಾತ್ಮಕ, ಸದಭಿರುಚಿಯ, ಬಜೆಟ್‌ಗಿಂತಲೂ ಕಂಟೆಂಟ್‌ಗೆ ಒತ್ತು ನೀಡಿದ ಸಿನಿಮಾಗಳು ಬಿಡುಗಡೆಯಾದರೂ, ಚಿತ್ರಮಂದಿರಗಳಲ್ಲಿ ಅವುಗಳು ಹೆಚ್ಚು ಕಾಲ ಉಸಿರಾಡಲಿಲ್ಲ. ಸಂದೀಪ್‌ ಸುಂಕದ್‌ ನಿರ್ದೇಶನದ ‘ಶಾಖಾಹಾರಿ’, ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್‌’ ಈ ಪಟ್ಟಿಯಲ್ಲಿವೆ. ಅವೇ ಸಿನಿಮಾಗಳು ಒಟಿಟಿಯಲ್ಲಿ ಬಂದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಜನರಿಂದ ಪ್ರಶಂಸೆಗೆ ಒಳಗಾದವು.

ಚಂದನವನದಲ್ಲಿ 2024ರಲ್ಲಿ ಸುಮಾರು 210 ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ ಎಂದು ಮಾಹಿತಿ ನೀಡುತ್ತಾರೆ ಪಿಆರ್‌ಒ ಆಗಿರುವ ವಿಜಯ್‌ಕುಮಾರ್‌. ಇವುಗಳಲ್ಲಿ ಯಶಸ್ಸು ಕಂಡ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟೇ. ದುನಿಯಾ ವಿಜಯ್‌ ನಟನೆಯ ‘ಭೀಮ’, ಗಣೇಶ್‌ ನಟನೆಯ ‘ಕೃಷ್ಣಂ ಪ್ರಣಯ ಸಖಿ’, ಶ್ರೀಮುರಳಿ ನಟನೆಯ ‘ಬಘೀರ’, ಶಿವರಾಜ್‌ಕುಮಾರ್‌ ನಟನೆಯ ‘ಭೈರತಿ ರಣಗಲ್‌’, ವರ್ಷಾಂತ್ಯಕ್ಕೆ ತೆರೆಕಂಡ ಉಪೇಂದ್ರ ನಟನೆಯ ‘ಯುಐ’ ಹಾಗೂ ಸುದೀಪ್‌ ನಟನೆಯ ‘ಮ್ಯಾಕ್ಸ್‌’ ಸಿನಿಮಾಗಳಷ್ಟೇ ಸದ್ದು ಮಾಡಿದ ಸಿನಿಮಾಗಳು. ಅಂತರರಾಷ್ಟ್ರೀಯ ಮಟ್ಟಕ್ಕೆ ಹೆಜ್ಜೆ ಇಟ್ಟ ‘ಮಾರ್ಟಿನ್‌’ ಎಡವಿದ್ದು ನಿರೀಕ್ಷಿತವೆಂಬಂತಿತ್ತು. ಧನಂಜಯ ನಟನೆಯ ‘ಕೋಟಿ’ ಮನರಂಜನೆ ನೀಡುವಲ್ಲಿ ವಿಫಲವಾಯಿತು. ‘ಯುವ’ ಸಿನಿಮಾ ಯುವರಾಜ್‌ಕುಮಾರ್‌ಗೆ ಉತ್ತಮ ವೇದಿಕೆ ಹಾಕಿಕೊಟ್ಟಿತು. ಜುಲೈನಲ್ಲಿ ತೆರೆಕಂಡ ಮಿಥಿಲೇಶ್‌ ನಿರ್ದೇಶನದ, ರಾಜ್‌ ಬಿ.ಶೆಟ್ಟಿ ನಟನೆಯ ‘ರೂಪಾಂತರ’ ಸಿನಿಮಾ ಭಿನ್ನವಾದ ನಿರೂಪಣೆ, ಚಿತ್ರಕಥೆಯಿಂದ ಮೆಚ್ಚುಗೆ ಪಡೆಯಿತು. ಶರಣ್‌ ನಟನೆಯ ‘ಅವತಾರ ಪುರುಷ–2’ ಸಿನಿಮಾ ಸೀಕ್ವೆಲ್‌ ಎನ್ನುವ ಕಾರಣಕ್ಕಷ್ಟೇ ಬಿಡುಗಡೆಯಾಯಿತು.

ಈ ವರ್ಷ ‘ಕರಟಕ ದಮನಕ’(ಮಾರ್ಚ್‌ 8) ಬಿಡುಗಡೆ ಬಳಿಕ ಸ್ಟಾರ್‌ ನಟರೊಬ್ಬರ ಚಿತ್ರ ಬಿಡುಗಡೆಯಾಗಿದ್ದು ಆಗಸ್ಟ್‌ನಲ್ಲಿ. ಆ.9ಕ್ಕೆ ತೆರೆಕಂಡ ‘ಭೀಮ’ ಸಿನಿಮಾ ಮೂಲಕ ಪ್ರೇಕ್ಷಕರು ಮತ್ತೆ ಚಿತ್ರಮಂದಿರಗಳತ್ತ ಹೆಜ್ಜೆ ಇಟ್ಟರು. ಈ ಸಿನಿಮಾ ಯುವಜನತೆಯನ್ನು ಥಿಯೇಟರ್‌ಗಳಿಗೆ ಕರೆತಂದರೆ ಕುಟುಂಬಗಳನ್ನು ಚಿತ್ರಮಂದಿರಗಳತ್ತ ಸೆಳೆದಿದ್ದು ಗಣೇಶ್‌ ನಟನೆಯ ‘ಕೃಷ್ಣಂ ಪ್ರಣಯ ಸಖಿ’(ಆ.15). ಈ ಸಿನಿಮಾದ ‘ದ್ವಾಪರ’ ಹಾಡು ಚಿತ್ರಕ್ಕಿಂತಲೂ ಹಿಟ್‌ ಆಯಿತು. ಈ ಎರಡು ಸಿನಿಮಾಗಳು ಚಿತ್ರಮಂದಿರಗಳಿಗೆ ಉಸಿರು ತುಂಬಿದ ಬೆನ್ನಲ್ಲೇ ‘ಪೌಡರ್‌’, ‘ಲಾಫಿಂಗ್‌ ಬುದ್ಧ’, ‘ಪೆಪೆ’, ‘ಇಬ್ಬನಿ ತಬ್ಬಿದ ಇಳೆಯಲಿ’, ‘ಮಾರ್ಟಿನ್‌, ‘ಬಘೀರ’, ‘ಭೈರತಿ ರಣಗಲ್‌’, ‘ಯುಐ’ ಹಾಗೂ ‘ಮ್ಯಾಕ್ಸ್‌’ ಸಿನಿಮಾಗಳು ಲಗ್ಗೆ ಇಟ್ಟವು. ಡಿ.20ಕ್ಕೆ ಬಿಡುಗಡೆಗೊಂಡ ‘ಯುಐ’ ಸಿನಿಮಾದ 5 ಲಕ್ಷ ಟಿಕೆಟ್‌ಗಳು ಬುಕ್‌ ಮೈಶೋ ಮೂಲಕ ಮೂರು ದಿನಗಳಲ್ಲಿ (ಡಿ.22ರವರೆಗೆ) ಮಾರಾಟವಾಯಿತು. ಈ ಬೆಳವಣಿಗೆ ವರ್ಷಾಂತ್ಯದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದೆ.

‘ಕೆರೆಬೇಟೆ’, ‘ಶಿವಮ್ಮ’, ಫೋಟೋ’, ‘ಲೈನ್‌ಮ್ಯಾನ್‌’, ‘O2’, ‘ಸಪ್ಲೈಯರ್‌ ಶಂಕರ’, ‘ಮರ್ಫಿ’, ‘ಮರ್ಯಾದೆ ಪ್ರಶ್ನೆ’, ‘ಮೂರನೇ ಕೃಷ್ಣಪ್ಪ’, ‘ಬಿಟಿಎಸ್‌’, ‘ಜೂನಿ’, ‘ಕೇಸ್‌ ಆಫ್‌ ಕೊಂಡಾಣ’, ‘ಕಾಲಾಪತ್ಥರ್‌’, ‘ಪೆಪೆ’, ‘ರಂಗಸಮುದ್ರ’, ‘ಚಿಲ್ಲಿ ಚಿಕನ್‌’ ವರ್ಷದ ಹೊಸ ಪ್ರಯತ್ನ, ಭಿನ್ನ ಪ್ರಯೋಗಗಳ ಮೂಲಕ ಭರವಸೆ ಮೂಡಿಸಿದ ಸಿನಿಮಾಗಳು.

ಸರ್ಕಾರ ಸಿನಿಮಾ ಟಿಕೆಟ್‌ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ(ಕೆಎಫ್‌ಸಿಸಿ) ಮುಂದೆ ‘ಕನ್ನಡ ಚಲನಚಿತ್ರ ಸಂರಕ್ಷಣಾ ವೇದಿಕೆ’ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವಲ್ಲಿ ವಾಣಿಜ್ಯ ಮಂಡಳಿ ವಿಫಲವಾಯಿತು. ‘ಪುಷ್ಪ–2’ ಸಿನಿಮಾದ ತಡರಾತ್ರಿ ಹಾಗೂ ಮುಂಜಾನೆಯ ಪ್ರದರ್ಶನಗಳ ವಿರುದ್ಧ ದೂರು ನೀಡಿ ಅದನ್ನು ತಡೆಯುವಲ್ಲಿ ನಿರ್ಮಾಪಕರ ಸಂಘ ಗೆದ್ದಿತು! ಆದರೆ ಟಿಕೆಟ್‌ ದರ ನಿಗದಿ ವಿಚಾರದಲ್ಲಿ ಸೋತಿತು.

ನಟ ದ್ವಾರಕೀಶ್‌, ಕೆ.ಶಿವರಾಂ, ಟಿ.ತಿಮ್ಮಯ್ಯ, ನಿರ್ದೇಶಕ ಚಿ.ದತ್ತರಾಜ್‌, ನಟಿ–ನಿರೂಪಕಿ ಅಪರ್ಣಾ ಅಗಲಿಕೆ ಚಿತ್ರರಂಗಕ್ಕೆ ಆಘಾತ ತಂದವು. ನಟ, ನಿರ್ದೇಶಕ ಗುರುಪ್ರಸಾದ್‌ ಹಾಗೂ ನಿರ್ದೇಶಕ ವಿನೋದ್‌ ದೋಂಡಾಳೆ ಆತ್ಮಹತ್ಯೆ ಚಿತ್ರರಂಗವನ್ನು ಆತ್ಮವಿಮರ್ಶೆಗೆ ದೂಡಿದೆ.

‘ಪ್ಯಾನ್‌ ಇಂಡಿಯಾ ಎನ್ನುವುದು ಪ್ಯಾನ್‌ ಕಾರ್ಡ್‌ ಇದ್ದವರ ಕಥೆ. ಅಚ್ಚಕನ್ನಡದ ಚಿತ್ರಗಳು ಹೆಚ್ಚು ಜನರನ್ನು ಸೆಳೆಯಲಿ. ಕನ್ನಡದಲ್ಲಿ ಅದ್ಭುತವಾದ ಸಿನಿಮಾಗಳು ಬರುತ್ತಿವೆ. ಆದರೆ ಅವುಗಳಿಗೆ ವಿತರಣೆ, ಚಿತ್ರಮಂದಿರಗಳಲ್ಲಿ ಅವುಗಳನ್ನು ಇಟ್ಟು ಜನರು ಬರುವವರೆಗೆ ಸಲಹುವ ಒಂದು ಅವಕಾಶ ಬೆಳೆಯುತ್ತಿಲ್ಲ. ಒಂದೊಳ್ಳೆಯ ಚಿತ್ರ ಎರಡು ಮೂರು ಚಿತ್ರಮಂದಿರಗಳಲ್ಲಾದರೂ ಎರಡು ಮೂರು ವಾರ ಇರಬೇಕಾದ ವ್ಯವಸ್ಥೆಯಾಗಬೇಕು. ಸಿನಿಮಾ ಲಾಟರಿ ರೀತಿ ಆಗಬಾರದು’ ಎನ್ನುವ ಜಯಂತ ಕಾಯ್ಕಿಣಿ ಅವರ ಮಾತುಗಳು ಪ್ರಸ್ತುತ ಕನ್ನಡ ಚಿತ್ರರಂಗದ ಸ್ಥಿತಿಯನ್ನು ಸೂಕ್ಷ್ಮವಾಗಿ ಬಿಚ್ಚಿಟ್ಟಿದೆ.

ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳನ್ನು ತೆರೆಗೆ ತರುವ ಶಿವರಾಜ್‌ಕುಮಾರ್‌ ಅವರ ಅನಾರೋಗ್ಯದ ಸುದ್ದಿ ವರ್ಷಾಂತ್ಯದಲ್ಲಿ ಕಳವಳ ಹುಟ್ಟಿಸಿದರೂ, ‘ಭೈರತಿ ರಣಗಲ್‌’ನ ಯಶಸ್ಸು ಅದನ್ನು ಮರೆಮಾಚಿತು. ಶಸ್ತ್ರಚಿಕಿತ್ಸೆ ಬಳಿಕ ಶಿವರಾಜ್‌ಕುಮಾರ್‌ ಚೇತರಿಸಿಕೊಳ್ಳುತ್ತಿದ್ದಾರೆ. ಅನಾರೋಗ್ಯದ ನಡುವೆಯೂ ‘45’ ಚಿತ್ರವನ್ನು ಪೂರೈಸಿ, ಶಸ್ತ್ರಚಿಕಿತ್ಸೆಗೆ ಅಮೆರಿಕಕ್ಕೆ ತೆರಳುವ ಮುನ್ನ ಮತ್ತೆರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿರುವ ಅವರ ಇಚ್ಛಾಶಕ್ತಿ, ಸಿನಿಮಾ ಪ್ರೀತಿ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಅದರಲ್ಲೂ ನಟರಿಗೆ ಮಾದರಿಯಾಗಬೇಕು ಎಂದರೆ ತಪ್ಪಲ್ಲ.

2025ರ ನಿರೀಕ್ಷಿತ ಸಿನಿಮಾಗಳು 

  • ರಿಷಬ್‌ ಶೆಟ್ಟಿ ನಟನೆಯ ‘ಕಾಂತಾರ–2’: 2025 ಅ.2

  • ಯಶ್‌ ನಟನೆಯ ‘ಟಾಕ್ಸಿಕ್‌’: 2025 ಏ.10 

  • ಶಿವರಾಜ್‌ಕುಮಾರ್‌, ಉಪೇಂದ್ರ ಹಾಗೂ ರಾಜ್‌ ಬಿ.ಶೆಟ್ಟಿ ನಟನೆಯ ‘45’

  • ಧ್ರುವ ಸರ್ಜಾ ನಟನೆಯ ‘ಕೆಡಿ’

  • ರಮೇಶ್‌–ಗಣೇಶ್‌ ನಟನೆಯ ‘Yours's sincerely ರಾಮ್‌’ 

  • ಪ್ರಜ್ವಲ್‌ ದೇವರಾಜ್‌ ನಟನೆಯ ‘ಕರಾವಳಿ’ 

  • ಯುವ ರಾಜ್‌ಕುಮಾರ್‌ ನಟನೆಯ ‘ಎಕ್ಕ’: ಜೂನ್‌ 6 

  • ಕಿಚ್ಚ ಸುದೀಪ್‌ ನಟನೆಯ ‘ಬಿಲ್ಲಾ ರಂಗ ಬಾಷಾ’ 

  • ಉಪೇಂದ್ರ ನಟನೆಯ ‘ಬುದ್ಧಿವಂತ–2’ 

2024ರ ವಿವಾದಗಳು

  • ಕೊಲೆ ಆರೋಪದಲ್ಲಿ ನಟ ದರ್ಶನ್‌ ಬಂಧನ. 2024ರ ಜೂನ್‌ನಲ್ಲಿ ಜೈಲಿಗೆ, ಡಿಸೆಂಬರ್‌ನಲ್ಲಿ ಜಾಮೀನು. 

  • ‘ಮಾರ್ಟಿನ್‌’ ಚಿತ್ರದ ನಿರ್ದೇಶಕ–ನಿರ್ಮಾಪಕನ ನಡುವೆ ಕ್ರೆಡಿಟ್‌ ವಾರ್‌ 

  • ಗೋವಾದಲ್ಲಿ ನಿರ್ಮಾಪಕರಿಬ್ಬರ ಗಲಾಟೆ, ಹೊಡೆದಾಟ 

  • ಆಗಸ್ಟ್‌ನಲ್ಲಿ ಚಿತ್ರರಂಗದ ಉಳಿವಿಗಾಗಿ ಮತ್ತು ಏಳಿಗೆಗಾಗಿ ಕಲಾವಿದರ ಸಂಘದಲ್ಲಿ ನಡೆಸಿದ ಹೋಮ ಚರ್ಚೆಗೆ ಗ್ರಾಸವಾಯಿತು

  • ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನಕ್ಕೆ ಕೇರಳದ ಹೇಮಾ ಸಮಿತಿ ಮಾದರಿಯಲ್ಲಿ ಕರ್ನಾಟಕದಲ್ಲೂ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲು ಕೂಗು. ಪಾಶ್‌ ಸಮಿತಿ ರಚಿಸಿ ಹಿಂದಡಿ ಇಟ್ಟ ಕೆಎಫ್‌ಸಿಸಿ   

ಪರಭಾಷೆಗಳಲ್ಲಿ ಹಿಟ್‌ ಆದ ಚಿತ್ರಗಳು
ಹಿಂದಿಯಲ್ಲಿ ಈ ವರ್ಷ ‘ಸ್ತ್ರೀ–2’ ‘ಭೂಲ್‌ ಬುಲ್ಲಯ್ಯ–3’ ‘ಸಿಂಗಮ್‌–3’ ಹಾಗೂ ‘ಫೈಟರ್‌’ ಸಿನಿಮಾ ಮಲಯಾಳದಲ್ಲಿ ‘ಮಂಜುಮಲ್‌ ಬಾಯ್ಸ್‌’ ‘ಆವೇಶಂ’ ‘ದಿ ಗೋಟ್‌ ಲೈಫ್‌’ ‘ಪ್ರೇಮಲು’ ‘ಎಆರ್‌ಎಂ’ ‘ಗುರುವಾಯುರು ಅಂಬಲನಡಯಿಲ್‌’ ‘ಭ್ರಮಯುಗಂ’ ಸಿನಿಮಾ ತೆಲುಗಿನಲ್ಲಿ ‘ಪುಷ್ಪ–2’ ‘ಕಲ್ಕಿ 2898 ಎಡಿ’ ‘ದೇವರ’ ‘ಹನುಮ್ಯಾನ್‌’ ಸಿನಿಮಾ ಹಾಗೂ ತಮಿಳಿನಲ್ಲಿ ‘ಗೋಟ್‌’ ‘ಅಮರನ್‌’ ‘ವೇಟ್ಟಯನ್‌’ ಹಾಗೂ ‘ಮಹಾರಾಜ’ ಸಿನಿಮಾಗಳು ಸದ್ದು ಮಾಡಿದವು.  
ಭಿನ್ನ ಪ್ರಯೋಗ
ಈ ವರ್ಷ ಭಿನ್ನ ಪ್ರಯೋಗವೊಂದರ ಮೂಲಕ ಜನರೆದುರಿಗೆ ಬಂದಿದ್ದು ‘ಕೋಸಿ ಎಸ್ರು’ ಹಾಗೂ ‘ಹದಿನೇಳೆಂಟು’ ಸಿನಿಮಾಗಳು. ನಿರ್ದೇಶಕರಾದ ಚಂಪಾ ಪಿ.ಶೆಟ್ಟಿ ಹಾಗೂ ಪೃಥ್ವಿ ಕೊಣನೂರು ಜೊತೆಯಾಗಿ ಎರಡೂ ಸಿನಿಮಾಗಳನ್ನು ಜನವರಿ 26ರಂದು ಬಿಡುಗಡೆ ಮಾಡಿದರು. ಬಿಡುಗಡೆಗೆ ಲಕ್ಷಾಂತರ ರೂಪಾಯಿ ಖರ್ಚು ಬೀಳುವ ಕಾರಣ ಹೊಸ ಮಾದರಿಯ ಪ್ರಯೋಗವೊಂದಕ್ಕೆ ಕೈಹಾಕಿ ₹400ಕ್ಕೆ ಈ ಎರಡೂ ಸಿನಿಮಾದ ಟಿಕೆಟ್‌ಗಳನ್ನು ಆಸಕ್ತರಿಗೆ ಮಾರಾಟ ಮಾಡಿದವು. ‘ಧೂಮಂ’ ಹಾಗೂ ‘ಹದಿನೇಳೆಂಟು’ ಸಿನಿಮಾಗಳು ಯುಟ್ಯೂಬ್‌ನಲ್ಲಿ ಬಿಡುಗಡೆಗೊಂಡು ಒಟಿಟಿಗೆ ಪರ್ಯಾಯ ವೇದಿಕೆ ಎಂಬಂತೆ ಹೊಸ ಭಾಷ್ಯ ಬರೆದವು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.