ADVERTISEMENT

ದೊಡ್ಡಣ್ಣನ ‘ದೊಡ್ಡ’ಮಾತು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 19:30 IST
Last Updated 7 ಏಪ್ರಿಲ್ 2020, 19:30 IST
ದೊಡ್ಡಣ್ಣ
ದೊಡ್ಡಣ್ಣ   

‘ಯಪ್ಪಾ ಯಪ್ಪಾ ಯಪ್ಪಾ ನನ್ನ ಜೀವಮಾನದಲ್ಲಿ ಇಂತಹ ನಿಶ್ಯಬ್ಧ ಬೆಂಗಳೂರನ್ನು ನಾನು ನೋಡಿಯೇ ಇರಲಿಲ್ಲ’ ಎಂದು ಹಿರಿಯ ನಟ ದೊಡ್ಡಣ್ಣ ಅವರು ಲಾಕ್‌ಡೌನ್‌ ಸನ್ನಿವೇಶ ವರ್ಣಿಸಿದ್ದು ಹೀಗೆ.

ನಿಮ್ಮ ಬದುಕಿನಲ್ಲಿ ಇಂತಹ ಸನ್ನಿವೇಶ ಎಂದಾದರೂ ನೋಡಿದ್ದೀರಾ? ಎಂಬ ಪ್ರಶ್ನೆ ಮುಂದಿಟ್ಟಾಗ, ‘ಸತತ 55 ವರ್ಷಗಳಿಂದ ಬೆಂಗಳೂರಿನ ಒಡನಾಟದಲ್ಲಿರುವನು ನಾನು. ಇವು ನಿಜಕ್ಕೂ ಎಲ್ಲರ ಪಾಲಿಗೂ ಕರಾಳ ದಿನಗಳು’ ಎಂದು ಅವರು ‘ಪ್ರಜಾಪ್ಲಸ್‌’ ಜತೆಗೆ ಮಾತಿಗಿಳಿದರು.

‘ಸುಮಾರು 48 ವರ್ಷಗಳ ಹಿಂದಿನ ಘಟನೆ, ನಾನು ಆಗ ಭದ್ರಾವತಿಯಲ್ಲಿದ್ದೆ. ಪೂರ್ಣ ಸೂರ್ಯಗ್ರಹಣ ಸಂಭವಿಸಿತ್ತು. ಯಾರೂ ಸಹ ಮನೆಯಿಂದ ಆಚೆ ಬಂದಿರಲಿಲ್ಲ. ಭದ್ರಾವತಿಯಲ್ಲಿ ಹಂಸಲೇಖ ಅವರ ವಿವೇಕರಂಗ ನಾಟಕ ತಂಡ ಬೀಡುಬಿಟ್ಟಿತ್ತು. ನಾನು, ಹಂಸಲೇಖ, ಮಹೇಂದ್ರ ಸಿಂಗ್‌ ಮತ್ತು ಪ್ರತಾಪ್‌ ಇಡೀ ಊರನ್ನು ಅಡ್ಡಾಡಿದ್ದೆವು. ರಸ್ತೆ ಮೇಲೆ ಒಂದೆ ಒಂದು ಬಿಡಾಡಿ ದನ, ಕೋಳಿಪಿಳ್ಳೆಯೂ ಕಾಣಿಸಿರಲಿಲ್ಲ’ ಎಂದು ನೆನಪಿಸಿಕೊಂಡರು.

ADVERTISEMENT

‘ಮನುಕುಲಕ್ಕೆ ಪ್ರಕೃತಿ ಮೇಲೆ ದೌರ್ಜನ್ಯ ನಡೆಸದೆ ‘ನಾವು ತೃಣಕ್ಕೆ ಸಮಾನ’ವೆಂದು ಬದುಕುವ ಬಹುದೊಡ್ಡ ಪಾಠವನ್ನು ಈ ಕೊರೊನಾ ಹೇಳಿಕೊಡುತ್ತಿದೆ. ಎಲ್ಲಾ ರಂಗದಲ್ಲೂ ನೈತಿಕ ಮೌಲ್ಯಗಳ ಮರುಪ್ರತಿಷ್ಠಾಪ‌ನೆಯನ್ನು ಒತ್ತಿ ಹೇಳುತ್ತಿದೆ’ ಎನ್ನುತ್ತಾರೆ ದೊಡ್ಡಣ್ಣ.

‘ವಿಜ್ಞಾನ, ವೈದ್ಯಲೋಕ ಎಷ್ಟೇ ಮುಂದುವರಿದಿದ್ದರೂ ಕೊರೊನಾಗೆ ಔಷಧ ಕಂಡುಹಿಡಿಯಲು ಆಗದೆ ಇಡೀ ವಿಶ್ವ ಕೈಚೆಲ್ಲಿ ಕೂತಿದೆ. ಪ್ರಕೃತಿಯ ಮುಂದೆ ಮನುಷ್ಯನದು ಏನೂ ನಡೆಯದುಎನ್ನುವುದು ಈಗ ಎಲ್ಲರಿಗೂ ಮನವರಿಕೆಯಾಗುತ್ತಿದೆ.ಇದನ್ನೇ ಕಾಲಚಕ್ರವೆನ್ನುವುದು.‍ನಾವು ಪ್ರಕೃತಿ ಗೌರವಿಸಿ, ಆರಾಧಿಸಿ ಬದುಕಬೇಕು’ ಎನ್ನುವ ಮಾತು ಸೇರಿಸಿದರು.

‘ರಾಜರ ಕಾಲದಲ್ಲಿ ಶಾಪ ವಿಮೋಚನೆಗೆ ಲೋಕ ಕಲ್ಯಾಣಾರ್ಥ ಕೆರೆ, ಬಾವಿ, ಕಟ್ಟೆ ಕಟ್ಟಿಸಿ ನೀರು ಕೊಡುತ್ತಿದ್ದರು. ಜಗತ್ತಿನಲ್ಲಿ ಎಲ್ಲೂ ಇಲ್ಲದಷ್ಟು ನದಿಗಳು ಭಾರತದಲ್ಲಿ ಹರಿಯುತ್ತಿದ್ದರೂ ಅವುಗಳನ್ನು ಮಲೀನಗೊಳಿಸಿಕೊಂಡು ಲೀಟರ್‌ ನೀರಿಗೆ 25 ರೂಪಾಯಿ ಕೊಡಬೇಕಾದ ಸ್ಥಿತಿ ತಂದುಕೊಂಡಿದ್ದೇವೆ. ಇನ್ನೂ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ವ್ಯಾಪಾರದ ದಂಧೆಯಾಗಲು ಬಿಟ್ಟುಬಿಟ್ಟಿದ್ದೇವೆ. ಕೊರೊನಾ ಆವರಿಸಿದ ಮೇಲೆ ಶುಶ್ರೂಷೆಗೆ ವೈದ್ಯರು, ನರ್ಸ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲವೆಂದು ಕೂತಿದ್ದೇವೆ. ನಾವು ಈವರೆಗೆ ಯಾವುದಕ್ಕೆ ಒತ್ತುಕೊಟ್ಟಿದ್ದೆವು? ಆಡಳಿತಗಾರರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೊರೊನಾದಂತಹ ಮಹಾಮಾರಿಗಳ ವಿರುದ್ಧ ಯುದ್ಧ ಗೆಲ್ಲಬೇಕಾದರೆ ಮೊದಲು ಶಿಕ್ಷಣ ಮತ್ತು ಆರೋಗ್ಯ ಸೇವೆ ರಾಷ್ಟ್ರೀಕರಣಗೊಳಿಸಬೇಕು’ ಎಂದು ಮಾತು ವಿಸ್ತರಿಸಿದರು.

ಕ್ವಾರೆಂಟೈನ್‌ ಸಮಯ ಹೇಗೆ ಕಳೆಯುತ್ತಿದ್ದೀರಿ? ಎಂದಾಗ, ‘ನನ್ನ ಬಳಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಅತ್ಯುತ್ತಮ ಪುಸ್ತಕಗಳಿವೆ. ನೆಮ್ಮದಿಯಾಗಿ ಓದುತ್ತಿದ್ದೇನೆ. ಟಿ.ವಿಯಲ್ಲಿ 70ರ ದಶಕದ ಹಿಂದಿ ಚಿತ್ರಗಳನ್ನು ನೋಡುತ್ತಿದ್ದೇನೆ’ ಎಂದರು.

ಸಿನಿಮಾ ಕಡೆಗೆ ಮಾತು ಹೊರಳಿದಾಗ, ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಎಸ್‌ಪಿ ಪಾತ್ರ ಮಾಡಿದ್ದೇನೆ. ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅಲ್ಲದೆ, ‘ರಾಜವೀರ ಮದಕರಿನಾಯಕ’ ಸಿನಿಮಾದಲ್ಲೂ ಒಳ್ಳೆಯ ಪಾತ್ರ ಸಿಕ್ಕಿದ್ದು, ಮಠದ ಸ್ವಾಮಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇದೇ ಏಪ್ರಿಲ್‌ 14ರಿಂದ ಚಿತ್ರೀಕರಣ ಆರಂಭವಾಗಬೇಕಿತ್ತು. ಕೊರೊನಾ ಕಾರಣಕ್ಕೆ ಅದು ಮುಂದೆ ಹೋಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.