ADVERTISEMENT

ಹೊಟ್ಟೆಪಾಡಿನ ‘ಗಿರ್‌ ಗಿಟ್ಲೆ’

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 19:45 IST
Last Updated 7 ಮಾರ್ಚ್ 2019, 19:45 IST
ವೈಷ್ಣವಿ
ವೈಷ್ಣವಿ   

ಮನುಷ್ಯ ಮಾಡುವುದೆಲ್ಲವೂ ‘ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ಮಾತಿದೆ. ಮನುಷ್ಯನ ಬದುಕನ್ನೇ ಆಧರಿಸಿ ಚಿತ್ರ ತೆಗೆಯುವ ಸಿನಿಮಾ ಮಂದಿ, ಈ ಮಾತನ್ನು ಮೀರಲಾದೀತೇ?! ಅಂದಹಾಗೆ, ಈ ಪ್ರಶ್ನೆ ಬಂದಿದ್ದಕ್ಕೆ ಕಾರಣ ‘ಗಿರ್‌ ಗಿಟ್ಲೆ’ ಸಿನಿಮಾ.

ಚಿತ್ರದ ಬಗ್ಗೆ ಮಾಹಿತಿ ನೀಡಲು ಸಿನಿಮಾ ತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಮನುಷ್ಯ ಹೊಟ್ಟೆಗಾಗಿ ಹಾಕುವ ವೇಷಗಳು, ತಾಳುವ ಅವತಾರಗಳೇ ಈ ಚಿತ್ರದ ಕಥೆ’ ಎಂದರು ನಿರ್ದೇಶಕ ಎನ್. ರವಿಕಿರಣ್. ‘ಇದು ಮಾಸ್‌ ಅಂಶಗಳು ಇರುವ ಕಮರ್ಷಿಯಲ್ ಚಿತ್ರ. ಆದರೆ, ಈ ಚಿತ್ರಕ್ಕೆ ಒಂದು ಸಾಮಾಜಿಕ ಜವಾಬ್ದಾರಿ ಕೂಡ ಇದೆ. ಸಾಮಾನ್ಯ ವೀಕ್ಷಕರಿಗೆ ತಟ್ಟುವಂತೆ ಒಂದಿಷ್ಟು ಒಳ್ಳೆಯ ವಿಚಾರಗಳನ್ನು ಈ ಸಿನಿಮಾದಲ್ಲಿ ಅಳವಡಿಸಿದ್ದೇವೆ’ ಎಂದರು ರವಿಕಿರಣ್.

ರವಿಕಿರಣ್ ಅವರು ನಿರ್ದೇಶಕನ ಕ್ಯಾಪ್ ಧರಿಸಿ, ಕ್ಯಾಮೆರಾ ಹಿಂದೆ ನಿಂತು ‘ಆ್ಯಕ್ಷನ್ ಕಟ್’ ಹೇಳಿರುವುದು ಇದೇ ಮೊದಲು. ರಂಗಾಯಣ ರಘು ಅವರು ಈ ಚಿತ್ರದಲ್ಲಿ ವಿಭಿನ್ನ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಅವರೇ ಈ ಚಿತ್ರದ ಹೀರೊ ಎಂದು ಕೂಡ ಚಿತ್ರತಂಡ ಹೇಳಿದೆ. ‘ಸಿನಿಮಾ ವೀಕ್ಷಣೆ ಮುಗಿಯುವ ಹೊತ್ತಿಗೆ ರಘು ಅವರ ಪಾತ್ರ ಎಲ್ಲರಿಗೂ ಇಷ್ಟವಾಗಿರುತ್ತದೆ. ಅವರು ಹೀರೊ ಆಗಿ ಕಾಣಿಸಲಿದ್ದಾರೆ. ಇದು ನಾನು ವೀಕ್ಷಕರಿಗೆ ನೀಡುವ ಭರವಸೆ’ ಎಂದು ವಿಶ್ವಾಸದಿಂದ ಹೇಳುತ್ತಾರೆ ರವಿಕಿರಣ್.

ADVERTISEMENT

‘ಗಿರ್‌ ಗಿಟ್ಲೆ’ ಚಿತ್ರದ ಪೋಸ್ಟರ್ ವೀಕ್ಷಿಸಿದರೆ ಅದರಲ್ಲಿ ನಟ, ನಿರ್ದೇಶಕ ಉಪೇಂದ್ರ ಅವರ ಪ್ರಭಾವ ಇರುವಂತೆ ಭಾಸವಾಗುತ್ತದೆ. ರವಿಕಿರಣ್ ಅವರು ಈ ಹಿಂದೆ ಉಪೇಂದ್ರ ಅವರ ಜೊತೆ ಕೆಲಸ ಮಾಡಿದ್ದರು. ‘ಉಪ್ಪಿ ಸರ್ ಪ್ರಭಾವ ನನ್ನ ಮೇಲಿರುವುದು ನಿಜ’ ಎನ್ನುತ್ತಾರೆ ಅವರು.

ಬೆಂಗಳೂರು, ಮಂಡ್ಯ, ರಾಮನಗರ ಕಡೆ ಚಿತ್ರೀಕರಣ ನಡೆದಿದೆ. ‘ವೀಕ್ಷಕರ ಊಹೆಗೆ ಅನುಸಾರವಾಗಿ ಚಿತ್ರಕಥೆ ಇರುವುದಿಲ್ಲ’ ಎಂಬುದು ಚಿತ್ರತಂಡ ವಿಶ್ವಾಸದಿಂದ ಹೇಳಿರುವ ಮಾತು. ನಟಿ ವೈಷ್ಣವಿ ಅವರದ್ದು ಇದರಲ್ಲಿ ಕಾಲೇಜು ವಿದ್ಯಾರ್ಥಿನಿಯ ಪಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.