
ಹೊಸಬರೇ ಸೇರಿಕೊಂಡು ಸಿದ್ಧಪಡಿಸಿರುವ ‘ಪ್ರೇಮಂ ಮಧುರಂ’ ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.
ರೂಬಿ ಕ್ರಿಯೇಶನ್ಸ್ ಅಡಿಯಲ್ಲಿ ಅರಗೊಂಡ ಶೇಖರ್ ರೆಡ್ಡಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಗಾಂಧಿ ಎ.ಬಿ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದು, ಜೊತೆಗೆ ನಾಯಕನಾಗಿಯೂ ಅಭಿನಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗಾಂಧಿ, ‘ಹಲವು ನಿರ್ದೇಶಕರಗಳ ಬಳಿ ಕೆಲಸ ಕಲಿತು, ಪೂನ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದಿದ್ದೇನೆ. ಸಿನಿಮಾದಲ್ಲಿ ಪ್ರಸಕ್ತ ಯುವಜನತೆಗೆ ಕನೆಕ್ಟ್ ಆಗುವಂತೆ ಸನ್ನಿವೇಶಗಳು ಇವೆ. ಪ್ರತಿಯೊಬ್ಬರ ಬದುಕಲ್ಲಿ ಪ್ರೀತಿ ಯಶಸ್ಸು ಪಡೆದಿರುತ್ತದೆ ಇಲ್ಲವೇ ಸೋತಿರುತ್ತದೆ. ಅವರೆಲ್ಲರಿಗೂ ಇದು ಅನ್ವಯವಾಗುತ್ತದೆ. ಹೊಸದಾಗಿ ಏನನ್ನೂ ಹೇಳಲಿಕ್ಕೆ ಹೋಗಿಲ್ಲ. ಸ್ಕೂಲ್, ಕಾಲೇಜ್‌ನಲ್ಲಿ ನಾನು ಅನುಭವಿಸಿದಂತ, ಕಂಡಂತ ಒಂದಷ್ಟು ಅಂಶಗಳನ್ನು ಚಿತ್ರರೂಪಕ್ಕೆ ತರಲಾಗಿದೆ. ಬೆಂಗಳೂರು, ಮಂಗಳೂರು, ಬೈಂದೂರು, ಉಡುಪಿ, ಮಲ್ಪೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ’ ಎಂದರು.
ನಾಯಕಿಯರಾಗಿ ಐಶ್ವರ್ಯ ದಿನೇಶ್, ಅನುಷಾ ಜೈನ್ ಬಣ್ಣಹಚ್ಚಿದ್ದಾರೆ. ಸಿಹಿಕಹಿ ಚಂದ್ರು, ರಾಜೇಶ್ವರಿ, ಲಪಂಗ್ ರಾಜ, ಅನೂಪ್ ಅಗಸ್ತ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿಶಾಲ್ ಆಲಾಪ ಸಂಗೀತ ನಿರ್ದೇಶನ, ಮಂಜುನಾಥ ಹೆಗಡೆ ಛಾಯಾಚಿತ್ರಗ್ರಹಣ, ಸಂಜೀವ್ ಜಾಗಿರ್‌ದಾರ್ ಸಂಕಲನ, ಮನೀಷ್ ಕೇಶವ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಇದೇ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.