‘ಕಾಂತಾರ’ ಯಶಸ್ಸಿನ ಬಳಿಕ ನಾಡಿನ ಪ್ರಮುಖ ಆರಾಧನೆಗಳು ಸಿನಿಮಾವಾಗುತ್ತಿವೆ. ತುಳುನಾಡಿನ ಬಹುತೇಕ ಆಚರಣೆಗಳು ಈಗಾಗಲೇ ಚಿತ್ರವಾಗಿ ತೆರೆ ಮೇಲೆ ಬಂದಿವೆ. ಇದೀಗ ಬಯಲುಸೀಮೆಯ ಜನಪ್ರಿಯ ಜನಪದ ಕಲೆ ವೀರಗಾಸೆ ಹಾಗೂ ಅದರ ಅಧಿದೇವರಾದ ವೀರಭದ್ರನ ಕತೆ ಹೇಳುವ ‘ರುದ್ರಾಭಿಷೇಕಂ’ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ವಸಂತ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ. ಇತ್ತೀಚೆಗೆ ದೇವನಹಳ್ಳಿಯ ಚಿಕ್ಕತದಮಂಗಲದಲ್ಲಿ ಹಾಡಿನ ಚಿತ್ರೀಕರಣವಾಗಿದೆ. ಚಿತ್ರದ ನಾಯಕ ವಿಜಯ ರಾಘವೇಂದ್ರ ಜೊತೆಗೆ ವೀರಗಾಸೆ ಕಲಾವಿದರು ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ದೈವದ ಹಿನ್ನೆಲೆ ಇರುವ ಈ ಜನಪದ ಕಲೆಯನ್ನು ನಾಡಿನ ಮನೆ ಮನೆಗೂ ತಲುಪಿಸಬೇಕು ಎನ್ನುವುದೇ ನಮ್ಮ ಉದ್ದೇಶ’ ಎನ್ನುತ್ತಾರೆ ನಿರ್ದೇಶಕರು.
ಪ್ರಿಯಾಂಕ ತಿಮ್ಮೇಶ್ ಚಿತ್ರದ ನಾಯಕಿ. ದೇವನಹಳ್ಳಿ, ಗೋಕರ್ಣ, ಹೊನ್ನಾವರ, ಕುಮಟಾ, ಅಘನಾಶಿನಿ ಹಿನ್ನೀರಿನ ಜಾಗಗಳಲ್ಲಿ ಚಿತ್ರೀಕರಣ ನಡೆಲಾಗಿದೆ. ಪ್ಯಾನ್ ಇಂಡಿಯಾ ಕ್ರಿಯೇಶನ್ಸ್ ಚಿತ್ರವನ್ನು ನಿರ್ಮಿಸಿದೆ. ವಿ.ಮನೋಹರ್ ಸಂಗೀತ ಸಂಯೋಜನೆ, ಮುತ್ತುರಾಜ್ ಛಾಯಾಚಿತ್ರಗ್ರಹಣ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.