ADVERTISEMENT

ಮೂವರಲ್ಲಿ ರತ್ನಮಂಜರಿ ಯಾರು?

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 19:31 IST
Last Updated 28 ಮಾರ್ಚ್ 2019, 19:31 IST
ಅಖಿಲಾ ಪ್ರಕಾಶ್, ಚರಣ್ ರಾಜ್, ಪಲ್ಲವಿ ರಾಜು
ಅಖಿಲಾ ಪ್ರಕಾಶ್, ಚರಣ್ ರಾಜ್, ಪಲ್ಲವಿ ರಾಜು   

ಸ ತ್ಯಘಟನೆ ಆಧರಿಸಿ ರೂಪುಗೊಂಡಿರುವ ಸಿನಿಮಾ ‘ರತ್ನಮಂಜರಿ’ ಬಿಡುಗಡೆಗೆ ಸಿದ್ಧವಾಗುತ್ತಿದೆ, ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಉತ್ಸಾಹದಲ್ಲಿದೆ ಚಿತ್ರತಂಡ. ಚಿತ್ರದ ಕಥೆ ತುಸು ಹೆದರಿಸುತ್ತದೆ, ತುಸು ಆತಂಕ ಉಂಟುಮಾಡುತ್ತದೆ, ವೀಕ್ಷಕರಲ್ಲಿ ಕೆಲವು ಊಹೆಗಳನ್ನು ಹುಟ್ಟಿಸಿ ನಂತರ ಆ ಊಹೆ ಸುಳ್ಳು ಎಂದು ತೋರಿಸುತ್ತದೆ ಎಂದು ತಂಡ ಹೇಳಿಕೊಂಡಿದೆ.

ಚಿತ್ರದ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ‘ಇದರಲ್ಲಿ ನಾನು ಎನ್‌ಆರ್‌ಐ ಕನ್ನಡಿಗನಾಗಿ ಅಭಿನಯಿಸಿದ್ದೇನೆ. ಚಿತ್ರದಲ್ಲಿ ಆ್ಯಕ್ಷನ್‌ ದೃಶ್ಯಗಳು ಸಾಕಷ್ಟಿವೆ. ಚಿತ್ರಕ್ಕಾಗಿ ಆರು ತಿಂಗಳು ತರಬೇತಿ ಪಡೆದಿದ್ದೇನೆ. ದೊಡ್ಡ ಬಜೆಟ್‌ನ ಸಿನಿಮಾ ಇದು’ ಎಂದು ನಾಯಕ ನಟ ಚರಣ್ ರಾಜ್.

ಚಿತ್ರದ ಹಲವು ಭಾಗಗಳು ಅಮೆರಿಕದಲ್ಲಿ ಚಿತ್ರೀಕರಣಗೊಂಡಿವೆ. ಅಮೆರಿಕ ಮತ್ತು ಕೊಡಗಿನಲ್ಲಿ ಕಥೆ ನಡೆಯುತ್ತದೆ. ಈ ಸಿನಿಮಾ ಚಿತ್ರೀಕರಣದ ವೇಳೆ ಅಮೆರಿಕದ ಕನ್ನಡಿಗರು ಬಹಳ ಸಹಾಯ ಮಾಡಿದ್ದಾರಂತೆ. ಚಿತ್ರೀಕರಣ ತಂಡದ ಸದಸ್ಯರನ್ನು ಮನೆಗೆ ಕರೆದು ಊಟ ಹಾಕಿದ್ದಾರಂತೆ.

ADVERTISEMENT

ನಾಯಕ ಇದರಲ್ಲಿ ಸಸ್ಯಶಾಸ್ತ್ರಜ್ಞನಾಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆತ ಅಮೆರಿಕದಿಂದ ಭಾರತಕ್ಕೆ ಏಕೆ ಬರುತ್ತಾನೆ ಎಂಬುದು ಸಸ್ಪೆನ್ಸ್. ನಾಯಕನಿಗೆ ಅಸಾಮಾನ್ಯ ನೆನಪಿನ ಶಕ್ತಿ ಇರುತ್ತದೆ. ಅದರ ಸಹಾಯದಿಂದ ಆತ ಒಂದು ಕೊಲೆ ಪ್ರಕರಣವನ್ನು ಭೇದಿಸುತ್ತಾನೆ.

ಇದರಲ್ಲಿ ಮೂವರು ನಾಯಕಿಯರು ಇದ್ದಾರೆ. ವಿಶೇಷವೆಂದರೆ, ‘ನೀನೇ ರತ್ನಮಂಜರಿ’ ಎಂದು ನಿರ್ದೇಶಕ ಪ್ರಸಿದ್ಧ್ ಅವರು ಮೂವರಲ್ಲಿಯೂ ಹೇಳಿರುವುದು. ಮೂವರಲ್ಲಿ ರತ್ನಮಂಜರಿ ಯಾರು ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು! ‘ನಾನು ಗೌರಿ ಎನ್ನುವ ಫ್ಯಾಷನ್ ಡಿಸೈನರ್ ಪಾತ್ರ ನಿಭಾಯಿಸಿದ್ದೇನೆ’ ಎಂದರು ನಾಯಕಿ ಅಖಿಲಾ ಪ್ರಕಾಶ್.

‘ಸಿನಿಮಾ ಹೂರಣ ಪಕ್ಕಾ ಆಗಿರಬೇಕು ಎಂದು ಕೆಲಸ ಮಾಡಿದ್ದೇವೆ’ ಎಂದರು ನಿರ್ಮಾಪಕರಲ್ಲಿ ಒಬ್ಬರಾದ ಸಂದೀಪ್ ಕುಮಾರ್. ಚಿತ್ರಕ್ಕಾಗಿ ಅಂದಾಜು ₹ 4 ಕೋಟಿ ಖರ್ಚಾಗಿದೆ.

‘ದೊಡ್ಡ ಬಜೆಟ್‌ನ ಸಿನಿಮಾ ಇದಾಗಿದ್ದರೂ ನನ್ನಲ್ಲಿ ಯಾವ ತಲೆಬಿಸಿಯೂ ಇಲ್ಲ. ಏಕೆಂದರೆ ಸಿನಿಮಾ ಹಾಗೂ ಅದರಲ್ಲಿನ ಕಥಾವಸ್ತುವಿನ ಬಗ್ಗೆ ನನಗೆ ಅಷ್ಟು ಭರವಸೆ ಇದೆ’ ಎಂದರು ನಿರ್ದೇಶಕ ಪ್ರಸಿದ್ಧ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.