ADVERTISEMENT

Kannada Movies: ಈ ವಾರ 7 ಚಿತ್ರಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 0:20 IST
Last Updated 29 ಆಗಸ್ಟ್ 2025, 0:20 IST
   

ವಿಜಯ ರಾಘವೇಂದ್ರ ನಟನೆಯ ‘ರಿಪ್ಪನ್‌ ಸ್ವಾಮಿ’ ಸೇರಿಂದತೆ ಒಟ್ಟು ಏಳು ಚಿತ್ರಗಳು ಈ ವಾರ ತೆರೆಯಲ್ಲಿವೆ. 

ಅಂದೊಂದಿತ್ತು ಕಾಲ

ನಿರ್ದೇಶಕನ ಬದುಕಿನ ಪಯಣದ ಕಥೆಯನ್ನು ಹೊಂದಿರುವ ಚಿತ್ರವಿದು. ಕೀರ್ತಿ ಕೃಷ್ಣಪ್ಪ ಕಥೆ ಬರೆದು ನಿರ್ದೇಶಿಸಿದ್ದಾರೆ.

‘ನನ್ನ ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರ ಬಹಳ ವಿಶೇಷ. ಈ ಚಿತ್ರದ ಒಂದೊಂದು ಹಾಡು ಬಹಳ ವಿಭಿನ್ನವಾಗಿದ್ದು, ಅಮ್ಮ ಮಗನ ಸೆಂಟಿಮೆಂಟ್ ಹಾಡು ಮನಸನ್ನ ಸೆಳೆಯುತ್ತದೆ. ನಿರ್ದೇಶಕ ಕೀರ್ತಿ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅದರಲ್ಲೂ ಅವರ ಸಿನಿಮಾ ಬದುಕಿನ ಸುತ್ತಮುತ್ತ ನಡೆದದ್ದನ್ನು ಕಥೆಯಾಗಿಸಿಕೊಂಡು ಬಹಳ ಸಹಜವಾಗಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನನ್ನದು ಮೂರು ಶೇಡ್‌ಗಳನ್ನು ಒಳಗೊಂಡಿರುವಂಥ ಪಾತ್ರ. ಇದು ಮೂರು ವರ್ಷದ ಜರ್ನಿ ಶ್ರಮದ ಫಲ. ನನ್ನ ಅಮ್ಮನಾಗಿ ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ನನ್ನ ಮೂರನೇ ಚಿತ್ರ ಇದಾಗಿದೆ. ಇದೊಂದು ಫೀಲ್ ಗುಡ್ ಚಿತ್ರವಾಗಿದ್ದು, ಎಲ್ಲಾ ವರ್ಗದವರಿಗೂ ಇಷ್ಟವಾಗುವ ಕಥೆ’ ಎಂದಿದ್ದಾರೆ ಚಿತ್ರದ ನಾಯಕ ವಿನಯ್‌ ರಾಜ್‌ಕುಮಾರ್‌.

ADVERTISEMENT

ಭುವನ್ ಸುರೇಶ್ ಬಂಡವಾಳ ಹೂಡಿದ್ದಾರೆ. ‘ಚಿತ್ರರಂಗಕ್ಕೆ ಸಂಬಂಧಿಸಿದ ಕಥೆ. ನಾನು ಹದಿನೈದು ವರ್ಷಗಳಿಂದ ಈ ಉದ್ಯಮದಲ್ಲಿರುವೆ. ನಿರ್ದೇಶಕನ ಬಾಲ್ಯ, ಯೌವ್ವನ ಎಲ್ಲವೂ ಬರುತ್ತದೆ. ಪ್ರೇಮಕಥೆಯೂ ಇದೆ. ಒಟ್ಟಾರೆಯಾಗಿ ಒಂದು ಭಾವನಾತ್ಮಕ ಪಯಣ’ ಎಂದಿದ್ದಾರೆ ನಿರ್ದೇಶಕರು. 

ಅತಿಥಿ ಪಾತ್ರದಲ್ಲಿ ವಿ.ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ.

ತೀರ್ಥಹಳ್ಳಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ. ರಾಘವೇಂದ್ರ. ವಿ ಸಂಗೀತ, ಅಭಿಷೇಕ್.ಜಿ. ಕಾಸರಗೋಡು ಛಾಯಾಚಿತ್ರಗ್ರಹಣ, ಸುರೇಶ್ ಆರ್ಮುಗಂ ಸಂಕಲನವಿದೆ.

ಉಸಿರು

ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜ ತಿಳಿಯುವುದು ಎಂಬ ಪರಿಕಲ್ಪನೆಯಲ್ಲಿ ಸಿದ್ಧಗೊಂಡ ಚಿತ್ರ ‘ಉಸಿರು’.

ನಟ ತಿಲಕ್ ಶೇಖರ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆರ್‌.ಎಸ್‌.ಪಿ. ಪ್ರೊಡಕ್ಷನ್ ಮೂಲಕ ಶ್ರೀಮತಿ ಲಕ್ಷ್ಮಿ ಹರೀಶ್ ನಿರ್ಮಿಸಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರಕ್ಕೆ ಪನೇಮ್ ಪ್ರಭಾಕರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಆರ್.ಎಸ್.ಗಣೇಶ್ ನಾರಾಯಣನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಭೈರವರಾಮ ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ. 

‘ಅನಾಮಧೇಯ ವ್ಯಕ್ತಿಯಿಂದ ಹೆಂಡತಿಯ ಪ್ರಾಣಕ್ಕೆ ಆಪತ್ತು ಬಂದಾಗ, ಪೊಲೀಸ್ ಅಧಿಕಾರಿಯೊಬ್ಬ ತನ್ನ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ? ಎಂಬುದೇ ಮುಖ್ಯಕಥಾವಸ್ತು.  ನನ್ನ ನಿರ್ದೇಶನದ ಪ್ರಥಮ ಚಿತ್ರವಿದು. ನಮ್ಮ ಚಿತ್ರದಲ್ಲಿ ಕಂಟೆಂಟೇ ಹೀರೊ. ಗಂಡನ ಪ್ರೀತಿ, ಸ್ನೇಹ ಸಂಬಂಧ ಹೀಗೆ ಎಲ್ಲಾ ರೀತಿಯ ಭಾವನೆಗಳೂ ಚಿತ್ರದಲ್ಲಿದ್ದು, ಪ್ರತಿ ಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯ ಇದೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ’ ಎಂದಿದ್ದಾರೆ ನಿರ್ದೇಶಕರು. 

‘ಈ ಚಿತ್ರದಲ್ಲಿ ನಾನೊಬ್ಬ ತನಿಖಾಧಿಕಾರಿಯಾಗಿ ನಟಿಸಿದ್ದೇನೆ. ಇದು ಬರೀ ಮರ್ಡರ್ ಮಿಸ್ಟ್ರಿಯಲ್ಲ, ಕಥೆಯಲ್ಲಿ ತುಂಬಾ ಪದರಗಳಿವೆ. ನೋಡುತ್ತ ಹೋದಂತೆ ಕಥೆ ಅರ್ಥವಾಗುತ್ತದೆ’ ಎಂದು ನಟ ತಿಲಕ್‌ ಹೇಳಿದ್ದಾರೆ. 

ಬಾಲ್ಯ

ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಅಮೂಲ್ಯ. ಆ ಬಾಲ್ಯದ ದಿನಗಳು ಹೇಗಿರಬೇಕು? ಮಕ್ಕಳ ಬಾಲ್ಯದ ದಿನಗಳಲ್ಲಿ ಪೋಷಕರ ಪಾತ್ರ ಏನು? ಎಂಬ ವಿಷಯಗಳನ್ನೇ ಕಥೆಯಾಗಿಸಿಕೊಂಡಿರುವ ಚಿತ್ರವಿದು. ವಿ.ಎಂ.ರಾಜು(ಸುಲ್ತಾನ್ ರಾಜು) ನಿರ್ದೇಶನದ ಚಿತ್ರಕ್ಕೆ ಸತ್ಯನಾರಾಯಣಾಚಾರ್ ಬಂಡವಾಳ ಹೂಡಿದ್ದಾರೆ. 

ನಾರಾಯಣಸ್ವಾಮಿ, ನಿಶ್ಚಿತ, ಬುಲೆಟ್ ವಿನೋದ್, ಅಪ್ಸರ, ಮಾಸ್ಟರ್ ಮನೀಶ್, ಮಾಸ್ಟರ್ ಆರ್ಯನ್, ಮಾಸ್ಟರ್ ದಕ್ಷಿತ್, ಕುಮಾರಿ ದೀಕ್ಷ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇಂದು ವಿಶ್ವನಾಥ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ನೀಲ್ ಕೆಂಗಾಪುರ್ ಬರೆದಿದ್ದಾರೆ. ಲಕ್ಮಣ್ ರೆಡ್ಡಿ ಸಂಕಲನ ಹಾಗೂ ರಮೇಶ್ ಕೊಯಿರಾ ಅವರ ಛಾಯಾಚಿತ್ರಗ್ರಹಣವಿರುವ ‘ಬಾಲ್ಯ’ಕ್ಕೆ ಎ.ಟಿ.ರವೀಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಮುರುಗ ಸನ್ ಆಫ್ ಕಾನೂನು

ಕಿರುತೆರೆಯ ನಟ ಮುನಿಕೃಷ್ಣ ನಾಯಕನಾಗಿ ನಟಿಸಿದ್ದ ‘ಕೊಡೆಮುರುಗ’ ಚಿತ್ರ ಯಶಸ್ಸು ಕಂಡಿತ್ತು. ಆ ಚಿತ್ರದ  ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮುನಿಕೃಷ್ಣ ಅವರ ಎರಡನೇ ಚಿತ್ರವಿದು. ಅವರು ನಾಯಕನಾಗಿ ನಟಿಸುವ ಜೊತೆಗೆ ತಮ್ಮ ಎ.ಎಸ್.ಎ. ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣ ಕೂಡ ಮಾಡಿದ್ದಾರೆ. ವಿಜಯ್ ಪ್ರವೀಣ್ ನಿರ್ದೇಶನದ ಚಿತ್ರದಲ್ಲಿ ಮಮತ ರಾವುತ್, ಚಿರಶ್ರೀ ಅಂಚನ್, ಶೋಭರಾಜ್, ಥ್ರಿಲರ್ ಮಂಜು, ಉಮೇಶ್, ವಿನಯ ಪ್ರಸಾದ್, ಹುಲಿ ಕಾರ್ತಿಕ್, ಚಂದ್ರ ಪ್ರಭ ಮುಂತಾದವರು ಅಭಿನಯಿಸಿದ್ದಾರೆ.

‘ಗಾಂಧಿ ಮತ್ತು ನೋಟು’, ‘ಗೌರಿ ಶಂಕರ’ ಚಿತ್ರಗಳೂ ಈವಾರ ತೆರೆ ಕಾಣುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.