ಸತೀಶ್ ನೀನಾಸಂ ನಾಯಕನಾಗಿ ನಟಿಸುತ್ತಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ವಿನೋದ್ ದೋಂಡಾಳೆ ಅಕಾಲಿಕ ಮರಣದಿಂದ ಅರ್ಧಕ್ಕೆ ನಿಂತಿದ್ದ ಈ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ.
‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ಈ ಚಿತ್ರದಲ್ಲಿ ಅಂಬಿಕಾ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಅನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದೆ. ಚಿತ್ರದ ಸಂಕಲನಕಾರ ಮನು ಶೇಡ್ಗಾರ್ ನಿರ್ದೇಶಕನ ಕ್ಯಾಪ್ ತೊಟ್ಟು ಚಿತ್ರವನ್ನು ಪೂರ್ಣಗೊಳಿಸುವ ಹೊಣೆ ಹೊತ್ತುಕೊಂಡಿದ್ದಾರೆ.
‘ಸದ್ಯ ಚನ್ನಪಟ್ಟಣದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಚಾಮರಾಜನಗರದ ಸುತ್ತಮುತ್ತ ಚಿತ್ರದ ಕೊನೆಯ ಭಾಗವನ್ನು ಚಿತ್ರೀಕರಿಸಿದ್ದೇವೆ. ಇದು 70ರ ದಶಕದಲ್ಲಿ ನಡೆಯುವ ಕ್ರಾಂತಿಕಾರಿ ಯುವಕನ ಕಥೆ. ಏಪ್ರಿಲ್ 15ರ ವೇಳೆ ಇಡೀ ಚಿತ್ರದ ಶೂಟಿಂಗ್ ಪೂರ್ಣಗೊಳಿಸುವ ಯೋಜನೆಯಿದೆ’ ಎಂದಿದ್ದಾರೆ ಸತೀಶ್ ನೀನಾಸಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.