ಚಂದನವನದ ತೆರೆಗಳಲ್ಲಿ ಈ ವಾರ ಆರು ಸಿನಿಮಾಗಳು ತೆರೆಕಂಡಿವೆ.
ಎಕ್ಸ್ ಆ್ಯಂಡ್ ವೈ: ‘ರಾಮಾ ರಾಮಾ ರೇ’ ಖ್ಯಾತಿಯ ನಿರ್ದೇಶಕ ಡಿ.ಸತ್ಯಪ್ರಕಾಶ್ ನಿರ್ದೇಶನದ ಸಿನಿಮಾವಿದು. ಅವರೇ ಈ ಸಿನಿಮಾ ನಿರ್ಮಿಸಿ, ನಿರ್ದೇಶಿಸುವುದರ ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಸತ್ಯಪ್ರಕಾಶ್ ನಿರ್ದೇಶನದ ನಾಲ್ಕನೇ ಚಿತ್ರ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಅವರೇ ಬರೆದಿದ್ದೇನೆ. ಚಿತ್ರದಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳಿರುವ ‘ಆಂಬೋ ಆಟೋ’ ಈ ಚಿತ್ರದ ಮಖ್ಯ ಪಾತ್ರಧಾರಿಯಾಗಿದೆ. ಬೃಂದಾ ಆಚಾರ್ಯ, ಅಯಾನ, ಅಥರ್ವ ಪ್ರಕಾಶ್ ತಾರಾಗಣದಲ್ಲಿದ್ದಾರೆ. ಹರ್ಷ ಕೌಶಿಕ್ ಸಂಗೀತ, ಲವಿತ್ ಛಾಯಾಚಿತ್ರಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ ಚಿತ್ರಕ್ಕಿದೆ.
ತಿಮ್ಮನ ಮೊಟ್ಟೆಗಳು: ರಕ್ಷಿತ್ ತೀರ್ಥಹಳ್ಳಿ ಬರೆದು ನಿರ್ದೇಶಿಸಿರುವ ಚಿತ್ರವಿದು. ಶ್ರೀಕೃಷ್ಣ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಚೊಚ್ಚಲ ನಿರ್ಮಾಣದ ಚಿತ್ರ ಇದಾಗಿದೆ. ರಕ್ಷಿತ್ ತೀರ್ಥಹಳ್ಳಿಯವರೇ ಬರೆದ ‘ಕಾಡಿನ ನೆಂಟರು’ ಕಥಾ ಸಂಕಲನದಿಂದ ಆಯ್ದ ಒಂದು ಕಥೆ ಇದಾಗಿದೆ. ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನಗೊಂಡು ಪ್ರಶಂಸೆ ಪಡೆದಿದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮಸಂವೇದನೆಗಳನ್ನೊಳಗೊಂಡ ಈ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ, ಪೃಥ್ವಿರಾಜ್ ಕೊಪ್ಪ, ಪ್ರಾಣೇಶ್ ಕೂಳೆಗದ್ದೆ ಮುಂತಾದವರಿದ್ದಾರೆ. ಪ್ರವೀಣ್ ಎಸ್. ಛಾಯಾಚಿತ್ರಗ್ರಹಣ, ಕೆಂಪರಾಜು ಬಿ.ಎಸ್. ಸಂಕಲನ ಹಾಗೂ ಹೇಮಂತ್ ಜೋಯಿಷ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಈ ಸಿನಿಮಾಗಳ ಜೊತೆಗೆ ಅಶೋಕ್ ಸಾಮ್ರಾಟ್ ನಿರ್ದೇಶನದ ‘ಅವನಿರಬೇಕಿತ್ತು’, ರಾಜೇಶ್ ಮೂರ್ತಿ ನಿರ್ದೇಶನದ ‘ಬ್ಲಡಿ ಬಾಬು’, ಚಂದನ್ ರಾಜ್ ನಟನೆಯ ‘ರಾಜರತ್ನಾಕರ’ ಹಾಗೂ ಸಮರ್ಥ್ ಎಂ.ನಟಿಸಿ ನಿರ್ದೇಶಿಸಿರುವ ‘ಅಥಣಿ’ ಸಿನಿಮಾ ತೆರೆಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.