ನಟ ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ನಿರ್ಮಾಣದ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ‘ಜೆಸಿ’ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು ಚಿತ್ರದ ‘ರ್‍ಯಾಪ್’ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಪ್ರಖ್ಯಾತ್ ನಾಯಕನಾಗಿ ನಟಿಸಿರುವ ಸಿನಿಮಾ ಇದಾಗಿದೆ. 2018ರಲ್ಲಿ ಬಿಡುಗಡೆಯಾದ ‘ನಡುವೆ ಅಂತರವಿರಲಿ’ ಸಿನಿಮಾದಲ್ಲಿ ಹೀರೊ ಆಗಿ ಮಿಂಚಿದ್ದ ಪ್ರಖ್ಯಾತ್ ಹಲವು ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ‘ವ್ರೂಮ್...ವ್ರೂಮ್...ರೋಡ್ ಮೇಲೆ ಬೀಸ್ಟ್ ಬಂತು ಸೈಡ್ ಕೊಡು...’ ಎನ್ನುವ ರ್‍ಯಾಪ್ ಹಾಡನ್ನು ಖ್ಯಾತ ರ್‍ಯಾಪರ್‌ಗಳಾದ ಎಮ್ ಸಿ ಬಿಜ್ಜು ಮತ್ತು ರಾಹುಲ್ ಡಿಟ್ಟೋ ಅವರು ಬರೆದು, ಸಂಗೀತ ನೀಡಿ ಹಾಡಿದ್ದಾರೆ.
ಹಾಡಿನ ಮೂಲಕವೇ ಪ್ರಚಾರ ಆರಂಭಿಸಿರುವ ತಂಡ ಟ್ರೇಲರ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ‘ಜೆಸಿ’ ಎಂದರೆ ಜುಡಿಷಿಯಲ್ ಕಸ್ಟಡಿ. ಜೈಲಿಂದ ಹೊರಗೆ ಬಂದಿರುವ ಯುವಕನ ಕಥೆ ಈ ಸಿನಿಮಾದಲ್ಲಿ ಇರಲಿದೆ. ಸಿನಿಮಾಗೆ ಚೇತನ್ ಜೈರಾಮ್ ಆ್ಯಕ್ಷನ್ ಕಟ್ ಹೇಳಿದ್ದು, ಚೇತನ್ ಅವರಿಗೆ ಇದು ಚೊಚ್ಚಲ ಸಿನಿಮಾ. ಪ್ರಖ್ಯಾತ್‌ಗೆ ಜೋಡಿಯಾಗಿ ಭಾವನ ರೆಡ್ಡಿ ನಟಿಸಿದ್ದಾರೆ. ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಮಾಸ್ ಕಥಾಹಂದರ ಇರುವ ಸಿನಿಮಾಗೆ ಕಾರ್ತಿಕ್ ಛಾಯಾಚಿತ್ರಗ್ರಹಣ, ರೋಹಿತ್ ಸೋವರ್ ಸಂಗೀತ ನಿರ್ದೇಶನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.