ADVERTISEMENT

ಕನ್ನಡ ಸಿನಿಮಾ: ಸ್ಟಾರ್‌ಗಳ ಪಾಲಿಗೆ ಲಕ್ಕಿ ಡಿಸೆಂಬರ್‌

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 1:45 IST
Last Updated 5 ಡಿಸೆಂಬರ್ 2025, 1:45 IST
<div class="paragraphs"><p>ಸ್ಟಾರ್‌ಗಳ ಪಾಲಿಗೆ ಲಕ್ಕಿ ಡಿಸೆಂಬರ್‌ </p></div>

ಸ್ಟಾರ್‌ಗಳ ಪಾಲಿಗೆ ಲಕ್ಕಿ ಡಿಸೆಂಬರ್‌

   

ಸಾಲು, ಸಾಲು ರಜೆಗಳಿರುವಾಗ, ಹಬ್ಬಗಳ ಸಂದರ್ಭಗಳಲ್ಲಿ ಚಿತ್ರ ಬಿಡುಗಡೆ ಮಾಡಿದರೆ ಸಾಕಷ್ಟು ಜನ ಚಿತ್ರಮಂದಿರಗಳತ್ತ ಬರುತ್ತಾರೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಇದೆ. ಸಾಕಷ್ಟು ಸಲ ಅದು ನಿಜವಾಗಿದೆ ಕೂಡ. ವಿಶೇಷವಾಗಿ ಗೌರಿ–ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ, ಕ್ರಿಸ್‌ಮಸ್‌ ಸಮಯದಲ್ಲಿ ಸ್ಟಾರ್‌ ನಟರ ಸಿನಿಮಾಗಳು ಹೆಚ್ಚು ಬಿಡುಗಡೆಗೊಳ್ಳುತ್ತವೆ.

ಕನ್ನಡದ ಪಾಲಿಗೆ ಕಳೆದ ಕೆಲ ವರ್ಷಗಳಿಂದ ಗೌರಿ–ಗಣೇಶ ಹಬ್ಬದ ಸಂದರ್ಭ ಮತ್ತು ಡಿಸೆಂಬರ್‌  ಅದೃಷ್ಟದ ಅವಧಿ ಎನಿಸಿದೆ. ಕ್ರಿಸ್‌ಮಸ್‌ ರಜೆ, ಹೊಸ ವರ್ಷದ ಸಡಗರದ ನಡುವೆ ಜನ ಸಿನಿಮಾಕ್ಕೆ ಬರುತ್ತಾರೆ ಎಂಬ ನಂಬಿಕೆ ಸುಳ್ಳಾಗಿಲ್ಲ. ದರ್ಶನ್‌ ಹಿಂದಿನ ಸಿನಿಮಾ ‘ಕಾಟೇರ’ ಡಿ.29 ಕ್ಕೆ ತೆರೆ ಕಂಡು ಸೂಪರ್‌ ಹಿಟ್‌ ಎನಿಸಿಕೊಂಡಿತ್ತು. ಹೀಗಾಗಿ ‘ಡೇವಿಲ್‌’ ಕೂಡ ಡಿಸೆಂಬರ್‌ನಲ್ಲಿ (ಡಿ.11) ತೆರೆ ಕಾಣುತ್ತಿದೆ.

ADVERTISEMENT

ಹಿಟ್‌ಗೆ ಎದುರು ನೋಡುತ್ತಿದ್ದ ನಟ ಸುದೀಪ್‌ಗೆ ಕಳೆದ ಡಿಸೆಂಬರ್‌ ಆಶಾದಾಯಕವಾಗಿತ್ತು. ಕ್ರಿಸ್‌ಮಸ್‌ನಂದು ತೆರೆಕಂಡ ‘ಮ್ಯಾಕ್ಸ್‌’ ಯಶಸ್ವಿಯಾಗಿತ್ತು. ಅದೇ ಕಥೆಯ ಭಾಗವಾದ ‘ಮಾರ್ಕ್‌’ ಚಿತ್ರ ಕೂಡ ಈ ವರ್ಷ ಅದೇ ದಿನ ತೆರೆಗೆ ಬರಲಿದೆ ಎಂದು ಚಿತ್ರತಂಡ ಬಹಳ ಹಿಂದೆಯೇ ಘೋಷಿಸಿತ್ತು.

ಶಿವರಾಜ್‌ಕುಮಾರ್‌, ಉಪೇಂದ್ರ ನಟನೆಯ ‘45’ ಆಗಸ್ಟ್‌ನಲ್ಲಿಯೇ ತೆರೆ ಕಾಣಬೇಕಿತ್ತು. ಆದರೆ ಗ್ರಾಫಿಕ್ಸ್‌ ಕೆಲಸಗಳ ವಿಳಂಬದಿಂದ ಚಿತ್ರ ತೆರೆಗೆ ಬರಲಿಲ್ಲ. ಆ ತಂಡ ಕೂಡ ಪರಿಷ್ಕೃತ ಬಿಡುಗಡೆ ದಿನಾಂಕಕ್ಕೆ ಡಿಸೆಂಬರ್‌ ತಿಂಗಳನ್ನೇ ಆಯ್ದುಕೊಂಡಿದೆ. ಡಿ.25ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ತಂಡ ಈಗಾಗಲೇ ಘೋಷಿಸಿದೆ.

‘ಎರಡು ಸಲ ಬಿಡುಗಡೆ ದಿನಾಂಕ ಮುಂದೆ ಹಾಕಿದ್ದೇವೆ. ಆಗಸ್ಟ್‌ನಲ್ಲಿ ಬಿಟ್ಟರೆ ನಮಗೆ ಇದ್ದ ಆಯ್ಕೆ ಅಕ್ಟೋಬರ್‌. ಆಗಲೂ ನಮ್ಮ ಗ್ರಾಫಿಕ್ಸ್‌ ಸಿದ್ಧವಾಗಿರಲಿಲ್ಲ. ಡಿಸೆಂಬರ್‌ ಆಯ್ಕೆ ಅನಿವಾರ್ಯವಾಯಿತು. ಅದೃಷ್ಟ ಅಂತಲ್ಲ, ಜನರಿಗೆ ಹೆಚ್ಚು ಬಿಡುವು ಸಿಗುವ ಅವಧಿಗಳಿವು. ಇಲ್ಲವಾದಲ್ಲಿ ಸಂಕ್ರಾಂತಿಗೆ ಬರಬೇಕು. ಆಗಲೂ ದೊಡ್ಡ ಸಿನಿಮಾಗಳಿವೆ. ನಮ್ಮ ಸಿನಿಮಾ ಪ್ರಾರಂಭವಾಗಿ ಈಗಾಗಲೇ ಮೂರು ವರ್ಷಗಳಾಗಿವೆ. ಈಗಲೂ ಬಿಡುಗಡೆ ಮಾಡದಿದ್ದರೆ ಸಮಸ್ಯೆಗಳಾಗುತ್ತವೆ. ಹೀಗಾಗಿ ‘ಮಾರ್ಕ್‌’ ಎದುರೇ ಬರುತ್ತಿದ್ದೇವೆ. ಎರಡೂ ಕನ್ನಡ ಸಿನಿಮಾಗಳೇ. ಇಬ್ಬರಿಗೂ ಒಳಿತಾಗಲಿ’ ಎನ್ನುತ್ತಾರೆ ‘45’ ಚಿತ್ರದ ನಿರ್ಮಾಕ ರಮೇಶ್‌ ರೆಡ್ಡಿ. 

‘ಅವತಾರ್‌: ಫೈರ್‌ ಆ್ಯಂಡ್‌ ಆ್ಯಶ್‌’ ಚಿತ್ರ ಈ ತಿಂಗಳೇ ಬಿಡುಗಡೆಗೊಳ್ಳುತ್ತಿದೆ. ಇವುಗಳಲ್ಲದೆ ತಮಿಳು, ತೆಲುಗು, ಮಲಯಾಳದ ಕೆಲ ಸ್ಟಾರ್‌ ನಟರ ಸಿನಿಮಾಗಳೂ ತೆರೆಗೆ ಬರುತ್ತಿವೆ. ಒಟ್ಟಿನಲ್ಲಿ ಡಿಸೆಂಬರ್‌ನಲ್ಲಿ ದಸರಾಕ್ಕಿಂತಲೂ ಹೆಚ್ಚು ದೊಡ್ಡ ಸಿನಿಮಾಗಳು ತೆರೆಯಲ್ಲಿವೆ. ದೊಡ್ಡ ಸಿನಿಮಾಗಳು ಬರುತ್ತವೆ ಎಂಬ ಕಾರಣಕ್ಕೆ ಸಣ್ಣ ಬಜೆಟ್‌ನ ಸಿನಿಮಾಗಳು ಈ ತಿಂಗಳಲ್ಲಿ ಬಿಡುಗಡೆಯಿಂದ ದೂರ ಉಳಿಯುತ್ತವೆ. ಈ ಕಾರಣಕ್ಕೆ ನವೆಂಬರ್‌ ಹಾಗೂ ಜನವರಿ, ಫೆಬ್ರುವರಿಯಲ್ಲಿ ಕನ್ನಡದಲ್ಲಿ ಸಿನಿಮಾಗಳ ಬಿಡುಗಡೆ ಸಂಖ್ಯೆ ವಿಪರೀತ ಎನ್ನುವಷ್ಟಿರುತ್ತವೆ. 2025ರ ಪ್ರಾರಂಭದ ಮೂರು ತಿಂಗಳಲ್ಲಿ ಕನಿಷ್ಠ 50 ಸಿನಿಮಾಗಳು ತೆರೆ ಕಂಡಿದ್ದವು. ನವೆಂಬರ್‌ನಲ್ಲಿ ವಾರಕ್ಕೆ ಸರಾಸರಿ ಐದು ಸಿನಿಮಾಗಳು ಬಿಡುಗಡೆಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.