ADVERTISEMENT

ಕಾಂತಾರ ಅಧ್ಯಾಯ-1| ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ: ಸುಮಲತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2025, 14:07 IST
Last Updated 11 ಅಕ್ಟೋಬರ್ 2025, 14:07 IST
   

ಬೆಂಗಳೂರು: 'ಕಾಂತಾರ ಅಧ್ಯಾಯ-1' ಕನ್ನಡ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ ಎಂದು ಹಿರಿಯ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಷ್‌ ಶ್ಲಾಘಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಆತ್ಮೀಯ ರಿಷಬ್‌ ಅವರೇ,ನಿನ್ನೆ 'ಕಾಂತಾರ ಅಧ್ಯಾಯ-1' ಸಿನಿಮಾ ನೋಡಿದೆ. ಕಾಂತಾರದ ಅದ್ಭುತ ಯಶಸ್ಸಿಗೆ ಅಭಿನಂದನೆಗಳು. ನಿಮ್ಮ ನಿರ್ದೇಶನ ಹಾಗೂ ಪ್ರತಿಯೊಬ್ಬ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ ಪರಿ ನನ್ನನ್ನು ಮೂಕವಿಸ್ಮಿತಗೊಳಿಸಿದೆ. ಈ ದೃಶ್ಯ ವೈಭವವನ್ನು ತೆರೆಯ ಮುಂದೆ ತರಲು ಹಾಕಿದ ಪರಿಶ್ರಮ ಹಾಗೂ ಕರ್ನಾಟಕದ ಜಾನಪದ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಸೌಂದರ್ಯವನ್ನು ಪ್ರದರ್ಶಿಸಲು ನಿಮ್ಮ ಶ್ರಮವನ್ನು ಅತ್ಯಂತ ಗೌರವ ಹಾಗೂ ಹೆಮ್ಮೆಯಿಂದ ಶ್ಲಾಘಿಸುತ್ತೇನೆ ಎಂದಿದ್ದಾರೆ.

ಅಕ್ಷರಶಃ ಇದೊಂದು ಸಿನಿಮಾಟಿಕ್ ಮಾಸ್ಟರ್‌ಪೀಸ್‌. ಕಾಂತಾರ -1 ಕನ್ನಡ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಕಲೆಯ ಬಗ್ಗೆ ನಿಮಗಿರುವ ಉತ್ಸಾಹ ಮತ್ತು ಶ್ರದ್ಧೆ ಯುವ ಕಲಾವಿದರು ಹಾಗೂ ಚಿತ್ರರಂಗಕ್ಕೆ ಸ್ಫೂರ್ತಿಯಾಗಿದೆ.

ADVERTISEMENT

ಇಡೀ ಕಾಂತಾರ ತಂಡವು ತಮ್ಮ ಅತ್ಯುತ್ತಮ ಕೆಲಸಕ್ಕಾಗಿ ಪ್ರಶಂಸೆಗೆ ಅರ್ಹವಾಗಿದೆ. ಕನ್ನಡ ಚಿತ್ರರಂಗದ ಪಯಣಕ್ಕೆ ಹೊಸ ಆಯಾಮವನ್ನು ಹಾಕಿಕೊಟ್ಟಿರುವ ಈ ದಂತಕಥೆ ಕನ್ನಡ ಚಿತ್ರರಂಗದ ಇತಿಹಾಸ ಪುಟದಲ್ಲಿ ವಿಶೇಷ ಸ್ಥಾನ ಪಡೆಯಲಿದೆ ಎಂದು ಹಾರೈಸಿದ್ದಾರೆ.

ನಮ್ಮ ಚಿತ್ರರಂಗಕ್ಕೆ ವಿಶ್ವದಾದ್ಯಂತ ಗೌರವ ಮತ್ತು ಕೀರ್ತಿಯನ್ನು ತಂದಿರುವ ನಿಮ್ಮ ಮುಂದಿನ ಎಲ್ಲಾ ಯೋಜನೆಗಳು ಇನ್ನಷ್ಟು ಯಶಸ್ಸನ್ನು ತಂದುಕೊಡಲಿ ಎಂದು ಶುಭ ಹಾರೈಸುವೆ ಎಂದೂ ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಿಷಬ್‌ ಶೆಟ್ಟಿ, ನಿಮ್ಮ ಪ್ರೀತಿಯ ಹಾಗೂ ಮೆಚ್ಚುಗೆಯ ಮಾತುಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.