ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಕಾಂತಾರ–ಅಧ್ಯಾಯ–1’ ಅ.2ರಂದು ತೆರೆಕಾಣುತ್ತಿದೆ. ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ನಾನಾವತಾರಗಳಲ್ಲಿ ರಿಷಬ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಸೋಮವಾರ (ಸೆ.22) ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನಲ್‌ನಲ್ಲಿ ಟ್ರೇಲರ್ ತೆರೆಕಂಡಿದ್ದು, ಒಂದೇ ದಿನದಲ್ಲಿ 5.5 ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿದೆ.
ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಂತಸ ಹಂಚಿಕೊಂಡಿರುವ ಚಿತ್ರತಂಡ, ‘ಟ್ರೇಲರ್ 5.5 ಕೊಟಿ ವೀಕ್ಷಣೆ ಕಂಡಿದೆ. ಇನ್ನೂ ವೀಕ್ಷಣೆ ಮುಂದುವರಿದಿದೆ. ಕಾಂತಾರದ ದಿವ್ಯ ಕಿಡಿ ಇಂಟರ್‌ನೆಟ್‌ನಲ್ಲಿ ಸಂಚಲ ಮೂಡಿಸಿದೆ’ ಎಂದು ಬರೆದುಕೊಂಡಿದೆ.
‘ಕಾಂತಾರ’ ಸಿನಿಮಾದಲ್ಲಿ ‘ಶಿವ’ನ ತಂದೆ ಕಾಣೆಯಾದ ಜಾಗದಿಂದ ‘ಪ್ರೀಕ್ವೆಲ್’ನ ಕಥೆ ಆರಂಭವಾಗಲಿದೆ. ‘ಶಿವ’ನ ಹಿರಿಯರ ಕಥೆ ‘ಪ್ರೀಕ್ವೆಲ್’ನಲ್ಲಿದ್ದು, ಧರ್ಮ ಕಾಪಾಡಲು ಬಂದ ಶಿವನ ಗಣದ ಉಲ್ಲೇಖ ಇಲ್ಲಿದೆ. ಆದಿ ದೈವ ಎಂದು ಕರೆಯಲ್ಪಡುವ ‘ಬೆರ್ಮೆ’ಯ ಸುತ್ತ ಈ ಸಿನಿಮಾ ಸಾಗುತ್ತದೆ. ‘ಈಶ್ವರ’ನಾಗಿಯೂ ರಿಷಬ್ ಶೆಟ್ಟಿ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜಕುಮಾರಿಯಾಗಿ ರುಕ್ಮಿಣಿ ವಸಂತ್, ‘ರಾಜ’ನಾಗಿ ಮಲಯಾಳ ನಟ ಜಯರಾಮ್, ‘ಕುಲಶೇಖರ’ ಎಂಬ ಪಾತ್ರದಲ್ಲಿ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಚಿತ್ರದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.