ADVERTISEMENT

ಕಾಂತಾರ | ಮಣ್ಣಿನ ಮಕ್ಕಳಿದ್ದರೆ ಸಿನಿಮಾ ಅಚ್ಚುಕಟ್ಟು: ರಿಷಬ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 23:35 IST
Last Updated 24 ಸೆಪ್ಟೆಂಬರ್ 2025, 23:35 IST
ರಿಷಬ್‌ 
ರಿಷಬ್‌    

‘ಕಾಂತಾರ’ ಸಿನಿಮಾವನ್ನು ಕನ್ನಡಿಗರೇ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿದರು. ಕಥೆ ಯಾರನ್ನು ಆಯ್ಕೆ ಮಾಡುತ್ತದೆ ಎನ್ನುವುದು ಮುಖ್ಯ. ಕಥೆಯೇ ಕಲಾವಿದರನ್ನು ಕೇಳಬೇಕು. ಇದನ್ನು ಹೊರತುಪಡಿಸಿ ಖ್ಯಾತನಾಮರನ್ನು ತಂದು ಪಾತ್ರಗಳನ್ನು ಮಾಡಿಸಿದರೆ ಅದು ಫಲಿಸುವುದಿಲ್ಲ’...

ಇದು ನಟ ರಿಷಬ್‌ ಶೆಟ್ಟಿ ಮಾತು. ‘ಕಾಂತಾರ’ದಲ್ಲಿರುವ ತಾರಾಬಳಗದ ಕುರಿತು ಇತ್ತೀಚೆಗೆ ಮಾತನಾಡಿದ ರಿಷಬ್‌, ‘‘ಕುಲಶೇಖರ’ ಎಂಬ ಪಾತ್ರದಲ್ಲಿ ನಟಿಸಿರುವ ನಟ ಗುಲ್ಶನ್‌ ದೇವಯ್ಯ ಕನ್ನಡಿಗರೇ. ಕಥೆ ಕೇಳದೇ ಇರುವಾಗ ಒಂದು ಪಾತ್ರಕ್ಕೆ ಖ್ಯಾತನಾಮರನ್ನು ತಂದರೆ ಸಿನಿಮಾಗೂ ಅನ್ಯಾಯವಾಗುತ್ತದೆ. ನಮ್ಮ ಸಿನಿಮಾದಲ್ಲಿ ಸ್ಥಳೀಯರ ಜೊತೆಗೆ ಬೇರೆ ಬೇರೆ ರಾಜ್ಯಗಳ ಜನರು ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಕೃತಿಯ ಸಂಘರ್ಷವನ್ನು ಸ್ವಲ್ಪ ಆಳವಾಗಿ ವಿಶ್ಲೇಷಿಸಿದ್ದೇವೆ. ಹೇಳುತ್ತಿರುವುದೇ ಮಣ್ಣಿನ ಕಥೆಯನ್ನಾದ ಕಾರಣ ಮಣ್ಣಿನ ಮಕ್ಕಳಷ್ಟೇ ಇದ್ದರೆ ಸಿನಿಮಾ ಅಚ್ಚುಕಟ್ಟಾಗಿ ಬರಲು ಸಾಧ್ಯ’ ಎಂದರು.   

‘ಇದು ಕದಂಬರ ಕಥೆಯಲ್ಲ. ಆ ಕಾಲದಲ್ಲಿ ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಆ ಕಾಲಘಟ್ಟದ ಕಥೆಯನ್ನು ಇವತ್ತಿನ ಪೀಳಿಗೆಗೆ ಹೇಳುತ್ತಿರುವುದರಿಂದ, ಅವರಿಗೆ ಅರ್ಥವಾಗಬೇಕು. ಹೀಗಾಗಿ ಕರಾವಳಿ ಕನ್ನಡ ಬಳಸಿಕೊಳ್ಳಲಾಗಿದೆ. ದೈವದ ನುಡಿಗಳು, ಜನಪದ ಹಾಡುಗಳು ತುಳುವಿನಲ್ಲೇ ಇರಲಿವೆ. ಇನ್ನು 50 ‘ಕಾಂತಾರ’ ಆದರೂ ಅದು ತುಳುವಿನಲ್ಲೇ ಇರಲಿದೆ. ಸಿನಿಮಾ ಆರಂಭಿಸುವ ಸಂದರ್ಭದಲ್ಲಿ ಕುಂದಾಪುರ ಕನ್ನಡದಲ್ಲಿ ಕಥೆ ಹೇಳಿದರೆ ಹೇಗೆ ಎಂಬ ಆಲೋಚನೆಯೂ ಇತ್ತು. ಆದರೆ ಹೆಚ್ಚು ಜನರಿಗೆ ಇದು ತಲುಪದೇ ಇರಬಹುದು ಎನ್ನುವ ಪ್ರಶ್ನೆಯೂ ಎದ್ದ ಕಾರಣ ಕರಾವಳಿ ಕನ್ನಡ ಬಳಕೆ ಮಾಡಿದ್ದೇವೆ’ ಎನ್ನುತ್ತಾರೆ ರಿಷಬ್‌. 

ADVERTISEMENT

‘ಕರಾವಳಿ ಎನ್ನುವುದು ಪರಶುರಾಮರ ಸೃಷ್ಟಿ ಹಾಗೂ ಬೆಮ್ಮೆರ್‌ ಸೃಷ್ಟಿ ಎನ್ನುವುದರ ಬಗ್ಗೆ ಚರ್ಚೆಗಳು ಇವೆ. ನಾನು ಎರಡರಲ್ಲಿಯೂ ನಂಬಿಕೆ ಇರುವವನು. ದೈವ ದೇವರನ್ನು ಬಹಳ ನಂಬುವವನು ನಾನು. ಪಾಡ್ದನಗಳಲ್ಲಿ ಕೇಳಿರುವ ವಿಚಾರವನ್ನು ಕಥೆಯಲ್ಲಿ ಬಳಸಿಕೊಂಡಿದ್ದೇನೆ. ನನಗೆ ಮೊದಲ ಬಾರಿ ಸಿನಿಮಾ ಮಾಡಿದಂತೆ ಅನಿಸುತ್ತಿದೆ. ಆರೇಳು ಭಾಷೆಗಳಲ್ಲಿ ಕಾಂಟೆಂಟ್‌ ಸಿದ್ಧಪಡಿಸುತ್ತಿದ್ದೇವೆ. ಟ್ರೇಲರ್‌ ಬಿಡುಗಡೆ ಮಾಡಬೇಕೋ ಬೇಡವೋ ಎನ್ನುವ ಪ್ರಶ್ನೆಯೂ ಇತ್ತು. ಹಾಡುಗಳನ್ನೂ ಶೀಘ್ರದಲ್ಲೇ ರಿಲೀಸ್‌ ಮಾಡುತ್ತೇವೆ’ ಎಂದರು. 

‘ಚಿತ್ರರಂಗವನ್ನು ಒಬ್ಬರಿಂದ ಉಳಿಸಲು ಸಾಧ್ಯವಿಲ್ಲ. ಸಿನಿಮಾ ಜನರಿಗೆ ಇಷ್ಟವಾದರೆ ಚಿತ್ರರಂಗ ತಾನಾಗಿಯೇ ಬೆಳೆಯುತ್ತದೆ. ಒಳ್ಳೆಯ ಕಥೆಗಳು, ಹೊಸ ವಿಚಾರಗಳು ಬರಬೇಕು. ಜನರ ಅಭಿರುಚಿ ಬದಲಾಗಿದೆ, ಇದಕ್ಕೆ ತಕ್ಕ ಹಾಗೆ ಸಿನಿಮಾಗಳು ಇರಬೇಕು. ಸಿನಿಮಾ ಬಹಳ ಪ್ರಾಮಾಣಿಕವಾಗಿದ್ದಾಗ, ಜನರೇ ಸಿನಿಮಾವನ್ನು ತೆಗೆದುಕೊಂಡು ಹೋಗುತ್ತಾರೆ’ ಎನ್ನುತ್ತಾರೆ ರಿಷಬ್‌.

ಬಿಡುಗಡೆಯಾಯಿತು ವಿಶೇಷ ಅಂಚೆ ಲಕೋಟೆ...

‘ಕಾಂತಾರ’ ಸಿನಿಮಾದ ಚಿತ್ರವುಳ್ಳ ವಿಶೇಷ ಅಂಚೆ ಲಕೋಟೆ ಹಾಗೂ ಭೂತಕೋಲದ ಚಿತ್ರವುಳ್ಳ ಎರಡು ಪೋಸ್ಟ್‌ಕಾರ್ಡ್‌ಗಳನ್ನು ಭಾರತೀಯ ಅಂಚೆ ಬಿಡುಗಡೆಗೊಳಿಸಿದೆ. ಹೊಂಬಾಳೆ ಫಿಲ್ಮ್ಸ್‌ ಸಹಯೋಗದಲ್ಲಿ ಕರ್ನಾಟಕ ಪೋಸ್ಟಲ್‌ ವಿಭಾಗವು ಇದನ್ನು ಹೊರತಂದಿದೆ. 

ವಿಶೇಷ ಲಕೋಟೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.