ADVERTISEMENT

ಅಟ್ಲಿ ಮೈಬಣ್ಣದ ಕುರಿತು ಹೇಳಿಕೆ: ಕಪಿಲ್ ಶರ್ಮಾ ಪ್ರತಿಕ್ರಿಯೆ ಇದು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2024, 10:10 IST
Last Updated 18 ಡಿಸೆಂಬರ್ 2024, 10:10 IST
ಅಟ್ಲಿ
ಅಟ್ಲಿ   

ನವದೆಹಲಿ: ‘ದಿ ಗ್ರೇಟ್‌ ಇಂಡಿಯನ್ ಕಪಿಲ್ ಶರ್ಮಾ’ ಶೋನಲ್ಲಿ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರ ಮೈಬಣ್ಣದ ಬಗ್ಗೆ ಲೇವಡಿ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದಿಯ ಖ್ಯಾತ ನಿರೂಪಕ ಕಪಿಲ್ ಶರ್ಮಾ, ದ್ವೇಷ ಹರಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ತಮ್ಮ ನಿರ್ದೇಶನದ ‘ಬೇಬಿ ಜಾನ್’ ಸಿನೆಮಾದ ಪ್ರಚಾರದ ಭಾಗವಾಗಿ ‘ದಿ ಗ್ರೇಟ್‌ ಇಂಡಿಯನ್ ಕಪಿಲ್ ಶರ್ಮಾ’ ಶೋನಲ್ಲಿ ನಾಯಕ ವರುಣ್ ಧವನ್‌ ಸೇರಿದಂತೆ ಚಿತ್ರತಂಡದೊಂದಿಗೆ ಅಟ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಪಿಲ್ ಶರ್ಮಾ ಅವರು ಅಟ್ಲಿ ಅವರಿಗೆ ತಮಾಷೆಯ ಪ್ರಶ್ನೆಗಳನ್ನು ಕೇಳಿ ಕಾಲೆಳೆದಿದ್ದಾರೆ.

ಕಾರ್ಯಕ್ರಮದ ವಿಡಿಯೊ ತುಣುಕೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಪಿಲ್ ಶರ್ಮಾ ಅವರು ಅಟ್ಲಿ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಗಾಯಕಿ ಚಿನ್ಮಯಿ ಶ್ರೀಪಾದ ಸೇರಿದಂತೆ ಹಲವು ಎಕ್ಸ್‌ ಬಳಕೆದಾರರು ಆರೋಪಿಸಿದ್ದಾರೆ. ಕಪಿಲ್‌ ಅವರ ಹೇಳಿಕೆಗಳನ್ನು ‘ಕ್ರೂರ ಮತ್ತು ಜನಾಂಗೀಯನಿಂದನೆ’ ಎಂದು ಟೀಕಿಸಿದ್ದಾರೆ.

ADVERTISEMENT

ವಿಡಿಯೊದಲ್ಲಿ, ಶರ್ಮಾ ಅವರು ಅಟ್ಲಿಯವರಿಗೆ ‘ನೀವು ಇಷ್ಟು ಚಿಕ್ಕವಯಸ್ಸಿನಲ್ಲೇ ಇಷ್ಟು ದೊಡ್ಡ ನಿರ್ಮಾಪಕ-ನಿರ್ದೇಶಕರಾಗಿದ್ದು, ಸ್ಟಾರ್‌ಗಳನ್ನು ಭೇಟಿ ಮಾಡಲು ಹೋದಾಗ ನೀವೇ ಅಟ್ಲಿ ಎಂದು ತಿಳಿಯದೆ ‘ಅಟ್ಲಿ ಎಲ್ಲಿದ್ದಾರೆ?’ ಎಂದು ಇಲ್ಲಿಯವರೆಗೆ ಯಾರಾದರೂ ಕೇಳಿದ್ದಾರ?’ ಎಂದು ಕೇಳಿದ್ದರು.

ಏತನ್ಮಧ್ಯೆ, ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ ಶರ್ಮಾ, ‘ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಅಟ್ಲಿ ಅವರ ಲುಕ್‌ ಬಗ್ಗೆ ನಾನೆಲ್ಲಿ ಕಾಮೆಂಟ್‌ ಮಾಡಿದ್ದೇನೆ ವಿವರಿಸುವಿರಾ? ದಯವಿಟ್ಟು ದ್ವೇಷವನ್ನು ಹರಡಬೇಡಿ. ಪ್ರತ್ಯಕ್ಷವಾಗಿ ನೋಡಿ ನಿರ್ಧರಿಸಿ. ಕುರಿಗಳಂತೆ ಯಾವುದೋ ಟ್ವೀಟ್ ಅನ್ನು ಅನುಸರಿಸಬೇಡಿ’ ಎಂದು ಮನವಿ ಮಾಡಿದ್ದಾರೆ.

ಮನುಷ್ಯನ ಮನಸ್ಸು ನೋಡಬೇಕೆ ವಿನಃ ಸೌಂದರ್ಯವನ್ನಲ್ಲ’

ಕಪಿಲ್ ಅವರ ಪ್ರಶ್ನೆಗೆ ಸೌಮ್ಯವಾಗಿ ಉತ್ತರಿಸಿದ್ದ ಅಟ್ಲಿ, ‘ಮನುಷ್ಯರ ಮನಸನ್ನು ನೋಡಬೇಕೇ ಹೊರತು ಅವರ ಬಾಹ್ಯ ಸೌಂದರ್ಯವನ್ನಲ್ಲ’ ಎಂದು ಹೇಳಿದ್ದಾರೆ.

‘ನಾನು ನಿಮ್ಮ ಪ್ರಶ್ನೆಯನ್ನು ಅರ್ಥಮಾಡಿಕೊಂಡಿರುವ ರೀತಿಯಲ್ಲಿ ಉತ್ತರಿಸಲು ಪ್ರಯತ್ನಿಸುತ್ತೇನೆ. ನಾನು ಎ.ಆರ್. ಮುರುಗದಾಸ್ ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ಏಕೆಂದರೆ ಅವರು ನನ್ನ ಮೊದಲ ಚಿತ್ರವನ್ನು ನಿರ್ಮಿಸಿದ್ದಾರೆ. ಅವರು ನನ್ನ ಸ್ಕ್ರಿಪ್ಟ್ ನೋಡಿದರೇ ಹೊರತು ನಾನು ಹೇಗೆ ಕಾಣುತ್ತೇನೆ ಎಂದಲ್ಲ’ ಎಂದು ಹೇಳಿದ್ದಾರೆ.

ದಳಪತಿ ವಿಜಯ್ ಅಭಿನಯದ ‘ತೇರಿ’, ‘ಬಿಗಿಲ್’ ಮತ್ತು ಶಾರುಖ್ ಖಾನ್ ನಟನೆಯ ‘ಜವಾನ್’ ನಂತಹ ಹಲವು ಚಿತ್ರಗಳನ್ನು ಅಟ್ಲಿ ನಿರ್ದೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.