ADVERTISEMENT

ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ

ವಿನಾಯಕ ಕೆ.ಎಸ್.
Published 13 ಡಿಸೆಂಬರ್ 2024, 20:12 IST
Last Updated 13 ಡಿಸೆಂಬರ್ 2024, 20:12 IST
<div class="paragraphs"><p>ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ</p></div>

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

   

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಡಿ.14 ರ ಶನಿವಾರ ಚುನಾವಣೆ ನಡೆಯಲಿದ್ದು, ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳಿಂದ ಒಟ್ಟು 128 ಅಭ್ಯರ್ಥಿಗಳು ಕಣದಲ್ಲಿದ್ದು, ಅದರಲ್ಲಿ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಈ ಸಲ ಪ್ರದರ್ಶಕ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು, ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಎಂ. ಮತ್ತು ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಸುಂದರ್‌ ರಾಜು ಆರ್‌. ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಸುಂದರ್‌ ರಾಜು ಹಾಲಿ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಯಾಗಿದ್ದಾರೆ. ಈಗಿನ ಆಡಳಿತ ಮಂಡಳಿಯ ಅವಧಿ ಸೆಪ್ಟೆಂಬರ್‌ನಲ್ಲಿಯೇ ಮುಕ್ತಾಯಗೊಂಡಿದ್ದು, ವಿವಿಧ ಕಾರಣ ನೀಡಿ ಹಾಲಿ ಆಡಳಿತ ಮಂಡಳಿ ಚುನಾವಣೆ ನಡೆಸಿರಲಿಲ್ಲ. 

ADVERTISEMENT

ಪದಾಧಿಕಾರಿ ಹುದ್ದೆಗೆ ತೀವ್ರ ಪೈಪೋಟಿ

ಪ್ರತಿ ವರ್ಷ ವಾಣಿಜ್ಯ ಮಂಡಳಿಯ ಅಧ್ಯಕ್ಷ, ಮೂರು ವಲಯಗಳಿಂದ ತಲಾ ಒಬ್ಬರು ಖಜಾಂಚಿ, ಮೂರು ವಲಯಕ್ಕೆ ಪ್ರತ್ಯೇಕ ಉಪಾಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ ನಡೆಯುತ್ತದೆ. 

ಉಪಾಧ್ಯಕ್ಷ ಸ್ಥಾನಕ್ಕೆ ಮೂರು ವಲಯಗಳಲ್ಲಿಯೂ ತಲಾ ಮೂರು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಗೌರವ ಕಾರ್ಯದರ್ಶಿ ಹುದ್ದೆಗೆ ನಿರ್ದೇಶಕ, ನಿರ್ಮಾಪಕ ದಯಾಳ್‌ ಪದ್ಮನಾಭನ್‌, ‘ದುನಿಯ’ ಚಿತ್ರದ ನಿರ್ಮಾಪಕ ಸಿದ್ದರಾಜು ಟಿ.ಪಿ, ವಿರೇಶ್‌ ಚಿತ್ರಮಂದಿರದ ಮಾಲೀಕ ಕುಶಾಲ್‌ ಎಲ್‌.ಸಿ, ವಿತರಕ ಕೆಸಿಎನ್‌ ಕುಮಾರ್‌ ಮೊದಲಾದವರು ಭಿನ್ನ ವಲಯಗಳಿಂದ ಕಣಕ್ಕಿಳಿದಿದ್ದಾರೆ. ಖಂಜಾಚಿ ಹುದ್ದೆಗೆ ನಟ ಸುಂದರ್‌ರಾಜ್‌ ಸೇರಿ ಮೂವರು ಕಣದಲ್ಲಿದ್ದಾರೆ. 

ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ಜಯಸಿಂಹ ಮುಸುರಿ, ಅಣಜಿ ನಾಗರಾಜ್‌ ಮೊದಲಾದವರು ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕಾಗಿ ಸ್ಪರ್ಧಿಸಿದ್ದಾರೆ.

ಯುವ ಸ್ಪರ್ಧಿಗಳು

ವಾಣಿಜ್ಯ ಮಂಡಳಿಯಲ್ಲಿ ಒಟ್ಟು 1409 ಮತದಾರರಿದ್ದು, ನಿರ್ಮಾಪಕ ವಲಯದಿಂದಲೇ 889 ಮತಗಳಿವೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಆಶ್ವಾಸನೆ, ಔತಣಕೂಟ ಆಯೋಜನೆ ಸೇರಿದಂತೆ ಹಲವು ಬಗೆಯ ಕಸರತ್ತು ನಡೆಸಿದ್ದಾರೆ. ಈ ಸಲ ಚುನಾವಣೆಯಲ್ಲಿ ಯುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ.

‘ಚಿತ್ರೋದ್ಯಮದ ಜೊತೆಗೆ ಸಹಕಾರಿ ತತ್ವದ ಕುರಿತು ಆಳವಾದ ಜ್ಞಾನ ಹೊಂದಿರುವ ಯುವಕರು ವಾಣಿಜ್ಯ ಮಂಡಳಿಗೆ ಬರಬೇಕು. ಮೂರು ವಲಯಗಳ ಹೊರತಾಗಿ ಕಾರ್ಮಿಕರು, ಕಲಾವಿದರು ಕೂಡ ವಾಣಿಜ್ಯ ಮಂಡಳಿಯ ಭಾಗ. ಹೀಗಾಗಿ ಸಮಸ್ಯೆಗಳು ಎದುರಾದಾಗ ಯಾವುದೇ ಒಂದು ವಲಯದ ಹಿತದೃಷ್ಟಿ ನೋಡದೆ ಎಲ್ಲ ವಲಯಗಳ ಬಗ್ಗೆ ಯೋಚಿಸುವ ಮನಸ್ಥಿತಿಯವರು ವಾಣಿಜ್ಯ ಮಂಡಳಿಗೆ ಅಗತ್ಯ’ ಎನ್ನುತ್ತಾರೆ ಯುವ ಸ್ಪರ್ಧಿ ಕುಶಾಲ್‌ ಎಲ್‌.ಸಿ. 

ಕೇರಳದಲ್ಲಿ ಹೇಮಾ ವರದಿ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲಿಯೂ ಲೈಂಗಿಕ ದೌರ್ಜನ್ಯ ತಡೆ ಸೇರಿದಂತೆ ಮಹಿಳಾ ಸದಸ್ಯರ ಹಿತರಕ್ಷಣೆಗಾಗಿ ಸಮಿತಿ ರಚನೆಗೆ ಒತ್ತಡ ಹೆಚ್ಚಿದೆ. ಹಾಲಿ ಆಡಳಿತ ಸಮಿತಿ ರಚಿಸಿ, ಕೊನೆ ಗಳಿಗೆಯಲ್ಲಿ ಮುಂದಿನ ಆಡಳಿತ ಮಂಡಳಿ ಇದನ್ನು ನಿಭಾಯಿಸಲಿದೆ ಎಂದು ಸಮಿತಿಯನ್ನು ಕೈಬಿಟ್ಟಿತ್ತು. ಹೀಗಾಗಿ ಈ ಸಲದ ಆಡಳಿತ ಮಂಡಳಿಗೆ ಈ ಸಮಿತಿ ರಚನೆಯ ಹೆಚ್ಚುವರಿ ಹೊಣೆಗಾರಿಕೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.