ADVERTISEMENT

ಸಂದರ್ಶನ | ‘KD’ ಲೋಕದಲ್ಲಿ ‘ಮಚ್‌ಲಕ್ಷ್ಮಿ’

ಅಭಿಲಾಷ್ ಪಿ.ಎಸ್‌.
Published 4 ಮೇ 2023, 22:02 IST
Last Updated 4 ಮೇ 2023, 22:02 IST
ನಟಿ ರೀಷ್ಮಾ ನಾಣಯ್ಯ
ನಟಿ ರೀಷ್ಮಾ ನಾಣಯ್ಯ   
‘ಏಕ್‌ ಲವ್‌ ಯಾ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟ ನಟಿ ರೀಷ್ಮಾ ನಾಣಯ್ಯ ಸಿನಿ ಬ್ಯಾಂಕ್‌ ಹಿಗ್ಗುತ್ತಿದೆ. ನಟ ಉಪೇಂದ್ರ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಯುಐ’ ಬಳಿಕ ‘ಜೋಗಿ’ ಖ್ಯಾತಿಯ ಪ್ರೇಮ್‌ ನಿರ್ದೇಶಿಸುತ್ತಿರುವ ‘KD’ಯ ‘ಮಚ್‌ಲಕ್ಷ್ಮಿ’ಯಾಗಿ ರೀಷ್ಮಾ ಸೆಟ್‌ಗೆ ಪ್ರವೇಶಿಸಿದ್ದಾರೆ.

ಶಿಕ್ಷಣದ ಜೊತೆಗೆ ಸಿನಿಮಾ ಪಯಣ ಹೇಗೆ ಸಾಗುತ್ತಿದೆ?

‘ಏಕ್‌ ಲವ್‌ ಯಾ’ ಸಿನಿಮಾ ಆರಂಭವಾದಾಗ ನಾನಿನ್ನೂ ಪದವಿಪೂರ್ವ ಕಾಲೇಜಿನಲ್ಲಿದ್ದೆ. ಆ ಸಿನಿಮಾ ಬಿಡುಗಡೆಯಾದಾಗ ನನಗೆ 18 ವರ್ಷ. ಶಿಕ್ಷಣದ ಜೊತೆಗೆ ಸಿನಿಮಾ ಪಯಣ ಆರಂಭಿಕ ಹಂತದಲ್ಲಿ ಸವಾಲೆನಿಸುತ್ತಿತ್ತು. ಪ್ರಸ್ತುತ ನಾನು ಜ್ಯೋತಿ ನಿವಾಸ್‌ ಕಾಲೇಜಿನಲ್ಲಿ ಬಿ.ಎ ಪತ್ರಿಕೋದ್ಯಮ ಶಿಕ್ಷಣ ಪಡೆಯುತ್ತಿದ್ದು, ಅಂತಿಮ ವರ್ಷದ ವಿದ್ಯಾರ್ಥಿನಿ. ಚಿತ್ರೀಕರಣದ ಸಮಯ ಹೊಂದಿಸಿಕೊಂಡು ಶಿಕ್ಷಣವನ್ನೂ ಮುಂದುವರಿಸುತ್ತಿದ್ದೇನೆ. ನಿರ್ದೇಶಕರಾದ ಪ್ರೇಮ್‌ ಹಾಗೂ ನನ್ನ ಇತರೆ ಚಿತ್ರದ ನಿರ್ದೇಶಕರಿಂದ ಯಾವುದೇ ಒತ್ತಡ ನನ್ನ ಮೇಲೆ ಇಲ್ಲ. ಶಿಕ್ಷಣ, ಪರೀಕ್ಷೆಗಳಿಗೆ ಅವರು ಪ್ರಾಶಸ್ತ್ಯ ನೀಡಿ, ಚಿತ್ರೀಕರಣದ ದಿನಾಂಕಗಳನ್ನು ನಿಗದಿಪಡಿಸುತ್ತಿದ್ದಾರೆ. ಜೊತೆಗೆ ಪ್ರಾಧ್ಯಾಪಕರೂ ನನ್ನ ಸಿನಿಪಯಣಕ್ಕೆ ಅಷ್ಟೇ ಬೆಂಬಲವನ್ನು ನೀಡುತ್ತಿದ್ದಾರೆ. ಸದ್ಯ ಉಪೇಂದ್ರ ಅವರು ನಿರ್ದೇಶಿಸುತ್ತಿರುವ ‘ಯುಐ’ ಹಾಗೂ ಪ್ರೇಮ್‌ ಅವರ ‘KD’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೇನೆ. ಹೀಗಾಗಿ ಶಿಕ್ಷಣ–ಸಿನಿಮಾ ಎನ್ನುವ ಎರಡೂ ಪಯಣ ಇದೀಗ ಸುಲಭವಾಗಿದೆ. 

ನಿಮ್ಮ ಸಿನಿಗ್ರಾಫ್‌, ಸಿನಿ ಬ್ಯಾಂಕ್‌ ಹಿಗ್ಗುತ್ತಲೇ ಇದೆ...

ADVERTISEMENT

ಇದು ನನ್ನ ಪುಣ್ಯ. ಕಿರಿಯ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಹೆಜ್ಜೆ ಇಡುತ್ತೇನೆ ಎಂದು ಕನಸೂ ಕಂಡಿರಲಿಲ್ಲ. ಈ ಕ್ಷೇತ್ರಕ್ಕೆ ಹೆಜ್ಜೆ ಇಟ್ಟ ಬಳಿಕ ನನ್ನನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆಯೇ ಎನ್ನುವ ಭಯವೂ ಇತ್ತು. ಅದೃಷ್ಟ ನನ್ನ ಜೊತೆಗಿತ್ತು ಎನ್ನಬಹುದು. ‘ಏಕ್‌ ಲವ್‌ ಯಾ’ ಸಿನಿಮಾ ಬಿಡುಗಡೆಯಾದ ಬಳಿಕ ನನ್ನನ್ನು ಹಲವರು ‘ಅನಿತಾ’ ಎಂದೇ ಕರೆಯುತ್ತಾರೆ. ಸಿನಿಮಾದಲ್ಲಿ ನಟಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅದೂ ಮೊದಲ ಸಿನಿಮಾವೇ ಖ್ಯಾತ ನಿರ್ದೇಶಕರ ಜೊತೆಯಾದ ಮೇಲೆ ಅವಕಾಶಗಳ ಸುರಿಮಳೆಯೇ ಆಗಿದೆ. ‘ಬಾನದಾರಿಯಲ್ಲಿ’, ‘ಯುಐ’ ಹೀಗೆ ಒಳ್ಳೆಯ ಕಥೆಗಳಿರುವ ಸಿನಿಮಾಗಳು ನನಗೆ ದೊರೆಯುತ್ತಿವೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ನನಗೆ ಪ್ರೇಮ್‌ ಹಾಗೂ ರಕ್ಷಿತಾ ಅವರೇ ಗಾಡ್‌ಫಾದರ್‌ಗಳು. ಹೀಗಾಗಿ ಹೊಸ ಅವಕಾಶಗಳು ದೊರೆತಾಗ ಅವರ ಬಳಿ ಚರ್ಚಿಸುತ್ತೇನೆ. ಅವರ ಮಾರ್ಗದರ್ಶನ ನನಗೆ ಇದ್ದೇ ಇದೆ.  

‘KD’ಗೆ ನೀವು ‘ಮಚ್‌ಲಕ್ಷ್ಮಿ’ಯಾಗಿದ್ದು ಹೇಗೆ?

ಪ್ರೇಮ್‌ ಅವರು ‘KD’ ಸಿನಿಮಾವನ್ನು ಘೋಷಿಸಿದಾಗಲಿನಿಂದಲೂ ಹೀರೊಯಿನ್‌ ಯಾರು? ಹಾಲಿವುಡ್‌ನಿಂದ, ಬಾಲಿವುಡ್‌ನಿಂದ ಯಾರನ್ನಾದರೂ ಆಯ್ಕೆ ಮಾಡುತ್ತೀರಾ? ಎನ್ನುವ ಪ್ರಶ್ನೆಯನ್ನು ಆಗಾಗ್ಗೆ ಕೇಳುತ್ತಿದ್ದೆ. ಇದಕ್ಕೆ ಅವರು ‘ಹೌದೌದು ಅಲ್ಲಿಂದಲೇ ಬರ್ತಾರೆ’ ಎಂದು ಹೇಳುತ್ತಿದ್ದರು. ಒಮ್ಮೆ ಲುಕ್‌ ಟೆಸ್ಟ್‌ಗಾಗಿ ನನ್ನನ್ನೇ ಕರೆದರು. ನಾನು ಮೊದಲಿಗೆ ಅವರನ್ನು ನಂಬಿರಲಿಲ್ಲ. ನಾನೇ ಹೀರೊಯಿನ್‌ ಅಂದಾಗ, ‘ಇಂಥ ಬಿಗ್‌ ಪ್ರಾಜೆಕ್ಟ್‌ನಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತೇ’ ಎಂದು ಆಶ್ಚರ್ಯವಾಯಿತು. ನಾನು ಹಿಂದೆಂದೂ ಕಾಣಿಸಿಕೊಳ್ಳದ ರೀತಿ ಈ ಸಿನಿಮಾದಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರದ ಹೆಸರು ‘ಮಚ್‌ಲಕ್ಷ್ಮಿ’. ಪ್ರತಿ ಪಾತ್ರದ ಲುಕ್‌ ವಿಚಾರದಲ್ಲಿ ಪ್ರೇಮ್‌ ಅವರು ಬಹಳ ಕಠಿಣ. ‘ಮಚ್‌ಲಕ್ಷ್ಮಿ’ ಲುಕ್‌ಗಾಗಿ ಸುಮಾರು ಒಂದು ತಿಂಗಳು ಟ್ರಯಲ್‌ ನಡೆಸಿದ್ದೇವೆ. ಪ್ರತಿ ದಿನವೂ ಒಂದಲ್ಲಾ ಒಂದು ಬದಲಾವಣೆ ಆಗುತ್ತಲೇ ಇತ್ತು. ಇಷ್ಟು ಸಮಯ ನೀಡಿ ಶೂಟಿಂಗ್‌ ನಡೆಸಿದ ಫಲಿತಾಂಶ ಜನರ ಮುಂದಿದೆ. ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, 15 ದಿನಗಳಿಂದ ಧ್ರುವ ಸರ್ಜಾ ಅವರ ಜೊತೆಗೆ ನನ್ನ ಭಾಗದ ಶೂಟಿಂಗ್‌ ನಡೆಯುತ್ತಿದೆ. 

‘KD’ಯಂಥ ಬಿಗ್‌ ಪ್ರಾಜೆಕ್ಟ್‌ ಮೂಲಕ ಪ್ಯಾನ್‌ ಇಂಡಿಯಾ ಲೋಕಕ್ಕೆ ಹೆಜ್ಜೆ ಇಡುತ್ತಿದ್ದೀರಿ..

ನನ್ನ ಮೇಲಿನ ಜವಾಬ್ದಾರಿ ಹೆಚ್ಚಿದೆ. ‘ಏಕ್‌ ಲವ್‌ ಯಾ’ಗೆ ಹೋಲಿಸಿದರೆ ಇದೊಂದು ಮೆಗಾ ಪ್ರಾಜೆಕ್ಟ್‌. ಪ್ರೇಮ್‌ ಅವರು ನನ್ನ ನಟನೆಯ ಮೇಲೆ ನಂಬಿಕೆ ಇಟ್ಟು ಈ ಪಾತ್ರ ನೀಡಿದ್ದಾರೆ ಎಂದರೆ ನನ್ನಲ್ಲಿ ಆ ಪಾತ್ರವನ್ನು ಅವರು ನೋಡಿದ್ದಾರೆ. ಸಿನಿಮಾದೊಳಗೆ ಶೇ 100ಕ್ಕೆ ನೂರು ನಾನು ಒಳಗೊಳ್ಳುತ್ತಿದ್ದೇನೆ. ನನ್ನಲ್ಲಿರುವ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಸಿನಿಮಾದಲ್ಲೂ ಅಗಾಧ ಅವಕಾಶವಿದೆ. ಅದನ್ನು ನಾನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದೇನೆ. ಜೊತೆಗೆ ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ, ರವಿಚಂದ್ರನ್‌ ಅವರಂಥ ಹೆಸರಾಂತ ಕಲಾವಿದರ ದಂಡೇ ಇಲ್ಲಿದೆ. ಇಷ್ಟು ಬೇಗ ಸಿನಿರಂಗದ ದಿಗ್ಗಜರ ಜೊತೆ ಕೆಲಸ ಮಾಡುತ್ತೇನೆ ಎಂದು ಊಹಿಸಿರಲಿಲ್ಲ. ಇವೆಲ್ಲವೂ ನನಸಾದ ಕ್ಷಣವಿದು. 

ಮೊದಲ ಪ್ರಾಜೆಕ್ಟ್‌ ಹಾಗೂ ‘KD’ ಶೂಟಿಂಗ್‌ ಅನುಭವ..

‘ಏಕ್‌ ಲವ್‌ ಯಾ’ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ಪ್ರಯಾಣವೇ ಹೆಚ್ಚಿತ್ತು. ಊಟಿ, ಉತ್ತರ ಭಾರತ ಹೀಗೆ ಹಲವು ಕಡೆ ಚಿತ್ರೀಕರಣ ನಡೆದಿದೆ. ‘KD’ ಸಂಪೂರ್ಣವಾಗಿ ಸೆಟ್‌ನೊಳಗೇ ನಡೆಯುವ ಚಿತ್ರ. ‘KD’ ಸೆಟ್‌ ಅತ್ಯಂತ ದೊಡ್ಡ ಸೆಟ್‌. ಅದರೊಳಗೆ ಮೊದಲ ಹೆಜ್ಜೆ ಇಟ್ಟಾಗ ಆ ಲೋಕ ನೋಡಿ ನಾನಂತೂ ಆಶ್ಚರ್ಯಪಟ್ಟಿದ್ದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.