ADVERTISEMENT

ತನಿಖಾಧಿಕಾರಿಗಳಿಗೆ ಬೆದರಿಕೆ: ಮಲಯಾಳಿ ನಟ ದಿಲೀಪ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2022, 8:33 IST
Last Updated 7 ಫೆಬ್ರುವರಿ 2022, 8:33 IST
ಮಲಯಾಳಂ ನಟ ದಿಲೀಪ್
ಮಲಯಾಳಂ ನಟ ದಿಲೀಪ್   

ತಿರುವನಂತಪುರ: 2017ರಲ್ಲಿ ಕೊಚ್ಚಿಯಲ್ಲಿ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಮತ್ತು ಇತರ ಐವರಿಗೆ ಮಂಗಳವಾರ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ನಟಿ ಮೇಲಿನ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದೇವೆ ಎಂದು ಆರೋಪಿಸಿ ನಾನು ಮತ್ತು ನನ್ನ ಕುಟುಂಬದ ಸದಸ್ಯರ ಮೇಲೆ ಮಾಡಿರುವ ಆರೋಪ ಪೊಲೀಸರ ಸೃಷ್ಟಿ ಮತ್ತು ಕಪೋಲ ಕಲ್ಪಿತ ಎಂದು ನಟ ದಿಲೀಪ್ ಕೇರಳ ಹೈಕೋರ್ಟ್‌ನಲ್ಲಿ ವಾದಿಸಿದ್ದರು.

ಏನಿದು ಪ್ರಕರಣ?: ಮಲಯಾಳಂನ ಜನಪ್ರಿಯ ನಟಿಯೊಬ್ಬರನ್ನು ಚಲಿಸುತ್ತಿದ್ದ ಕಾರಿನಲ್ಲಿ ಅಪಹರಿಸಿ, ಹಲ್ಲೆ ನಡೆಸಿದ ಪ್ರಕರಣ ನಡೆದು ಐದು ವರ್ಷಗಳಾಗಿವೆ. ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ತನಿಖಾ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ನಟ ದಿಲೀಪ್ ವಿರುದ್ಧ ಹೊಸ ಪ್ರಕರಣ ದಾಖಲಾಗಿದ್ದು, ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ದಿಲೀಪ್ ಸಹೋದರ ಅನೂಪ್ ಮತ್ತು ಸೋದರ ಮಾವ ಸೂರಜ್ ಕೂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣಾಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕೇರಳ ಪೊಲೀಸರ ಅಪರಾಧ ವಿಭಾಗವು ದಿಲೀಪ್ ಮತ್ತು ಇತರ ಐವರ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸಿದೆ.

ಇತ್ತೀಚೆಗೆ ಟಿವಿ ವಾಹಿನಿಯೊಂದು ಬಿಡುಗಡೆ ಮಾಡಿದ ದಿಲೀಪ್ ಅವರ ಆಡಿಯೋ ಕ್ಲಿಪ್ ಆಧರಿಸಿ ತನಿಖಾಧಿಕಾರಿ ನೀಡಿದ ದೂರಿನ ಮೇರೆಗೆ ಕ್ರೈಂ ಬ್ರಾಂಚ್ ಪ್ರಕರಣ ದಾಖಲಿಸಿಕೊಂಡಿದ್ದು, ಆಡಿಯೋದಲ್ಲಿ ನಟ ತನಿಖಾಧಿಕಾರಿಗಳ ಮೇಲೆ ಹಲ್ಲೆಗೆ ಸಂಚು ರೂಪಿಸಿದ್ದನ್ನು ಕೇಳಲಾಗಿತ್ತು.

ಅಲ್ಲದೆ ಇತ್ತೀಚೆಗಷ್ಟೇ ಮಾಧ್ಯಮಗಳ ಮೂಲಕ ನಿರ್ದೇಶಕ ಬಾಲಚಂದ್ರ ಕುಮಾರ್, ದಿಲೀಪ್ ಮತ್ತು ಅವರ ಸಿಬ್ಬಂದಿ, ತನಿಖಾ ಅಧಿಕಾರಿಗಳ ಜೀವಕ್ಕೆ ಅಪಾಯವನ್ನುಂಟುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದರು. ಬಳಿಕ ಕ್ರೈಂ ಬ್ರಾಂಚ್‌ಗೆ ಕೆಲವು ಸಮರ್ಥನೀಯ ಹೇಳಿಕೆಯನ್ನು ನೀಡಿದ್ದರು. ಇವರ ಸ್ಫೋಟಕ ಹೇಳಿಕೆ ನಂತರ, ದಿಲೀಪ್ ಮತ್ತು ಇತರ ಐವರು ವ್ಯಕ್ತಿಗಳ ವಿರುದ್ಧ ಪಿತೂರಿ ಮತ್ತು ಬೆದರಿಕೆಯ ಆರೋಪದ ಮೇಲೆ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.