ADVERTISEMENT

ಕಾಂತಾರ| ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ: ತನಿಖಾಧಿಕಾರಿ ಎದುರು ರಿಷಬ್‌ ಹಾಜರು

ಪಿಟಿಐ
Published 13 ಫೆಬ್ರುವರಿ 2023, 5:08 IST
Last Updated 13 ಫೆಬ್ರುವರಿ 2023, 5:08 IST
ಕಾಂತಾರ ಚಿತ್ರದ ಪೋಸ್ಟರ್‌
ಕಾಂತಾರ ಚಿತ್ರದ ಪೋಸ್ಟರ್‌   

ಕೋಯಿಕ್ಕೋಡ್‌, ಕೇರಳ (ಪಿಟಿಐ): ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ‘ಕಾಂತಾರ’ ಚಿತ್ರದ ನಿರ್ದೇಶಕ ರಿಷಬ್‌ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್‌ ಕಿರಗಂದೂರು ಅವರು ಭಾನುವಾರ ಕೋಯಿಕ್ಕೋಡ್‌ ಪೊಲೀಸ್‌ ಠಾಣೆಯ ತನಿಖಾಧಿಕಾರಿಗಳ ಎದುರು ಹಾಜರಾಗಿದ್ದಾರೆ.

‘ಕಾಂತಾರ’ ಸಿನಿಮಾದಲ್ಲಿ ‘ನವರಸಂ’ ಹಾಡನ್ನು ಅನುಮತಿಯಿಲ್ಲದೆಯೇ ಬಳಸಿಕೊಳ್ಳಲಾಗಿದೆ ಎಂದು ಹಾಡಿನ ಹಕ್ಕುಸ್ವಾಮ್ಯ ಹೊಂದಿರುವ ಮಾತೃಭೂಮಿ ಪ್ರಕಾಶನ ಹಾಗೂ ‘ತೈಕುಡಂ ಬ್ರಿಡ್ಜ್‌’ ತಂಡವು ಪ್ರತ್ಯೇಕ ದೂರು ನೀಡಿದ್ದವು.

ಕೋಯಿಕ್ಕೋಡ್‌ ಹಾಗೂ ಪಾಲಕ್ಕಾಡ್‌ ಜಿಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದಾಗ, ‘ಈ ಪ್ರಕರಣವು ಈ ಕೋರ್ಟ್‌ನಲ್ಲಿ ವಿಚಾರಣೆಗೆ ಸೂಕ್ತವಾಗಿಲ್ಲ. ಆದ್ದರಿಂದ ವಾಣಿಜ್ಯ ವ್ಯಾಜ್ಯಗಳನ್ನು ವಿಚಾರಣೆ ಮಾಡುವಂಥ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ’ ಎಂದಿದ್ದವು.

ADVERTISEMENT

ಬಳಿಕ ಮಾತೃಭೂಮಿ ಪ್ರಕಾಶನ ಹಾಗೂ ತೈಕುಡಂ ಬ್ರಿಡ್ಜ್‌ ತಂಡವು ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಇದೇ 12 ಮತ್ತು 13ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯೊಳಗೆ ತನಿಖಾಧಿಕಾರಿಗಳ ಎದುರು ಹಾಜರಾಗುವಂತೆ ಇಬ್ಬರಿಗೂ ಸೂಚಿಸಿತ್ತು.

‘ನ್ಯಾಯಾಲಯದ ನಿರ್ದೇಶನದಂತೆ ರಿಷಬ್‌ ಹಾಗೂ ವಿಜಯ್‌ ಅವರು ತನಿಖಾಧಿಕಾರಿಗಳ ಎದುರು ಹಾಜರಾಗಿದ್ದರು. ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಗತ್ಯವಿದ್ದರೆ ಮತ್ತೊಮ್ಮೆ ಅವರನ್ನು ಠಾಣೆಗೆ ಕರೆಸಲಾಗುತ್ತದೆ’ ಎಂದು ಜಿಲ್ಲೆಯ ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣದ ಅಂತಿಮ ತೀರ್ಪು ಬರುವವರೆಗೂ ‘ವರಾಹ ರೂಪಂ’ ಹಾಡಿನೊಂದಿಗೆ ಸಿನಿಮಾ ಪ್ರದರ್ಶಿಸಬಾರದು ಎಂಬ ಷರತ್ತಿನೊಂದಿಗೆ ಕೇರಳ ಹೈಕೋರ್ಟ್‌ ಇದೇ 8ರಂದು ನಿರ್ಮಾಪಕ ಹಾಗೂ ನಿರ್ದೇಶಕರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಈ ಷರತ್ತನ್ನು ಪ್ರಶ್ನಿಸಿ ಇಬ್ಬರೂ ಮೇಲ್ಮನವಿ ಸಲ್ಲಿಸಿದ್ದರು. ಇದೇ 10ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿತ್ತು.

ಒಂದು ವೇಳೆ ರಿಷಬ್‌ ಮತ್ತು ವಿಜಯ್‌ ಅವರನ್ನು ಬಂಧಿಸಿದ್ದೇ ಆದಲ್ಲಿ ಕೂಡಲೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕು ಎಂದೂ ಸೂಚಿಸಿತ್ತು.

ಆರೋಪಿಗಳು ಸಾಕ್ಷ್ಯ ನಾಶಕ್ಕೆ ಮುಂದಾಗಬಾರದು. ಸಾಕ್ಷಿಗಳನ್ನು ಬೆದರಿಸಬಾರದು. ತನಿಖೆಗೆ ಸಹಕರಿಸಬೇಕು. ವಿಚಾರಣೆಗೆ ಲಭ್ಯರಾಗಬೇಕು. ಆರೋಪಿಗಳು ಅಥವಾ ಅರ್ಜಿದಾರರು ಸಂಬಂಧಪಟ್ಟ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆಯೇ ದೇಶ ತೊರೆಯಬಾರದು ಎಂದೂ ತಾಕೀತು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.