ADVERTISEMENT

ಕೆ.ಜಿ.ಎಫ್‌–2: ಮೊದಲ ದಿನವೇ ದಾಖಲೆ ಗಳಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 18:42 IST
Last Updated 14 ಏಪ್ರಿಲ್ 2022, 18:42 IST
   

ಬೆಂಗಳೂರು: ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ಕೆ.ಜಿ.ಎಫ್‌ ಚಾಪ್ಟರ್‌–2 ಮೊದಲ ದಿನವೇ ಒಟ್ಟು ₹120 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಅಮೆರಿಕದಲ್ಲೇ ಮೊದಲ ದಿನದ ಕಲೆಕ್ಷನ್‌ ₹7.62 ಕೋಟಿ ಮೀರಿ ಮುನ್ನುಗ್ಗಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌ನಲ್ಲಿ ಅಧಿಕೃತವಾಗಿ ತಿಳಿಸಿದೆ.

ಭಾರತದಲ್ಲೇ ಆರು ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ವಿಶೇಷವೆಂದರೆ ಈ ಪೈಕಿ ದಕ್ಷಿಣ ಭಾರತಕ್ಕಿಂತ ಹಿಂದಿ ಭಾಷಿಕರು ಹೆಚ್ಚಿರುವ ಉತ್ತರ ಭಾರತದಲ್ಲೇ ಅತ್ಯಧಿಕ ಪರದೆಗಳಿವೆ. ಈ ಅಂತರ ಸುಮಾರು ಎರಡು ಸಾವಿರದಷ್ಟಿತ್ತು. ಇದರ ಜೊತೆಗೆ ಅಮೆರಿಕ, ರಷ್ಯಾ, ಫ್ರಾನ್ಸ್‌, ನ್ಯೂಜಿಲೆಂಡ್‌ ಸೇರಿ ವಿಶ್ವದೆಲ್ಲೆಡೆ ಪರದೆಗಳ ಸಂಖ್ಯೆ 10 ಸಾವಿರ ದಾಟಿದೆ. ಸ್ಯಾಂಡಲ್‌ವುಡ್‌ ಇರಲಿ ವಿಶ್ವದ ಯಾವುದೇ ಚಿತ್ರರಂಗದ ಸಿನಿಮಾವೊಂದು ಹಿಂದೆಂದೂ ಇಷ್ಟೊಂದು ಪರದೆಗಳಲ್ಲಿ ತೆರೆಕಂಡಿಲ್ಲ. ಆಶ್ಚರ್ಯವೆಂದರೆ ಕೆ.ಜಿ.ಎಫ್‌ ಸೈನೈಡ್‌ ಗುಡ್ಡದಲ್ಲೇ ಚಿತ್ರೀಕರಣಗೊಂಡ ಈ ಸಿನಿಮಾವೂ ಕೆಜಿಎಫ್‌ನಲ್ಲೇ ತೆರೆಕಂಡಿಲ್ಲ.

ಹಲವು ಚಿತ್ರಮಂದಿರಗಳಲ್ಲಿ ಗುರುವಾರ ಬೆಳಗಿನ ಜಾವ 1–2 ಗಂಟೆಯಿಂದಲೇ ಫ್ಯಾನ್ಸ್‌ ಶೋ ನಡೆದಿತ್ತು. ಚಿತ್ರಮಂದಿರಗಳಲ್ಲಿ ಯಶ್‌, ಸಂಜಯ್‌ ದತ್‌ ಕಟೌಟ್‌ಗಳಿಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂಭ್ರಮದಿಂದಲೇ ಅಭಿಮಾನಿಗಳು ಕೆ.ಜಿ.ಎಫ್‌ಗೆ ಪ್ರವೇಶಿಸಿದ್ದಾರೆ. ಮೊದಲ ದಿನವೇ ₹ 29 ಲಕ್ಷ ಟಿಕೆಟ್‌ಗಳನ್ನು ಪ್ರೇಕ್ಷಕರು ಆನ್‌ಲೈನಲ್ಲಿ ಬುಕ್‌ ಮಾಡಿದ್ದಾರೆ ಎಂದು ಟಿಕೆಟ್‌ ಬುಕಿಂಗ್‌ ಆ್ಯಪ್‌ ಕಂಪನಿ ಬುಕ್‌ಮೈ ಶೋ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.