ADVERTISEMENT

KGF Chapter 2: ಹಳೆ ಕಥೆಯ ದೂಳೆಬ್ಬಿಸಿ ಹೊಸ ಕಥೆ ಹೇಳುವ ‘ತೂಫಾನ್‌’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 9:43 IST
Last Updated 21 ಮಾರ್ಚ್ 2022, 9:43 IST
‘ತೂಫಾನ್‌’ ಪೋಸ್ಟರ್‌
‘ತೂಫಾನ್‌’ ಪೋಸ್ಟರ್‌   

ಚಂದನವನದ ಬಹುನಿರೀಕ್ಷಿತ ಬಿಗ್‌ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ, ಯಶ್‌ ನಟನೆಯ ಕೆ.ಜಿ.ಎಫ್‌–2 ಸಿನಿಮಾದ ಮೊದಲ ಲಿರಿಕಲ್‌ ಹಾಡು ‘ತೂಫಾನ್‌’ ಬಿಡುಗಡೆಯಾಗಿದ್ದು, ಹಳೆಯ ಕಥೆಯನ್ನೊಮ್ಮೆ ಮೈಕೊಡವಿ ಎಬ್ಬಿಸಿ ಹೊಸ ಕಥೆ ಹೇಳಿದ್ದಾರೆ ನಿರ್ದೇಶಕ ಪ್ರಶಾಂತ್‌ ನೀಲ್‌.

2018ರಲ್ಲಿ ಬಿಡುಗಡೆಯಾದ ಕೆ.ಜಿ.ಎಫ್‌ ಮೊದಲ ಭಾಗದ ‘ಧೀರ ಧೀರ’ ಹಾಡಿನಂತೆಯೇ ‘ತೂಫಾನ್‌’ ಕಿವಿಯೊಳಗಿಳಿಯುತ್ತಾ, ಮೊದಲ ಭಾಗದ ದೃಶ್ಯಗಳನ್ನು ಕೆದಕಿ ಹೊರತೆಗೆಯುತ್ತದೆ. ‘ತೂಫಾನ್‌’ನಲ್ಲಿ ಹೂಂಕರಿಸಿ ಬುಸುಗುಟ್ಟುವ ‘ರಾಕಿ ಭಾಯ್‌’ಗೆ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತದ ಜ್ವಾಲಾಗ್ನಿ ಹಚ್ಚಿದ್ದಾರೆ. ಹಾಡಿನ ಸಾಹಿತ್ಯದ ಬಿರುಗಾಳಿಯೂ ಇವರದ್ದೇ. ಹಾಡಿನ ತುಂಬಾ ಹಿಂದಿ ಪದಗಳದ್ದೇ ಅಬ್ಬರವಿದ್ದರೂ, ಪ್ರೇಕ್ಷಕರು ಇದನ್ನು ಮೆಚ್ಚಿ ಕೊಂಡಾಡಿದ್ದಾರೆ. ಹೀಗಾಗಿಯೇ ಯುಟ್ಯೂಬ್‌ನಲ್ಲಿ ವೀಕ್ಷಣೆ ಕ್ಷಣಕ್ಷಣ ಲಕ್ಷ ದಾಟುತ್ತಿದೆ.

‘ಧೀರ ಧೀರ ಈ ಸುಲ್ತಾನ’ ಹಾಡಿನಲ್ಲಿ ಸುತ್ತಿಗೆ ಹಿಡಿದು ಬರುವ ‘ರಾಕಿ ಭಾಯ್‌’ ‘ತೂಫಾನ್‌’ನಲ್ಲೂ ಇದ್ದಾನೆ. ಹಾಡಿನ ಕೆಲವು ತುಣುಕುಗಳು 2ನೇ ಭಾಗದ ಕಥೆಯನ್ನೂ ಹೇಳಿವೆ. ಗಣಿಯಲ್ಲಿ ಬಂಧಿಯಾಗಿರುವವರ ಜೊತೆ ತಾನೂ ಕುಳಿತು ಊಟ ಮಾಡುತ್ತಿರುವ ‘ರಾಕಿ ಭಾಯ್‌’ ಮುಂದಿನ ಕಥೆ ತೆರೆದಿಡುತ್ತಾ, ಹಲವು ಗೆಟ್‌ಅಪ್‌ಗಳಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿರುವ ‘ಕೆ.ಜಿ.ಎಫ್‌–2’ ಚಿತ್ರದಲ್ಲಿ ಬಾಲಿವುಡ್‌ನ ಸಂಜಯ್‌ ದತ್‌, ರವೀನಾ ಠಂಡನ್‌ ಬಣ್ಣಹಚ್ಚಿದ್ದು, ಶ್ರೀನಿಧಿ ಶೆಟ್ಟಿ, ಪ್ರಕಾಶ್‌ ರೈ, ಮಾಳವಿಕಾ ಅವಿನಾಶ್‌, ಬಿ.ಸುರೇಶ್‌, ಯಶ್‌ ಶೆಟ್ಟಿ, ಅರ್ಚನಾ ಜೋಯಿಷ್‌, ಅಯ್ಯಪ್ಪ ಪಿ.ಶರ್ಮ ಇನ್ನಿತರರು ತಾರಾಬಳಗದಲ್ಲಿದ್ದಾರೆ. ಏ.14ರಂದು ಚಿತ್ರವು ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.