ADVERTISEMENT

New Movie: ‘ಡಿಯರ್ ಹಸ್ಬೆಂಡ್’ಗೆ ಸುದೀಪ್‌ ಸಾಥ್‌

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 0:30 IST
Last Updated 16 ಜನವರಿ 2026, 0:30 IST
ಕಾರ್ಯಕ್ರಮದಲ್ಲಿ ಸುದೀಪ್‌
ಕಾರ್ಯಕ್ರಮದಲ್ಲಿ ಸುದೀಪ್‌   

ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ಚಿತ್ರಕ್ಕೆ ‘ಡಿಯರ್ ಹಸ್ಬೆಂಡ್’ ಎಂದು ಹೆಸರಿಡಲಾಗಿದೆ. ನಟ ಸುದೀಪ್‌ ಇತ್ತೀಚೆಗಷ್ಟೇ ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಟರಾದ ಕುಮಾರ್ ಬಂಗಾರಪ್ಪ, ಪ್ರವೀಣ್ ತೇಜ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಿರ್ದೇಶಕರಾದ ಶಶಾಂಕ್, ಎ.ಪಿ.ಅರ್ಜುನ್ ಸೇರಿದಂತೆ ಅನೇಕ ಪ್ರಖ್ಯಾತರು ಸಮಾರಂಭದಲ್ಲಿ ಹಾಜರಿದ್ದರು. 

‘ನಾವು ಹೊಸಬರಾಗಿ ಬಂದಾಗ, ಅನೇಕ ಹಿರಿಯರು ನಮಗೆ ಪ್ರೋತ್ಸಾಹಿಸಿ, ಬೆನ್ನು ತಟ್ಟಿದ್ದರು. ಅದೇ ಕೆಲಸವನ್ನು ನಾವು ಈಗ ಹೊಸಬರಿಗೆ ಮಾಡುತ್ತಿದ್ದೇವೆ. ಅಂತಿಮವಾಗಿ ಕನ್ನಡ ಚಿತ್ರರಂಗ ಬೆಳೆಯಬೇಕು. ಇಡೀ ಚಿತ್ರತಂಡಕ್ಕೆ ಶುಭವಾಗಲಿ. ಹೊಸಬರ ತಂಡದ ಮೂಲಕ ಖಂಡಿತವಾಗಿಯೂ ಹೊಸಥರದ ಸಿನಿಮಾ ಬರಲಿದೆ’ ಎಂದರು ಸುದೀಪ್‌. 

ಜಿ9 ಕಮ್ಯುನಿಕೇಶನ್ ಆ್ಯಂಡ್‌ ಮೀಡಿಯಾ ಹಾಗೂ ನಿರಂತರ ಪ್ರೊಡಕ್ಷನ್ಸ್‌ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಸೂರಜ್ ಗೌಡ, ಶರಣ್ಯಾ ಶೆಟ್ಟಿ ಹಾಗೂ ಪ್ರವೀಣ್ ಮುಖ್ಯಭೂಮಿಕೆಯಲ್ಲಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್‌ ಜಾನರ್‌ನ ಸಿನಿಮಾವಿದು. 

ADVERTISEMENT

‘ಸುಮಾರು ಒಂದೂವರೆ ವರ್ಷಗಳಿಂದ ನಾವೆಲ್ಲರೂ ಸೇರಿ ಕಾಣುತ್ತಿದ್ದ ಕನಸು, ಈಗ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಇಂದಿನ ಯುವಕರು ಇಷ್ಟಪಡುವಂಥ ಕಥೆಯೊಂದನ್ನು ಈ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೇ ತಿಂಗಳಾಂತ್ಯದಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಗೋವಾ ಮತ್ತಿತರ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ’ ಎಂದರು ಗುರುರಾಜ ಕುಲಕರ್ಣಿ. 

‘ಇದೊಂದು ಇಂದಿನ ಜನರೇಶನ್‌ಗೆ ಕನೆಕ್ಟ್ ಆಗುವಂಥ ಸಿನಿಮಾ. ಇದರಲ್ಲಿ ನಾನು ವಾಸಂತಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇಂಥದ್ದೊಂದು ವಿಭಿನ್ನ ಕಥೆ ಕಲಾವಿದರಿಗೆ ಸಿಗೋದು ಬಹಳ ಅಪರೂಪ’ ಎಂದರು ಶರಣ್ಯಾ ಶೆಟ್ಟಿ.

ಚಿತ್ರದ ಟೈಟಲ್ ಟೀಸರ್‌ಗೆ ಸಚಿನ್ ಬಸ್ರೂರು ಹಿನ್ನೆಲೆ ಸಂಗೀತವಿದ್ದು, ಚಿತ್ರದ ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಮೋದ ಮರವಂತೆ ಸಾಹಿತ್ಯ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಹರ್ಷಕುಮಾರ್ ಗೌಡ ಛಾಯಾಚಿತ್ರಗ್ರಹಣ, ಬಿ.ಎಸ್.ಕೆಂಪರಾಜ್‌ ಸಂಕಲನವಿರಲಿದೆ.

ಸೂರಜ್‌ ಶರಣ್ಯಾ ಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.