ADVERTISEMENT

ಕಿರಣ್‌ ರಾಜ್‌ ಹೊಸ ಸಿನಿಮಾ ‘ಬಡ್ಡೀಸ್‌’

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 9:00 IST
Last Updated 21 ಫೆಬ್ರುವರಿ 2022, 9:00 IST
ಕಿರಣ್‌ ರಾಜ್‌
ಕಿರಣ್‌ ರಾಜ್‌   

‘ಕನ್ನಡತಿ’ ಧಾರಾವಾಹಿ ಮುಖಾಂತರ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಟ ಕಿರಣ್‌ ರಾಜ್‌, ಸದ್ಯಕ್ಕೆ ಕಿರುತೆರೆಯ ಜೊತೆಗೆ ಚಂದನವನದಲ್ಲೂ ಸಕ್ರಿಯರಾಗಿದ್ದಾರೆ. ‘ಭರ್ಜರಿ ಗಂಡು’ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಕಿರಣ್‌, ಇದೀಗ ಮತ್ತೊಂದು ಸಿನಿಮಾವನ್ನು ಸದ್ದಿಲ್ಲದೇ ಪೂರ್ಣಗೊಳಿಸಿದ್ದಾರೆ.

ಭಾರತಿ ಶೆಟ್ಟಿ ಫಿಲಂಸ್ ಸಂಸ್ಥೆಯ ಚೊಚ್ಚಲ ಚಿತ್ರ ‘ಬಡ್ಡೀಸ್‌’ನಲ್ಲಿ ನಾಯಕನಾಗಿ ಕಿರಣ್‌ ಮಿಂಚಿದ್ದು, ಇದರ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಬೆಂಗಳೂರು, ಮಂಗಳೂರು, ಗೋವಾ, ತುಮಕೂರು ಮುಂತಾದ ಕಡೆ ಚಿತ್ರೀಕರಣ ನಡೆದಿದ್ದು, ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಸ್ನೇಹದ ಮಹತ್ವ ಸಾರುವ ಈ ಚಿತ್ರದ ಫಸ್ಟ್ ಲುಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಮಂಗಳೂರಿನ ಭಾರತಿ ಶೆಟ್ಟಿ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಪ್ರಸ್ತುತ ದುಬೈ ನಿವಾಸಿಯಾಗಿರುವ ಇವರು ಅಲ್ಲಿ ಜಾಹೀರಾತು ಸಂಸ್ಥೆ ನಡೆಸುತ್ತಿದ್ದಾರೆ‌. ಈ ಹಿಂದೆ ಗುರುವೇಂದ್ರ ಶೆಟ್ಟಿ ಎಂಬ ಹೆಸರಿನಿಂದ ಚಿತ್ರವೊಂದನ್ನು ನಿರ್ದೇಶಿಸಿದ್ದ ನಿರ್ದೇಶಕರು, ಈ ಚಿತ್ರದಿಂದ ಗುರುತೇಜ್ ಶೆಟ್ಟಿಯಾಗಿ ಹೆಸರು ಬದಲಾಯಿಸಿಕೊಂಡು ನಿರ್ದೇಶಕನ ಕ್ಯಾಪ್‌ ತೊಟ್ಟಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳು ಗುರುತೇಜ್‌ ಶೆಟ್ಟಿಯವರದ್ದೇ.

ADVERTISEMENT

22.2.22(ಮಂಗಳವಾರ) ಬಹಳ ಅಪರೂಪದ ದಿನಾಂಕ. ಇಂತಹ ಸುದಿನದಿಂದ ‘ಬಡ್ಡೀಸ್’ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಅಮೆರಿಕದಲ್ಲಿ ವಾಸವಾಗಿರುವ ನಿಭಾ ಶೆಟ್ಟಿ‌ ಈ ಚಿತ್ರದ ಛಾಯಾಗ್ರಾಹಕರು. ಕೆ.ಎಂ.ಪ್ರಕಾಶ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಕಿರಣ್ ರಾಜ್‌ಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ಅಭಿನಯಿಸಿದ್ದಾರೆ. ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್, ವಿನಯ್ ರೋಹನ್ ಸಾಯಿ, ಗಿರೀಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.