ADVERTISEMENT

ಸರೋಜಾದೇವಿ ಮುಖದಲ್ಲಿ ಚೆನ್ನಮ್ಮನ ಕಂಡವರು...

ಪ್ರಜಾವಾಣಿ ವಿಶೇಷ
Published 20 ಜುಲೈ 2025, 1:38 IST
Last Updated 20 ಜುಲೈ 2025, 1:38 IST
ಮಹಾದೇವಪ್ಪ ರಾವಳ
ಮಹಾದೇವಪ್ಪ ರಾವಳ   

‘ಕಪ್ಪ ಕೊಡಬೇಕೆ ಕಪ್ಪ. ನಿಮಗೇಕೆ ಕೊಡಬೇಕು ಕಪ್ಪ? ನಮ್ಮವರೊಂದಿಗೆ ಉತ್ತೀರಾ? ಬಿತ್ತೀರಾ? ನೀರು ಹಾಯಿಸಿ ನಾಟಿ ನೆಟ್ಟೀರಾ? ಹೊರೆ ಹೊತ್ತೀರಾ? ದಣಿದವರಿಗೆ ಅಂಬಲಿ ಕಾಯಿಸಿ ಕೊಟ್ಟೀರಾ? ನಿಮಗೇಕೆ ಕೊಡಬೇಕು ಕ‍ಪ್ಪ? ನೀವೇನು ಅಣ್ಣ ತಮ್ಮಂದಿರೇ? ನೆಂಟರೇ? ನಿಷ್ಠರೇ? ದಾಯಾದಿಗಳೇ? ಎಚ್ಚರಿಕೆ. ಕಿತ್ತೂರು ರಾಣಿಯಿಂದ ಕಪ್ಪ ಕೇಳುವವರ ನಾಲಿಗೆಯನ್ನು ಸೀಳಿಬಿಟ್ಟೇನು...’ ಈ ಸಂಭಾಷಣೆ 65 ವರ್ಷಗಳಿಂದಲೂ ಜನಜನಿತವಾಗಿದೆ!

ಹೌದು, ‘ಕಿತ್ತೂರು ಚೆನ್ನಮ್ಮ’ ಚಲನಚಿತ್ರದಲ್ಲಿ ಮಹಾನ್‌ ನಟಿ ಬಿ.ಸರೋಜಾದೇವಿ ಅವರ ಮನೋಜ್ಞ ಅಭಿನಯದ ಪ್ರತಿಫಲವಿದು. ಕನ್ನಡನಾಡಿನಲ್ಲಿ ಈ ಸಂಭಾಷಣೆಯನ್ನು ಕೇಳದ ಕಿವಿಗಳಿಲ್ಲ, ಉಚ್ಚರಿಸದ ನಾಲಿಗೆಯಿಲ್ಲ ಎನ್ನುವಷ್ಟು ಜನಪ್ರಿಯವಾಗಿದೆ. ಈಗಲೂ ಎಲ್‌ಕೆಜಿ ಮಕ್ಕಳಿಂದ ಕಾಲೇಜು ವಿದ್ಯಾರ್ಥಿಗಳ ತನಕ ಏಕಾಭಿನಯಪಾತ್ರದಲ್ಲಿ ಥೇಟ್‌ ಬಿ.ಸರೋಜಾದೇವಿ ಅವರಂತೆಯೇ ವೇಷ ಹಾಕಿ, ಅವರದೇ ಶೈಲಿಯಲ್ಲಿ ‘ಕಪ್ಪ ಕೊಡಬೇಕೆ ಕಪ್ಪ’ ಎಂದು ಸಂಭಾಷಣೆ ಹೇಳಿ ಬಹುಮಾನ ಗಿಟ್ಟಿಸುತ್ತಿರುವುದೂ ಸತ್ಯ.

ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನ 81ರ ಪ್ರಾಯದ ಮಹಾದೇವಪ್ಪ ರಾವಳ ಅವರು ಬಿ.ಸರೋಜಾದೇವಿ ಅವರ ಅಪ್ಪಟ ಅಭಿಮಾನಿ. 1961ರಲ್ಲಿ ಮೊಟ್ಟಮೊದಲ ಬಾರಿಗೆ ರಾಣಿ ಚೆನ್ನಮ್ಮನ ಇತಿಹಾಸ ಬೆಳ್ಳಿತೆರೆ ಮೇಲೆ ರಾರಾಜಿಸಿತು. ಮಹಾದೇವಪ್ಪ ಆಗ ರಾಣಿ ಚೆನ್ನಮ್ಮ ವಿಜಯೋತ್ಸವ ಸಮಿತಿ ಕಾರ್ಯದರ್ಶಿಯಾಗಿದ್ದರು.

ADVERTISEMENT

ಕಿತ್ತೂರು ಚೆನ್ನಮ್ಮ ಸಿನಿಮಾ ನಿರ್ದೇಶಕ ಬಿ.ಆರ್.ಪಂತುಲು ಹಾಗೂ ನಟಿ ಸರೋಜಾದೇವಿ ಅವರು ಚಿತ್ರೀಕರಣಕ್ಕೆ ಕಿತ್ತೂರಿಗೆ ಬಂದಿದ್ದರು ಎನ್ನುವುದನ್ನು ಈ ಹಿರಿಯ ಜೀವ ಮೆಲುಕು ಹಾಕಿತು.

ಚನ್ನಮ್ಮನ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಆವರಣದಲ್ಲಿ 1976ರಲ್ಲಿ ನಡೆದ ಬಯಲು ರಂಗ ಮಂದಿರ ಉದ್ಘಾಟನೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಬಿ.ಸರೋಜಾದೇವಿ ಮತ್ತು ಅವರ ಪತಿ ಶ್ರೀಹರ್ಷ (ಬಲಗಡೆ).   ಚಿತ್ರ ಕೃಪೆ:ಮೃತ್ಯುಂಜಯ ಮಾರಿಹಾಳ

‘ಚೆನ್ನಮ್ಮಾಜಿ ಕುರಿತಾದ ನಾಟಕಗಳು ಶತಮಾನಗಳಿಂದಲೂ ಪ್ರದರ್ಶನಗೊಳ್ಳುತ್ತಿವೆ. ಆದರೆ, ಬಿ.ಸರೋಜಮ್ಮ ಅವರ ನಟನೆಯ ಬಳಿಕವೇ ಚೆನ್ನಮ್ಮ ಹೀಗೆ ಇದ್ದಿರಬಹುದು ಎಂಬ ‘ರೂಪ’ ಅಚ್ಚೊತ್ತಿತು. ವೀರಾವೇಷವೇ ಮೈವೆತ್ತಂತೆ ನಟಿಸಿದ ಪರಿ, ಹಣೆಯ ಮೇಲಿನ ದಪ್ಪ ವಿಭೂತಿ, ಅಗಲವಾದ ಕಣ್ಣುಗಳು, ದೃಢವಾದ ನಿಲುವು, ತಲೆ ಮೇಲಿನ ಸೆರಗು, ಧ್ವನಿಯಲ್ಲಿನ ಆರ್ಭಟ, ಕುದುರೆ ಏರಿ ಬರುವಲ್ಲಿನ ಶೈಲಿ ಎಲ್ಲವೂ ಜನಮಾನಸದ ಭಾಗವಾಗಿ ಹೋಗಿವೆ. ಮಣ್ಣಲ್ಲಿ ಹುದಗಿಹೋಗಿದ್ದ ಇತಿಹಾಸವನ್ನು ಜಗತ್ತಿನ ಮುಂದೆ ನಿಲ್ಲಿಸಿದರು ಸರೋಜಮ್ಮ. ಆ ಕಾಲದಲ್ಲಿ ಶಿಲ್ಪಿಗಳು ಚೆನ್ನಮ್ಮ ಪ್ರತಿಮೆ ಕೆತ್ತಬೇಕೆಂದರೆ ಸರೋಜಮ್ಮ ಅವರೇ ಕಣ್ಣಮುಂದೆ ಬಂದು ನಿಲ್ಲುತ್ತಿದ್ದರಂತೆ’ ಎಂದು ಮಹಾದೇವಪ್ಪ ನೆನೆದು ಭಾವುಕರಾದರು.

ಕಿತ್ತೂರು ಚೆನ್ನಮ್ಮ ಸಿನಿಮಾ ಬಿಡುಗಡೆಯಾದಾಗ ಹಳ್ಳಿಯ ಜನರು ಚಕ್ಕಡಿ ಕಟ್ಟಿಕೊಂಡು ಧಾರವಾಡಕ್ಕೆ ಹೋಗಿ, ವಸತಿ ಉಳಿದು ಸಿನಿಮಾ ನೋಡಿ ಬರುತ್ತಿದ್ದರು. ಸಿನಿಮಾ ಅಷ್ಟೊಂದು ಪ್ರಸಿದ್ಧವಾದ ಬಳಿಕ ಸರೋಜಮ್ಮ ಅವರನ್ನು ಕಣ್ಣಾರೆ ನೋಡಬೇಕೆಂಬ ಹಂಬಲ ಜನರಲ್ಲಿ ಹೆಚ್ಚಾಯಿತು. ಆ ಬಯಕೆ ಕೈಗೂಡಿದ್ದು ಹದಿನೈದು ವರ್ಷಗಳ ಬಳಿಕ ಅಂದರೆ 1976ರಲ್ಲಿ. ಪ್ರೊ.ವಿ.ಜಿ.ಮಾರಿಹಾಳ ವಿರಚಿತ ‘ಕಿತ್ತೂರು ಚೆನ್ನಮ್ಮಾಜಿ’ ನಾಟಕ ಪ್ರದರ್ಶನವಿತ್ತು. ಸರೋಜಾದೇವಿ ಅವರನ್ನೇ ಅತಿಥಿಯಾಗಿ ಕರೆಸಿದ್ದೆವು. ಸೈಕಲ್‌ಗಳ ಮೇಲೆ ಈ ವಿಷಯವನ್ನು ಪ್ರಚಾರ ಮಾಡಿದ್ದೆವು. ಆಗ ಲೆಕ್ಕವಿಲ್ಲದಷ್ಟು ಜನ ಸೇರಿದ್ದರು ಎಂದು ಮಹಾದೇವಪ್ಪ ಸಂಭ್ರಮಿಸಿದರು.

‘ನನ್ನ ವಾರಿಗೆಯವರು ಈಗ ಯಾರೂ ಉಳಿದಿಲ್ಲ. ನಮ್ಮ ತಲೆಮಾರನ್ನು ರಂಜಿಸಿದ ಸರೋಜಮ್ಮ ಅವರೂ ಇಲ್ಲವಾಗಿರುವುದು ಬೇಸರ ತರಿಸಿದೆ. ಚೆನ್ನಮ್ಮ ಎಂದರೆ ಸರೋಜಮ್ಮ, ಸರೋಜಮ್ಮ ಎಂದರೆ ಚೆನ್ನಮ್ಮ ಎನ್ನುವಷ್ಟರ ಮಟ್ಟಿಗೆ ಮನಸ್ಸಿನಲ್ಲಿ ಅವರು ಉಳಿದುಬಿಟ್ಟಿದ್ದಾರೆ’ ಎಂದು ಮಾತು ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.