ಲಕ್ಷ್ಮಿ ಮೆನನ್
ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ನಡೆದ ಐಟಿ ಉದ್ಯೋಗಿ ಅಪಹರಣ ಪ್ರಕರಣದಲ್ಲಿ ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ನಟಿ ಲಕ್ಷ್ಮಿ ಮೆನನ್ ಅವರ ಹೆಸರು ಆರೋಪಿಗಳ ಪಟ್ಟಿಯಲ್ಲಿದೆ ಎಂದು ವರದಿಯಾಗಿದೆ.
ಏರ್ನಾಕುಲಂನಲ್ಲಿ ಬಾರ್‌ನಲ್ಲಿ ನಡೆದ ಜಗಳದ ನಂತರ, ಲಕ್ಷ್ಮಿ ಮೆನನ್ ಮತ್ತು ಅವರ ಸ್ನೇಹಿತರು ತನ್ನನ್ನು ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ದೃಶ್ಯಗಳಲ್ಲಿ ಲಕ್ಷ್ಮಿ ಮೆನನ್ ಸೇರಿದಂತೆ ಕೆಲವರು ದೂರುದಾರನ ಕಾರು ತಡೆದು ಅವನ ಜೊತೆ ತೀವ್ರ ವಾಗ್ವಾದ ನಡೆಸುತ್ತಿರುವುದು ಕಾಣುತ್ತದೆ.
ಲಕ್ಷ್ಮಿ ಮೆನನ್ ಅವರ ತಂಡ ದೂರುದಾರನನ್ನು ಕಾರಿನಿಂದ ಎಳೆದು ಇನ್ನೊಂದು ವಾಹನದಲ್ಲಿ ಬಲವಂತವಾಗಿ ಎಳೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಮಿಥುನ್, ಅನೇಷ್ ಮತ್ತು ಸೋನಮೋಲ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೂರನೇ ಆರೋಪಿಯಾಗಿರುವ ಲಕ್ಷ್ಮಿ ಮೆನನ್ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹಾಗೂ ಅವರ ತಂಡ ಪ್ರತಿದೂರು ದಾಖಲಿಸಿದೆ. ಲಕ್ಷ್ಮಿ ಮೆನನ್ ಅವರು ಹಲವಾರು ಮಲಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.