ADVERTISEMENT

Sandalwood | ಕ್ರಾಂತಿ–ಹೋರಾಟದ ಲ್ಯಾಂಡ್‌ಲಾರ್ಡ್‌

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 22:30 IST
Last Updated 19 ಜನವರಿ 2026, 22:30 IST
<div class="paragraphs"><p>ಲ್ಯಾಂಡ್‌ಲಾರ್ಡ್‌</p></div>

ಲ್ಯಾಂಡ್‌ಲಾರ್ಡ್‌

   

‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ ಕೆ. ಹಂಪಿ ನಿರ್ದೇಶನದ, ದುನಿಯಾ ವಿಜಯ್‌ ನಟನೆಯ ಸಿನಿಮಾ ‘ಲ್ಯಾಂಡ್‌ಲಾರ್ಡ್‌’ ಜ.23ರಂದು ತೆರೆಕಾಣುತ್ತಿದೆ. ದುನಿಯಾ ವಿಜಯ್‌ ಜನ್ಮದಿನದ (ಜ.20) ಹೊಸ್ತಿಲಲ್ಲಿ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಮತ್ತೊಂದು ಗಟ್ಟಿಯಾದ ಕಥೆಯೊಂದಿಗೆ ಜಡೇಶ ತೆರೆ ಮೇಲೆ ಬರುವ ಸೂಚನೆ ನೀಡಿದ್ದಾರೆ.

‘ಜಂಟಲ್‌ಮ್ಯಾನ್’, ‘ಗುರುಶಿಷ್ಯರು’ ಚಿತ್ರಗಳ ನಿರ್ದೇಶಕ ಜಡೇಶ, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಹಾಗೂ ‘ಚೋಮನ ದುಡಿ’ ಕೃತಿಗಳ ಸ್ಫೂರ್ತಿಯಿಂದ ಈ ಕಥೆ ಹೆಣೆದಿದ್ದಾರೆ. ಮಾಡಿದ ಕೂಲಿಗೆ ಕಾಸು, ಅಸಮಾನತೆ, ದಬ್ಬಾಳಿಕೆ, ಕ್ರಾಂತಿ–ಹೋರಾಟದ ಕಥೆಯುಳ್ಳ ಸಿನಿಮಾ ಇದಾಗಿದೆ ಎನ್ನುವುದು ಟ್ರೇಲರ್‌ ಮೂಲಕ ಸ್ಪಷ್ಟ. ಈ ಸಿನಿಮಾದಲ್ಲಿ ನಾಯಕನಾಗಿ ವಿಜಯ್‌ ನಟಿಸಿದ್ದು, ಇದು ಅವರ 29ನೇ ಸಿನಿಮಾ. ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರ ಹಾಗೂ ಶೈಲಿಯಲ್ಲಿ ವಿಜಯ್‌ ಕಾಣಿಸಿಕೊಂಡಿದ್ದಾರೆ. ಖಳನಾಯಕನಾಗಿ ರಾಜ್‌ ಬಿ.ಶೆಟ್ಟಿ ಬಣ್ಣಹಚ್ಚಿದ್ದಾರೆ. ಹಳ್ಳಿ ಹಿನ್ನೆಲೆಯ ಈ ಕಥೆ 80–90ರ ದಶಕದಲ್ಲಿರುವಂತೆ ಚಿತ್ರೀಕರಣಗೊಂಡಿದೆ. ಅಸ್ತಿತ್ವದ ಹೋರಾಟವನ್ನು ಕೋಲಾರ ಭಾಗದ ಕನ್ನಡದಲ್ಲೇ ಸೆರೆಹಿಡಿಯಲಾಗಿದೆ. ಸ್ವಾವಲಂಬಿಯಾಗಬೇಕು ಎನ್ನುವ ನಾಯಕನ ಯೋಚನೆ ಹೇಗೆ ಕ್ರಾಂತಿಯಾಗುತ್ತದೆ ಎನ್ನುವ ಕಥಾಹಂದರ ಹೊಂದಿರುವ ಚಿತ್ರದಲ್ಲಿ ರಚಿತಾ ರಾಮ್‌ 18 ವರ್ಷದ ಮಗಳಿರುವ ಹಳ್ಳಿಯ ಹೆಣ್ಣಾಗಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಉಮಾಶ್ರೀ, ರಾಕೇಶ್‌ ಅಡಿಗ, ರಿತನ್ಯಾ, ಶಿಶಿರ್ ಬೈಕಾಡಿ,‌ ಅಚ್ಯುತ್ ಕುಮಾರ್, ಮಿತ್ರ, ಅಭಿಷೇಕ್ ದಾಸ್ ಹೀಗೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ ಈ ಸಿನಿಮಾಗೆ ಸ್ವಾಮಿ ಜೆ. ಗೌಡ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.