ADVERTISEMENT

ಲಾಕ್‌ಡೌನ್‌ ಕಾಲದ ಬೆಳ್ಳಿರೇಖೆ?

ಒಟಿಟಿ ವೇದಿಕೆಗಳ ಮೂಲಕ ಸಿನಿಮಾ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 3:01 IST
Last Updated 27 ಮಾರ್ಚ್ 2020, 3:01 IST
‘ಭಿನ್ನ’ ಚಿತ್ರದಲ್ಲಿ ಪಾಯಲ್‌ ರಾಧಾಕೃಷ್ಣ
‘ಭಿನ್ನ’ ಚಿತ್ರದಲ್ಲಿ ಪಾಯಲ್‌ ರಾಧಾಕೃಷ್ಣ   

ಕರ್ನಾಟಕದಲ್ಲಿ ಯಾವುದೇ ಚಿತ್ರಮಂದಿರದ ಬಾಗಿಲು ತೆರೆದಿಲ್ಲ. ಹೊಸ ಸಿನಿಮಾ ನೋಡುವಂತೆ ಇಲ್ಲ. ಆದರೆ, ಕನ್ನಡ ಸಿನಿಮಾ ನಿರ್ಮಾಪಕರು ಈ ಸಂದರ್ಭದಲ್ಲಿ ಒಟಿಟಿ ಮೂಲಕ ಸಿನಿಮಾ ಬಿಡುಗಡೆ ಮಾಡಬಹುದೇ? ಹಿಂದಿನ ವರ್ಷ ತಮ್ಮ ಸಿನಿಮಾ ‘ಭಿನ್ನ’ವನ್ನು ನೇರವಾಗಿ ಒಟಿಟಿ ವೇದಿಕೆ ಮೂಲಕ ತೆರೆಗೆ ತಂದಿದ್ದ ನಿರ್ದೇಶಕ ಆದರ್ಶ್ ಈಶ್ವರಪ್ಪ ಅವರು ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದರು. ಅವರು ಒಟಿಟಿ ಮೂಲಕ ಸಿನಿಮಾ ಬಿಡುಗಡೆ ವಿಚಾರವಾಗಿ ಕೆಲವು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

‘ಒಟಿಟಿ ಮೂಲಕ ಸಿನಿಮಾ ಬಿಡುಗಡೆ ಮಾಡಿದರೆ ಕೆಲವು ಪ್ರಯೋಜನಗಳು ಖಂಡಿತ ಇವೆ. ಸಿನಿಮಾ ನಿರ್ದೇಶಕ ಎಷ್ಟು ಹೆಸರುವಾಸಿ ಎಂಬುದನ್ನು ಆಧರಿಸಿ, ಅವರ ಸಿನಿಮಾವನ್ನು ಎಷ್ಟು ಜನ ವೀಕ್ಷಕರು ನೋಡಬಹುದು ಎನ್ನುವುದು ತೀರ್ಮಾನ ಆಗುವುದಿದೆ. ಅನುರಾಗ್ ಕಶ್ಯಪ್‌ ಅವರಂತಹ ಜನಪ್ರಿಯ ನಿರ್ದೇಶಕರು ಸೇಕ್ರೆಡ್ ಗೇಮ್ಸ್‌ ಎಂಬ ವೆಬ್ ಸರಣಿ ಸಿದ್ಧಪಡಿಸಿದಾಗ ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಅದನ್ನು ನೋಡುತ್ತಾರೆ. ಅದರಲ್ಲಿ ಅನುಮಾನ ಇಲ್ಲ. ಅನುರಾಗ್‌ ಅವರಂಥ ನಿರ್ದೇಶಕರು ಒಟಿಟಿ ವೇದಿಕೆಗಾಗಿಯೇ ಒಂದು ಸಿನಿಮಾ ಮಾಡಿದರೆ, ಅದು ಕೂಡ ಖಂಡಿತ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ. ಸಿನಿಮಾ ಮಂದಿರಗಳಲ್ಲಿ ಸಿಗುವುದಕ್ಕಿಂತ ಹೆಚ್ಚಿನ ವೀಕ್ಷಕರು ಆ ಸಿನಿಮಾಕ್ಕೆ ಸಿಗುತ್ತಾರೆ’ ಎಂದು ಹೇಳುತ್ತಾರೆ ಆದರ್ಶ್.

ಆದರೆ, ನಿರ್ದೇಶಕರು ಹೊಸಬರಾಗಿದ್ದಾಗ ತುಸು ಬೇರೆಯ ಅನುಭವ ಅವರಿಗೆ ಆಗಬಹುದು ಎಂದು ಅವರು ಹೇಳುತ್ತಾರೆ. ‘ನಾನು ಮೊದಲು ಶುದ್ಧಿ ಸಿನಿಮಾ ಮಾಡಿದ್ದೆ. ಆದರೆ ಶುದ್ಧಿ ಸಿನಿಮಾ ನನಗೆ ಕಮರ್ಷಿಯಲ್ ಯಶಸ್ಸು ತರಲಿಲ್ಲ. ಒಂದು ವರ್ಗದ ವೀಕ್ಷಕರಿಗೆ ಮಾತ್ರ ಅದು ಇಷ್ಟವಾಗಿತ್ತು. ಜನಪ್ರಿಯ ನಿರ್ದೇಶಕರ ಸಿನಿಮಾ ಅಲ್ಲದಿದ್ದರೆ ಒಟಿಟಿ ವೇದಿಕೆಗಳವರು, ವ್ಯಕ್ತಿಯ ಹೆಸರನ್ನು ದೊಡ್ಡದಾಗಿ ಬಿಂಬಿಸುವುದಿಲ್ಲ. ಅವರು ಸಿನಿಮಾ ಹೆಸರನ್ನು ದೊಡ್ಡದಾಗಿ ಬಿಂಬಿಸುತ್ತಾರೆ. ಸಂಖ್ಯೆಯ ದೃಷ್ಟಿಯಿಂದ ಹೇಳುವುದಾದರೆ ಕನ್ನಡದ ದೊಡ್ಡ ಹಿಟ್ ಸಿನಿಮಾವನ್ನು ಎಷ್ಟು ಜನ ನೋಡುತ್ತಿದ್ದರೋ, ನಾನು ಮಾಡಿರುವ ಸಿನಿಮಾವನ್ನು ಕೂಡ ಸರಿಸುಮಾರು ಅಷ್ಟೇ ಸಂಖ್ಯೆಯ ಜನ ಈ ವೇದಿಕೆಯ ಮೂಲಕ ವೀಕ್ಷಣೆ ಮಾಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಶುದ್ಧಿ ಸಿನಿಮಾ ಕಮರ್ಷಿಯಲ್‌ ಆಗಿ ಬಹುದೊಡ್ಡ ಯಶಸ್ಸು ಗಳಿಸಿದ್ದಿದ್ದರೆ,ತಮ್ಮ ಎರಡನೆಯ ಸಿನಿಮಾ ಒಟಿಟಿ ವೇದಿಕೆಗಳಲ್ಲಿ ಇನ್ನೂ ಹೆಚ್ಚು ಹೆಸರು ಸಂಪಾದಿಸಿಕೊಳ್ಳುತ್ತಿತ್ತು ಎನ್ನುವುದು ಆದರ್ಶ್ ಅವರ ನಂಬಿಕೆ. ‘ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನ ಆಗಿರುವ ಸಿನಿಮಾದ ನಿರ್ದೇಶಕರೊಬ್ಬರು, ನಾವೆಲ್ಲ ಒಟಿಟಿ ವೇದಿಕೆಗಳಿಗೆ ಸಿನಿಮಾ ಮಾಡುತ್ತ ಕುಳಿತರೆ ನಾವೇ ಒಂದು ಬ್ರ್ಯಾಂಡ್ ಆಗಿ ಬೆಳೆಯುವುದು ಯಾವಾಗ ಎನ್ನುವ ಪ್ರಶ್ನೆ ಎತ್ತಿದ್ದರು. ಇದು ಗಮನಾರ್ಹ’ ಎಂದು ಹೇಳಿದರು.

‘ಕನ್ನಡದ ಕೆಜಿಎಫ್‌, ತೆಲುಗಿನ ಬಾಹುಬಲಿ... ಇಂತಹ ಸಿನಿಮಾಗಳನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಇವುಗಳನ್ನು ನೇರವಾಗಿ ಒಟಿಟಿ ಮೂಲಕ ಬಿಡುಗಡೆ ಮಾಡುವುದು ಸಾಧ್ಯವೇ ಇಲ್ಲ ಎನ್ನಬಹುದು. ದೊಡ್ಡ ಬಜೆಟ್‌ನ ಸಿನಿಮಾಗಳನ್ನು, ಅಷ್ಟೊಂದು ದುಡ್ಡು ಕೊಟ್ಟು ಒಟಿಟಿ ವೇದಿಕೆಗಳವರು ಖರೀದಿ ಮಾಡುತ್ತಾರೆಯೇ ಎಂಬ ಪ್ರಶ್ನೆ ಇದೆ. ಹಾಗೆಯೇ, ಸಿನಿಮಾ ಮಂದಿರಗಳಲ್ಲೇ ನೋಡಬೇಕಿರುವ ಸಿನಿಮಾಗಳನ್ನು ಒಟಿಟಿ ಮೂಲಕ ಬಿಡುಗಡೆ ಮಾಡಿ ಪ್ರಯೋಜನ ಇಲ್ಲ’ ಎನ್ನುವ ವಿವರಣೆ ನೀಡಿದರು.

ಲಾಕ್‌ಡೌನ್‌ ಸಂದರ್ಭಗಳಲ್ಲಿಒಳ್ಳೆಯ ಹೂರಣವನ್ನೇ ನೆಚ್ಚಿಕೊಂಡು ಸಿದ್ಧವಾಗುವ ಸಿನಿಮಾಗಳನ್ನು ಒಟಿಟಿ ಮೂಲಕ ಬಿಡುಗಡೆ ಮಾಡಬಹುದು. ಅಂತಹ ಸಿನಿಮಾಗಳಿಗೆ ಒಟಿಟಿಯೇ ಸೂಕ್ತ ವೇದಿಕೆ ಎಂದ ಆದರ್ಶ್, ‘ಈಗ ಲಾಕ್‌ಡೌನ್‌ ಪರಿಸ್ಥಿತಿ ಎದುರಾಗಿರುವ ಹೊತ್ತಿನಲ್ಲಿ, ಒಟಿಟಿಗೆ ಎಂದು ತಕ್ಷಣಕ್ಕೆ ಸಿನಿಮಾ ಮಾಡಲು ಸಾಧ್ಯವಿಲ್ಲ’ ಎಂಬ ಮಾತನ್ನು ಸೇರಿಸಿದರು.

‘ಅತ್ಯದ್ಭುತ ಕಥೆ, ದೊಡ್ಡ ಗುಣಮಟ್ಟದ ಸಿನಿಮಾವನ್ನು ಒಟಿಟಿ ವೇದಿಕೆಗಾಗಿ ಮಾಡುವ ಉದ್ದೇಶ ಇದ್ದರೆ, ಆ ಸಿನಿಮಾ ಬಜೆಟ್ ₹ 70ರಿಂದ ₹ 80 ಲಕ್ಷ ಇರಬೇಕು. ಆಗ, ಒಟಿಟಿ ವೇದಿಕೆಗಳಿಂದ ಸಿಗುವ ಹಣದಲ್ಲಿ ಒಂದಿಷ್ಟು ಲಾಭವನ್ನು ಕಾಣಬಹುದು’ ಎಂದು ಹೇಳುತ್ತಾರೆ ನಿರ್ದೇಶಕರೊಬ್ಬರು.

ಸಿನಿಮಾವನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬುದನ್ನು ಆಧರಿಸಿ, ನಿರ್ಮಾಪಕರಿಗೆ ಹಣ ಪಾವತಿ ಮಾಡುವ ವ್ಯವಸ್ಥೆ ಕನ್ನಡದಲ್ಲಿ ಇನ್ನೂ ಬಂದಿಲ್ಲ ಎನ್ನುತ್ತವೆ ಸಿನಿಮಾ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.