
ಮಲಯಾಳದ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದಲ್ಲಿ ‘ಕಲಕಾತ..’ ಎಂಬ ಹಾಡೊಂದನ್ನು ಹಳ್ಳಿಯೊಂದರ ವೃದ್ಧೆ ನಂಜಿಯಮ್ಮ ಹಾಡಿದ್ದರು. ಇದು ಸಾಕಷ್ಟು ಜನಪ್ರಿಯವಾಗಿತ್ತು. ಇದೀಗ ಕನ್ನಡದಲ್ಲೂ ಇಂತಹ ಪ್ರಯತ್ನವೊಂದು ನಡೆದಿದೆ.
ಗಾಯಕನಾಗಿ ಗುರುತಿಸಿಕೊಂಡಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಚಿತ್ರ ‘ಲೋ ನವೀನ’ ರಿಲೀಸ್‌ಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ‘ಕೋಣಾಣೆ’ ಎಂಬ ಹಾಡು ಬಿಡುಗಡೆಯಾಗಿದೆ. ಅಪ್ಪಟ ಜನಪದ ಶೈಲಿಯ ಈ ಹಾಡನ್ನು ಮೈಸೂರಿನ ಎಚ್.ಡಿ.ಕೋಟೆಯ ಚಮ್ಮಮ್ಮ ಹಾಗೂ ಲಕ್ಷ್ಮಮ್ಮ ಎಂಬುವವರು ಹಾಡಿದ್ದಾರೆ. ನವೀನ್ ಸಜ್ಜು ಕೂಡಾ ಗಾಯನಕ್ಕೆ ಜೊತೆಯಾಗಿದ್ದಾರೆ.
‘ಮೂಲತಃ ಮಳವಳ್ಳಿಯವನಾದ ನಾನು, ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದೆ. ನಾನು, ಸುನೀಲ್ ಮೈಸೂರು ಹಾಗೂ ಅನೇಕ ಸ್ನೇಹಿತರು ಸೇರಿ ಮನರಂಜನೆಯೇ ಪ್ರಧಾನವಾಗಿರುವ ಈ ಚಿತ್ರದ ಕಥೆ ಬರೆದಿದ್ದೇವೆ. ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ನಾನೇ ಸಂಗೀತ ಸಂಯೋಜಿಸಿರುವ ಐದು ಹಾಡುಗಳು ಈ ಚಿತ್ರದಲ್ಲಿದ್ದು, ಮೊದಲ ಹಾಡಾಗಿ ‘ಕೋಣಾಣೆ’ ಬಿಡುಗಡೆಯಾಗಿದೆ. ಚಿತ್ರೀಕರಣಕ್ಕಾಗಿ ಸುತ್ತಾಡುತ್ತಿದ್ದೆವು. ಎಚ್.ಡಿ.ಕೋಟೆಯ ಹಿರೇನಂದಿ ಗ್ರಾಮಕ್ಕೆ ಹೋಗಿದ್ದಾಗ ಅಲ್ಲಿ ಚಮ್ಮಮ್ಮ ಹಾಗೂ ಲಕ್ಷ್ಮಮ್ಮ ಅವರು ಹೊಲದಲ್ಲಿ ಕೆಲಸ ಮಾಡುತ್ತಾ ಹಾಡುತ್ತಿದ್ದುದ್ದನ್ನು ನೋಡಿದೆ. ಇವರಿಂದ ನಮ್ಮ ಚಿತ್ರದ ಹಾಡೊಂದನ್ನು ಹಾಡಿಸಬೇಕು ಎಂದು ನಿರ್ಧರಿಸಿದೆ. ಅಂದುಕೊಂಡಂತೆ ಅವರಿಂದಲೇ ಈ ಹಾಡು ಹಾಡಿಸಿದ್ದೇನೆ’ ಎಂದರು ನವೀನ್ ಸಜ್ಜು.
ಅನಿವಾಸಿ ಭಾರತೀಯರಾದ ಬೆನ್ ಚಿಕ್ಕಸ್ವಾಮಿ ಅರ್ಪಿಸುವ, ಕೀರ್ತಿಸ್ವಾಮಿ ನಿರ್ಮಿಸಿರುವ ಈ ಚಿತ್ರವನ್ನು ಧನುರ್ಧಾರಿ ಪವನ್ ನಿರ್ದೇಶಿಸಿದ್ದಾರೆ. ಇದು ಇವರು ನಿರ್ದೇಶಿಸಿರುವ ಮೊದಲ ಸಿನಿಮಾ. ರಿಷಿಕೇಶ್ ಛಾಯಾಚಿತ್ರಗ್ರಹಣ ಸಿನಿಮಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.