ADVERTISEMENT

10ಕ್ಕೆ ‘ಲೌಡ್‌ ಸ್ಪೀಕರ್‌’ ಸೌಂಡು!

ಸತೀಶ ಬೆಳ್ಳಕ್ಕಿ
Published 6 ಆಗಸ್ಟ್ 2018, 19:30 IST
Last Updated 6 ಆಗಸ್ಟ್ 2018, 19:30 IST
ಡಾ. ದಿಶಾ ದಿನಕರ್‌
ಡಾ. ದಿಶಾ ದಿನಕರ್‌   

ಮೊಬೈಲ್‌ನ ‘ಲೌಡ್‌ ಸ್ಪೀಕರ್‌’ ಆನ್‌ ಮಾಡಿ ಮಾತನಾಡಿದರೆ ಏನೆಲ್ಲಾ ಆಗುತ್ತದೆ ಅಥವಾ ಏನೆಲ್ಲಾ ಆಗಬಹುದು, ಒಂದು ಕ್ಷಣ ಯೋಚಿಸಿ... ಹೀಗಂತ ಹೇಳಿ ಒಂದು ಕ್ಷಣ ಸುಮ್ಮನಾದರು ನಾಯಕನಟಿ ಡಾ. ದಿಶಾ ದಿನಕರ್‌. ಮತ್ತೇ ಮಾತು ಆರಂಭಿಸಿದ ಅವರು, ‘ಇದೇ ನಮ್ಮ ಸಿನಿಮಾದ ಒನ್‌ ಲೈನ್‌ ಸ್ಟೋರಿ’ ಅಂತ ಹೇಳಿ ನಕ್ಕರು.

ಮಸ್ಕತ್‌ನಲ್ಲಿ ಹುಟ್ಟಿ ಬೆಳೆದು, ಚಂದನವನದಲ್ಲಿ ನಟನಾ ಕಂಪು ಬೀರುತ್ತಿರುವ ಡಾ. ದಿಶಾ ದಿನಕರ್‌ ತಮ್ಮ ಬಹು ನಿರೀಕ್ಷಿತ ಸಿನಿಮಾ ‘ಲೌಡ್‌ ಸ್ಪೀಕರ್‌’ ಚಿತ್ರದ ಬಗ್ಗೆ ತುಂಬ ಉತ್ಸಾಹದಿಂದಲೇ ಮಾತನಾಡಿದರು.

‘ಲೌಡ್‌ ಸ್ಪೀಕರ್‌’ ಪ‍ಕ್ಕಾ ಪೈಸಾ ವಸೂಲ್‌ ಸಿನಿಮಾ. ಡಾರ್ಕ್‌ ಕಾಮಿಡಿ ಜಾನರ್‌ನ ಚಿತ್ರ ಇದು. ಈ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ನೀಡುವುದರ ಜತೆಗೆ ಒಂದು ಸಾಮಾಜಿಕ ಸಂದೇಶವನ್ನೂ ದಾಟಿಸುತ್ತದೆ. ಈಗಿನ ದಿನಮಾನದಲ್ಲಿ ತಂತ್ರಜ್ಞಾನವೆಂಬುದು ಕಲ್ಪನೆಗೂ ನಿಲುಕದಷ್ಟು ವಿಸ್ತಾರವಾಗಿ ನಮ್ಮನ್ನು ಆವರಿಸಿಕೊಂಡಿದೆ. ಅದೇರೀತಿ ಮೊಬೈಲ್‌ ಕೂಡ ನಮ್ಮ ಜೀವನದೊಂದಿಗೆ ಹಾಸುಹೊಕ್ಕಾಗಿದೆ. ಮೊಬೈಲ್‌ ಎಂಬುದು ಒಂದು ಫೋನ್‌ ಅಷ್ಟೇ ಅಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ಖಾಸಗಿ ವಿಚಾರಗಳ ಖಜಾನೆಯೂ ಹೌದು. ಮಾತುಕತೆಗಳೂ ಕೂಡ ಗೌಪ್ಯವಾಗಿಯೇ ನಡೆಯುತ್ತವೆ. ಈ ಎಳೆ ಇಟ್ಟುಕೊಂಡು ‘ಲೌಡ್‌ ಸ್ಪೀಕರ್‌’ ಸಿನಿಮಾ ಮಾಡಲಾಗಿದೆ. ಎಲ್ಲ ವಯೋಮಾನದವರೂ ಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದ ಸಿನಿಮಾ ಇದು. ನಾನು ವೃತ್ತಿಯಿಂದ ವೈದ್ಯೆ. ‘ಲೌಡ್‌ ಸ್ಪೀಕರ್‌’ ಸಿನಿಮಾದಲ್ಲೂ ಕೂಡ ಡಾ. ನಂದಿನಿ ಎಂಬ ವೈದ್ಯೆಯ ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಸಿನಿಮಾದಲ್ಲಿ ಮೂವರು ನಾಯಕರು, ಮೂವರು ನಾಯಕಿಯರಿದ್ದು, ಸುಮಂತ್‌ ಭಟ್‌ ನನ್ನ ಜತೆಗೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟರಾದ ದತ್ತಣ್ಣ ಮತ್ತು ರಂಗಾಯಣ ರಘು ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ’ ಎಂದರು.

ADVERTISEMENT

‘ಈ ಸಿನಿಮಾದಲ್ಲಿ ಇರುವುದು ಒಂದೇ ಒಂದು ಗೀತೆ. ಆ ಗೀತೆಯನ್ನು ರ‍್ಯಾಪ್‌ ಸ್ಟಾರ್‌ ಚಂದನ್‌ ಶೆಟ್ಟಿ ಹಾಡಿದ್ದಾರೆ. ‘ಚಡ್ಡಿ ಒಳಗೆ ಇರುವೆ ಬಿಟ್ಕೊಳಿ’ ಎಂಬ ಸಾಹಿತ್ಯ ಇರುವ ಈ ಗೀತೆಯನ್ನು ಯೂಟ್ಯೂಬ್‌ನಲ್ಲಿ ಈಗಾಗಲೇ 15 ಲಕ್ಷ ಜನ ವೀಕ್ಷಿಸಿದ್ದಾರೆ. ಚಿತ್ರಗೀತೆಯನ್ನು ಮೆಚ್ಚಿಕೊಂಡು ಕೆಲವರು ಲೈಕ್‌ ಮಾಡಿದ್ದರೆ; ಇನ್ನು ಕೆಲವರು ಡಬಲ್‌ ಮೀನಿಂಗ್‌ ಸಾಹಿತ್ಯವಿರುವ ಈ ಗೀತೆಯ ಬಗ್ಗೆ ತಮ್ಮ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಏನೇ ಆದರೂ ರ‍್ಯಾಪ್‌ ಸ್ಟಾರ್‌ ಚಂದನ್‌ ಶೆಟ್ಟಿ ಧ್ವನಿ ಯುವಜನತೆಯನ್ನು ಆಕರ್ಷಿಸಿದೆ’ ಎನ್ನುತ್ತಾರೆ ಡಾ. ದಿಶಾ.

ಮೈಮ್‌ ಪರಿಕಲ್ಪನೆಯನ್ನು ಇರಿಸಿಕೊಂಡು ಬಿಡುಗಡೆ ಮಾಡಿದ ‘ಲೌಡ್‌ ಸ್ಪೀಕರ್‌’ ಚಿತ್ರದ ಪೋಸ್ಟರ್‌ಗಳ ಬಗ್ಗೆ ಈ ಹಿಂದೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅದರ ನಂತರ ಬಿಡುಗಡೆ ಮಾಡಿದ, ಚಿತ್ರದ ಗೀತೆಯ ಬಗ್ಗೆ ಈಗ ಮಿಶ್ರ ‍ಪ್ರತಿಕ್ರಿಯೆಗಳು ಬರುತ್ತಿವೆ. ಅಂದಹಾಗೆ, ಈ ಹಿಂದೆ ‘ಮಳೆ’ ಎಂಬ ರೊಮ್ಯಾಂಟಿಕ್‌ ಲವ್‌ಸ್ಟೋರಿ ಇರುವ ಕನ್ನಡ ಸಿನಿಮಾವನ್ನು ನಿರ್ದೇಶಿಸಿದ್ದ ಶಿವ್‌ ತೇಜಸ್‌ ಈ ಚಿತ್ರದ ನಿರ್ದೇಶಕರು. ಡಾ. ರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಇದೇ 10ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ.

‘ಹಿರಿಯ ಕಲಾವಿದರನ್ನು ಹೊರತುಪಡಿಸಿದರೆ ಬಹುತೇಕ ಹೊಸ ಮುಖಗಳೇ ಇರುವ ಈ ಸಿನಿಮಾ ಬಗ್ಗೆ ಇಡೀ ಗಾಂಧಿನಗರ ಕುತೂಹಲದ ಕಣ್ಣಿನಿಂದ ನೋಡುತ್ತಿದೆ. ನಮ್ಮ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ’ ಇದೆ ಎನ್ನುವಾಗ ಡಾ. ದಿಶಾ ದಿನಕರ್‌ ಕಣ್ಣುಗಳಲ್ಲಿ ಜೋಡಿ ದೀಪಗಳ ಪ್ರಕಾಶವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.