ADVERTISEMENT

ಗಲ್ಲಿ ಬೇಕರಿಯಲ್ಲಿ ಪ್ರೀತಿಯ ಬೆಸುಗೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 19:30 IST
Last Updated 5 ನವೆಂಬರ್ 2018, 19:30 IST
‘ಗಲ್ಲಿ ಬೇಕರಿ’ ಚಿತ್ರದಲ್ಲಿ ಸಂತೋಷ್
‘ಗಲ್ಲಿ ಬೇಕರಿ’ ಚಿತ್ರದಲ್ಲಿ ಸಂತೋಷ್   

ಎಷ್ಟೋ ವರ್ಷಗಳಿಂದ ಹೊರದೇಶಗಳಲ್ಲಿ ನೆಲೆಸಿರುವಂತಹ ಒಂದಿಷ್ಟು ಕನ್ನಡಿಗರು ಭಾಷೆಯ ಅಭಿಮಾನದ ಮೇಲೆ ಕನ್ನಡ ಚಿತ್ರಗಳಿಗೆಇತ್ತೀಚಿನ ದಿನಗಳಲ್ಲಿ ಹಣ ಹೂಡುತ್ತಿದ್ದಾರೆ. ಅಂತಹವರ ಪೈಕಿ ಕತಾರ್‌ನಲ್ಲಿ ನೆಲೆಸಿದ್ದ ಮಂಗಳೂರಿನ ಮಹ್ಮದ್‍ ಮುಸ್ತಾಫ ಒಬ್ಬರು. ಅವರು ‘ಗಲ್ಲಿ ಬೇಕರಿ’ ಎನ್ನುವ ಸಿನಿಮಾವನ್ನು ನಿರ್ಮಿಸಿದ್ದಾರೆ.

ಗಲ್ಲಿಯೊಂದರಲ್ಲಿನ ಬೇಕರಿಯಲ್ಲಿ ಕೆಲಸ ಮಾಡುವ ಹುಡುಗ ಹಾಗೂ ಅದೇ ಏರಿಯಾದ ಪೊಲೀಸ್‌ ಅಧಿಕಾರಿಯ ಮಗಳ ನಡುವಿನ ಪ್ರೇಮಕಥೆಯನ್ನು ಈ ಸಿನಿಮಾದಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ. ನಿಮ್ ಏರಿಯಾ ಕಥೆ ಎಂಬ ಅಡಿಬರಹವು ಚಿತ್ರದ ಹೆಸರಿಗಿದೆ.

ಜಯಕರ್ನಾಟಕ ಸಂಘವನ್ನು ಚಿತ್ರಕ್ಕೆ ಎಳೆತಂದಿರುವ ನಿರ್ದೇಶಕರು ನಾಪತ್ತೆಯಾಗುವ ನಾಯಕನನ್ನು ಹುಡುಕಿಕೊಡುವ ಜವಾಬ್ದಾರಿಯನ್ನು ಆ ಸಂಘಕ್ಕೆ ವಹಿಸಿದ್ದಾರೆ. ಸಂಘಕ್ಕೆ ಅಂತಲೇ ಒಂದು ಹಾಡನ್ನು ರಚಿಸಿ 20 ಜಿಲ್ಲೆಗಳಲ್ಲಿ ಸೆರೆ ಹಿಡಿಯಲಾಗಿದೆ. ತಮಿಳು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ವಿ.ಆರ್.ಕೆ. ರಾಧಾಕೃಷ್ಣ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ.

ADVERTISEMENT

ಬೇಕರಿಯಲ್ಲಿ ಕೆಲಸ ಮಾಡುವ ಸಂತೋಷ್ ಅವರಿಗೆ ಇದು ನಾಯಕನಾಗಿ ಐದನೇ ಚಿತ್ರ. ಆರ್ಯನ್ ಉಪನಾಯಕ. ಪ್ರಜ್ವಲ್‍ ಪೂವಯ್ಯ ನಾಯಕಿ. ಈಕೆಯ ತಂದೆ ಪಾತ್ರದಲ್ಲಿ ಸುಚೇಂದ್ರಪ್ರಸಾದ್, ಹೆಂಡತಿಯಾಗಿ ಯಮುನಾ ಶ್ರೀನಿಧಿ ಕಾಣಿಸಿಕೊಂಡಿದ್ದಾರೆ. ಬೇಕರಿ ಮಾಲೀಕರಾಗಿ ರಮೇಶ್‍ಭಟ್ ನಟಿಸಿದ್ದು, ಖಳನಾಗಿ ಉಗ್ರಂ ಮಂಜು ನಟನೆ ಇದೆ.

ಚಿತ್ರದ ಹಾಡುಗಳನ್ನು ಈಚೆಗೆ ಬಿಡುಗಡೆ ಮಾಡಲಾಗಿದೆ. ಆಡಿಯೊ ಸಿಡಿ ಬಿಡುಗಡೆ ಮಾಡಿದ ಲಹರಿವೇಲು, ‘ಎರಡು ದಿನದ ಹಿಂದೆ ತಂಡವು ಸಂಸ್ಥೆಗೆ ಭೇಟಿ ನೀಡಿ ಹಾಡುಗಳನ್ನು ತೆಗೆದುಕೊಳ್ಳಲು ಕೋರಿದರು. ಯಾವುದೇ ನಿರ್ಮಾಪಕರು ಬಂದರೆ, ಅವರನ್ನು ವಾಪಸ್ಸು ಕಳುಹಿಸುವುದಿಲ್ಲ. ರಾಜಮೌಳಿ ಕುಳಿತಂಥ ಕುರ್ಚಿಯಲ್ಲಿ ಅವರನ್ನು ಕೂರಿಸಿ ಆಡಿಯೊ ಹಕ್ಕನ್ನು ಖರೀದಿಸಲಾಗಿದೆ’ ಎಂದರು.

ಸಂಗೀತ ನಿರ್ದೇಶಕ ಸುನಾದ್‍ಗೌತಂ, ನಿರ್ಮಾಪಕರು, ಜಯ ಕರ್ನಾಟಕ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.