ಸೋನಲ್ ಮೊಂತೆರೊ, ವಿರಾಟ ಬಿಲ್ವ ಜತೆಯಾಗಿ ನಟಿಸಿರುವ ‘ಲವ್ ಮ್ಯಾಟ್ರು’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವಿರಾಟ ಬಿಲ್ವ ನಿರ್ದೇಶನದ ಈ ಚಿತ್ರ ಆ.1ರಂದು ತೆರೆಗೆ ಬರಲಿದೆ.
‘ಒಂದು ವಿಭಿನ್ನ ಪ್ರೇಮಕಥೆಯನ್ನು ತೆರೆಯ ಮೇಲೆ ತೋರಿಸುವುದು ನಮ್ಮ ಉದ್ದೇಶ. ಪ್ರೇಕ್ಷಕರು ಸುಲಭವಾಗಿ ಊಹಿಸುವಂತೆ ಇರುವುದಿಲ್ಲ ಚಿತ್ರಕಥೆ. ನಾನು ಈ ಮೊದಲು ರಂಗಭೂಮಿ, ಕಿರುತೆರೆಗಳಲ್ಲಿ ಕೆಲಸ ಮಾಡಿದ್ದೆ. ಸಹಾಯಕ ನಿರ್ದೇಶಕನಾಗಿ ಕೆ.ಎಂ.ಚೈತನ್ಯ, ಸುಕ್ಕಾ ಸೂರಿ, ಪ್ರಶಾಂತ್ ನೀಲ್ ಅವರ ಸಿನಿಮಾಗಳಲ್ಲಿ ಕೆಲಸ ಮಾಡಿರುವೆ. ‘ಕಡ್ಡಿಪುಡಿ’ ಚಿತ್ರದಲ್ಲಿ ನಟಿಸಿದ್ದೆ. ಈ ಎಲ್ಲ ಅನುಭವ ಇಟ್ಟುಕೊಂಡು ಸ್ವತಂತ್ರ ನಿರ್ದೇಶಕನಾಗಿರುವೆ’ ಎಂದರು ನಿರ್ದೇಶಕರು.
ವಂದನಾ ಪ್ರಿಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಲವ್ ಮ್ಯಾಟ್ರು’ ಶೀರ್ಷಿಕೆಯೇ ಹೇಳುವಂತೆ ಪ್ರೇಮಕಥೆಯ ಚಿತ್ರ. ಕಥಾವಸ್ತು ಬಹಳ ಕುತೂಹಲಕಾರಿಯಾಗಿದೆ. ಎರಡು ಕಾಲಘಟ್ಟಗಳ ಪಯಣ ಇರುವ ಚಿತ್ರ. ನಾನು ಪ್ರೇಮಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದರು ಸೋನಲ್.
ಅಚ್ಯುತ್ ಕುಮಾರ್, ಅನಿತಾ ಭಟ್, ಸುಮನ್ ರಂಗನಾಥ್ ಮುಂತಾದವರು ಚಿತ್ರದಲ್ಲಿದ್ದಾರೆ. ಸೋಲಮಾನ್ ಸಂಗೀತ, ಪರಮ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.