ADVERTISEMENT

ಮುತ್ತಿನ ನಗರಿಗೆ ಮದಕರಿ ನಾಯಕ ತಂಡ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 19:30 IST
Last Updated 4 ಮಾರ್ಚ್ 2020, 19:30 IST
   

ಸಾಹಿತ್ಯ ಕೃತಿ ಆಧಾರಿತ ಸಿನಿಮಾ ಮಾಡುವುದು ಸವಾಲಿನ ಕೆಲಸ ಎಂಬುದು ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತು. ಇತ್ತೀಚೆಗೆ ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆಯೂ ಕಡಿಮೆಯಾಗಿದೆ. ಇದರ ನಡುವೆಯೇ ನಿರ್ಮಾಣವಾಗುತ್ತಿರುವ ಸಾಹಿತಿ ಬಿ.ಎಲ್‌. ವೇಣು ಅವರ ಕಾದಂಬರಿ ಆಧಾರಿತ ಐತಿಹಾಸಿಕ ‘ರಾಜವೀರ ಮದಕರಿನಾಯಕ’ ಚಿತ್ರ ಕುತೂಹಲ ಹೆಚ್ಚಿಸಿದೆ.

ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು. ನಟ ದರ್ಶನ್‌ ಮದಕರಿನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಡಿಸೆಂಬರ್‌ನಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ನೆರವೇರಿಸಿದ್ದ ಚಿತ್ರತಂಡ ಕೇರಳದ ತ್ರಿಶೂರ್‌ ಜಿಲ್ಲೆಯ ಚಾಲುಕುಡಿ ಜಲಪಾತ ಪ್ರದೇಶದಲ್ಲಿ ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಈಗ ಮಾರ್ಚ್‌ 15ರಿಂದ ಹೈದರಾಬಾದ್‌ನಲ್ಲಿ ಶೂಟಿಂಗ್‌ ನಡೆಸಲು ಸಿದ್ಧತೆ ನಡೆಸಿದೆ.

‘ಒಟ್ಟು ಹದಿನೈದು ದಿನಗಳ ಕಾಲ ಚಾಲುಕುಡಿಯಲ್ಲಿ ಚಿತ್ರೀಕರಣ ನಡೆಸಿದೆವು. ಜಲಪಾತ ಪ್ರದೇಶದಿಂದ ಜಿಮ್‌ 40 ಕಿ.ಮೀ. ದೂರದಲ್ಲಿತ್ತು. ಪ್ರತಿದಿನವೂ ದರ್ಶನ್‌ ಅಲ್ಲಿಗೆ ತೆರಳಿ ಕಸರತ್ತು ನಡೆಸಿ ಮತ್ತೆ ಚಿತ್ರೀಕರಣ ಸ್ಥಳಕ್ಕೆ ವಾಪಾಸಾಗುತ್ತಿದ್ದರು. ಜಲಪಾತದ ಒಂದು ಸಾವಿರ ಅಡಿಯಷ್ಟು ಕೆಳಭಾಗದಲ್ಲಿ ಶೂಟಿಂಗ್‌ ನಡೆಸಲಾಗಿದೆ. ಪ್ರತಿದಿನವೂ ಅಲ್ಲಿಗೆ ಇಳಿದು, ಹತ್ತಬೇಕಿತ್ತು. ಅಲ್ಲಿ ಸೆಖೆಯೂ ಹೆಚ್ಚಿತ್ತು. ದರ್ಶನ್‌ ಅವರ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ’ ಎಂದು ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ‘ಪ್ರಜಾಪ್ಲಸ್‌’ಗೆ ವಿವರಿಸಿದರು.

ADVERTISEMENT

‘ಇನ್ನೂ ಚಿತ್ರದ ನಾಯಕಿಯ ಆಯ್ಕೆ ಅಂತಿಮಗೊಂಡಿಲ್ಲ. ಹಂತ ಹಂತವಾಗಿ ಪಾತ್ರಗಳ ಆಯ್ಕೆ ಮಾಡಲಾಗುವುದು’ ಎನ್ನುತ್ತಾರೆ ಅವರು.

ರಾಜಸ್ಥಾನದಲ್ಲಿ ಮೂವತ್ತು ವರ್ಷದ ಹಿಂದೆ ರಾಜೇಂದ್ರಸಿಂಗ್‌ ಬಾಬು ಅವರು ‘ಮುತ್ತಿನಹಾರ’ ಚಿತ್ರದ ಶೂಟಿಂಗ್‌ ನಡೆಸಿದ್ದರು. ಈ ಸ್ಥಳದಲ್ಲಿಯೂ ‘ಮದಕರಿನಾಯಕ...’ ಚಿತ್ರದ ಶೂಟಿಂಗ್‌ ನಡೆಸಲು ಅವರು ಸಿದ್ಧತೆ ನಡೆಸಿದ್ದಾರಂತೆ. ಈಗಾಗಲೇ, ಆ ಸ್ಥಳಗಳಿಗೂ ಅವರು ಭೇಟಿ ನೀಡಿದ್ದಾರೆ. ಹೈದರಾಬಾದ್‌ನಲ್ಲಿ ಶೂಟಿಂಗ್‌ ಪೂರ್ಣಗೊಳಿಸಿದ ಬಳಿಕ ಚಿತ್ರತಂಡ ರಾಜಸ್ಥಾನಕ್ಕೆ ತೆರಳುವ ಸಾಧ್ಯತೆಯಿದೆ.

ರಾಕ್‌ಲೈನ್‌ ವೆಂಕಟೇಶ್‌ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ನಟಿ ಸುಮಲತಾ ಅಂಬರೀಷ್‌ ರಾಜಮಾತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಂಸಲೇಖ ಸಂಗೀತ ನೀಡಿದ್ದಾರೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.