ADVERTISEMENT

ಹಲ್ಲೆ ನಡೆಸಿ ಖಾಸಗಿ ವಿಡಿಯೊ ‌ಚಿತ್ರೀಕರಿಸಿಲ್ಲ: ನಟ ಮಡೆನೂರು ಮನು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2025, 15:11 IST
Last Updated 27 ಮೇ 2025, 15:11 IST
ಮಡೆನೂರು ಮನು 
ಮಡೆನೂರು ಮನು    

ಬೆಂಗಳೂರು: ತನ್ನ ವಿರುದ್ಧ ಅತ್ಯಾಚಾರ ಆರೋಪದ ಅಡಿ ದೂರು ನೀಡಿರುವ ಸಹ ನಟಿ ಐದು ವರ್ಷದ ಹಿಂದೆಯೇ ಪರಿಚಯವಾಗಿದ್ದರು. ಆಕೆಗೆ ಬಾಡಿಗೆ ಮನೆ ಹುಡುಕಿಕೊಡಲು ನೆರವು ನೀಡಿದ್ದು ನಿಜ. ಆದರೆ, ಆಕೆಯ ಮೇಲೆ ಯಾವುದೇ ರೀತಿಯಲ್ಲೂ ದೌರ್ಜನ್ಯ ಎಸಗಿಲ್ಲ ಎಂಬುದಾಗಿ ನಟ ಮಡೆನೂರು ಮನು ಅವರು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ. 

ಅತ್ಯಾಚಾರ ಆರೋಪದ ಅಡಿ ಮಡೆನೂರು ಮನು ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು. ಈ ವೇಳೆ ಆರೋಪಿಯ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ. ಸದ್ಯ ಆರೋಪಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

‘ದೂರು ನೀಡಿರುವ ಮಹಿಳೆಯನ್ನು ಮದುವೆ ಆಗಿಲ್ಲ. ಅವರ ಆಪಾದನೆ ಸುಳ್ಳು. ಕಳೆದ ಮೇ 17ರಂದು ಬೆಂಗಳೂರಿನ ನಾಗರಬಾವಿಯಲ್ಲಿ ಭೇಟಿಯಾಗಿದ್ದು ನಿಜ. ಯಾವುದೇ ರೀತಿಯಾಗಿ ಹಲ್ಲೆ ಮಾಡಿ ಖಾಸಗಿ ವಿಡಿಯೊ ‌ಚಿತ್ರೀಕರಿಸಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

ADVERTISEMENT

‘ದೂರುದಾರೆ ಪರಿಚಯ ಆಗುವುದಕ್ಕೂ ಮುನ್ನವೇ ನನಗೆ ಮದುವೆ ಆಗಿತ್ತು. ಈ ವಿಚಾರವೂ ಆಕೆಗೂ ತಿಳಿದಿತ್ತು. ನನ್ನ ಕುಟುಂಬಸ್ಥರಿಗೂ ಆಕೆಯ ಪರಿಚಯವಿದೆ’ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾರೆ.

ಎಫ್‌ಎಸ್‌ಎಲ್‌ಗೆ ರವಾನೆ:
‘ದೂರುದಾರೆ ಹಾಗೂ ಆರೋಪಿಯ ಮೊಬೈಲ್‌ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. ಇಬ್ಬರ ವಾಟ್ಸ್‌ಆ್ಯಪ್‌ ಚಾಟ್​ನಲ್ಲಿ ಯಾವುದೇ ಅಶ್ಲೀಲ ಫೋಟೊ, ವಿಡಿಯೊ ಪತ್ತೆಯಾಗಿಲ್ಲ. ಎರಡೂ ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್‌) ರವಾನೆ ಮಾಡಲಾಗಿದೆ. ದತ್ತಾಂಶ ಮರು ಸಂಗ್ರಹಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೊ ಹಾಗೂ ಫೋಟೊಗಳು ಪತ್ತೆಯಾದಲ್ಲಿ ಆರೋಪಿಯನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.